ಕರಾವಳಿ ಟಾಪ್ ನ್ಯೂಸ್
– ಚಾಕಲೇಟ್ ತೋರಿಸಿ ಐದು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ!
– ಕುಂದಾಪುರ: ಕಾಡು ಪ್ರಾಣಿಗಳ ಬೇಟೆ: ಮೂವರ ಬಂಧನ
– ಕೋಟ: ವಂಚನೆ ಪ್ರಕರಣ, 1 ವರ್ಷ ಜೈಲು, 9 ಸಾವಿರ ದಂಡ
NAMMUR EXPRESS NEWS
ಉಡುಪಿ: ಉಡುಪಿಯಲ್ಲಿ ಐದು ವರ್ಷ ಮಗುವಿನ ಮೇಲೆ ಲೈಂಗಿಕ ಕಿರುಕುಳದ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ನಗರದ ಹೃದಯ ಭಾಗದಲ್ಲಿ ಜ. 24ರಂದು ಶುಕ್ರವಾರ ಸಂಜೆ ನಡೆದಿದೆ. ಭಿಕ್ಷೆ ಬೇಡುತ್ತಾ ಓಡಾಡುತ್ತಿದ್ದ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಮಗು, ಮತ್ತೋರ್ವ ಬಾಲಕಿ ಜೊತೆ ಓಡಾಡುತ್ತಿದ್ದಾಗ ಆರೋಪಿ ಮಗುವಿಗೆ ಚಾಕಲೇಟ್ ಆಸೆ ತೋರಿಸಿದ್ದಾನೆ. ಚಾಕಲೇಟ್ ತೋರಿಸಿದ ಆರೋಪಿ ಮಗುವನ್ನು ಪಕ್ಕದ ಕಾಲು ದಾರಿಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾಲು ದಾರಿಯಲ್ಲಿದ್ದ ಬೇಲಿ ಪಕ್ಕದಲ್ಲೇ ಲೈಂಗಿಕ ಕಿರುಕುಳ ನೀಡಲು ಆರೋಪಿ ಮುಂದಾಗಿದ್ದು, ಈ ವೇಳೆ ಮಗುವನ್ನು ಹುಡುಕಿಕೊಂಡು ಬಂದ ಬಾಲಕಿಯನ್ನು ಕಂಡು ಆರೋಪಿ ಓಡಿ ಹೋಗಿದ್ದಾನೆ. ಬಳಿಕ ಮಗು ಮನೆಯಲ್ಲಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪೋಷಕರಲ್ಲಿ ಬಾಯ್ದಿಟ್ಟಿದೆ. ಈ ಬಗ್ಗೆ ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
* ಕುಂದಾಪುರ: ಕಾಡು ಪ್ರಾಣಿಗಳ ಬೇಟೆ: ಮೂವರ ಬಂಧನ
ಕುಂದಾಪುರ: ಕಾಡುಪ್ರಾಣಿಗಳ ಹತ್ಯೆಗೆ ಸಂಚು ರೂಪಿಸಿ ಅರಣ್ಯ ಪ್ರವೇಶಿಸಿದ್ದ ಭಟ್ಕಳ, ಶಿರೂರು ಮೂಲದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ವಂಡಾರು ಬಳಿ ನಡೆದಿದೆ.
ಭಟ್ಕಳ ಮುಂಡಳ್ಳಿಯ ಮೊಹಮ್ಮದ್ ಅಶ್ರಫ್(23), ಶಿರೂರು ಮೂಲದವರಾದ ವಾಸೀಂ ಅಕ್ರಂ (34), ಅಲಿ ಬಾಪು ಯಾಸಿನ್ (36) ಬಂಧಿತ ಆರೋಪಿಗಳು.
ಬಂಧಿತರಿಂದ ಒಂದು ಬಂದೂಕು, 11 ಕಾಡತೂಸು 4 ಹರಿತವಾದ ಚಾಕುಗಳು, ಒಂದು ಮಾಂಸವನ್ನು ಉಪಯೋಗಿಸುವ ಮಚ್ಚು, ಟಾರ್ಚ್ ಹಾಗೂ ಮೂರು ಮೊಬೈಲ್ ಫೋನ್ ಸಹಿತ ಆರೋಪಿಗಳು ಬಳಸಿದ್ದ ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
* ಕೋಟ: ವಂಚನೆ ಪ್ರಕರಣ, 1 ವರ್ಷ ಜೈಲು, 9 ಸಾವಿರ ದಂಡ
ಕುಂದಾಪುರ ತಾಲ್ಲೂಕಿನ ಹಾರ್ದಳ್ಳಿ ಮಂಡಳಿ ಗ್ರಾಮದ ಆಶಲತಾ ಪೈ ಅವರನ್ನು ವಂಚನೆ ಆರೋಪದ ಮೇಲೆ ಐ.ಪಿ.ಸಿ. ಪ್ರಕರಣವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆರವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗ, ಪೊಲೀಸ್ ವೃತ್ತ ನಿರೀಕ್ಷಕರು, ಬ್ರಹ್ಮಾವರ ವ್ರತ್ತ ಅವರ ಮಾರ್ಗದರ್ಶನದಲ್ಲಿ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಹೇಶ್ ಪ್ರಸಾದ್ ತನಿಖೆ ನಡೆಸಿ, 2012 ರ ಡಿಸೆಂಬರ್ 26ರಂದು ಆರೋಪಿಯ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಎ.ಸಿ.ಜೆ. & ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಶೃತಿ ಅವರು ಆರೋಪಿಗೆ 1 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 9 ಸಾವಿರ ರೂಪಾಯಿ ದಂಡ ಶಿಕ್ಷೆ ಪ್ರಕಟಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕಿ ಉಮಾ ನಾಯ್ಕ ವಿಚಾರಣೆ ನಡೆಸಿದರು.