
ರಾಜ್ಯದಲ್ಲಿ ಶುರುವಾಯ್ತು ಮಳೆ ಅಬ್ಬರ!
– ರಾಜ್ಯದಲ್ಲಿ ಮೈಕೊರೆಯುವ ಚಳಿಯ ನಡುವೆ ಮಳೆ
– ಶೃಂಗೇರಿ ಸೇರಿದಂತೆ ಹಲವೆಡೆ ಭಾರೀ ಮಳೆ
– ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ
NAMMUR EXPRESS NEWS
ಕರ್ನಾಟಕ ರಾಜ್ಯಾದ್ಯಂತ ಒಣ ಹವೆ ಮತ್ತು ಚಳಿ ವಾತಾವರಣ ಮಧ್ಯೆ ತಾತ್ಕಾಲಿಕ ಮಳೆಯ ಆಗಮನವಾಗಿದೆ. ಇಂದಿನಿಂದ ಮುಂದಿನ 02 ದಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಜೋರು ಮಳೆ ಬರುವ ನಿರೀಕ್ಷೆ ಇದೆ. ಒಟ್ಟು 05 ದಿನದ ಹವಾಮಾನ ಮುನ್ಸೂಚನೆ ಪೈಕಿ ಮೊದಲ ಎರಡು ದಿನ ಮಳೆ, ಚಳಿ ಪ್ರಮಾಣ ಹೆಚ್ಚಾಗಿರುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಭಾರಿ ಮಳೆಯಾಗಿದೆ. ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಬೆಂಗಳೂರು ನಗರ ರಾಜ್ಯದಲ್ಲಿ ಜೋರು ಮಳೆ ಸುರಿಯಲಿದೆ. ಇದು ತಾತ್ಕಾಲಿಕ ಮಳೆಯಾಗಿದೆ. ಮಳೆ ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ ರಾತ್ರಿ ಚಳಿ ಮಂಜಿನ ವಾತಾವರಣ ಕಂಡು ಬರಲಿದೆ. ಮಧ್ಯಾಹ್ನ ಎಂದಿನಂತೆ ಒಣಹವೆ ಸೃಷ್ಟಿಯಾಗಲಿದೆ.
ಎಲ್ಲೆಲ್ಲಿ ಮಳೆ ಆಗಲಿದೆ?
ರಾಜ್ಯದ ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ವ್ಯಾಪಕ ಮಳೆಯಾಗುವ ಎಲ್ಲ ಸಾಧ್ಯತೆ ಇದೆ. ಈ ಮಳೆ ಬರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಒಣಹವೆ, ಅತ್ಯಧಿಕ ಚಳಿ ಹಾಗೂ ಬಿಸಿಲಿನ ಎಚ್ಚರಿಕೆ ಕೊಡಲಾಗಿದೆ. ಒಳನಾಡು ಜಿಲ್ಲೆಗಳಲ್ಲಿ ಅದರಲ್ಲೂ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಇನ್ನಿತರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಕಾರವಾರ, ಬೆಂಗಳೂರು ಕೆಐಎಎಲ್, ಹೊನ್ನಾವರ, ಮಂಗಳೂರು ಏರ್ಪೋರ್ಟ್, ಬಾಗಲಕೋಟೆ, ಕಲಬುರಗಿ, ಹಾವೇರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನದಲ್ಲಿ ಭಾರೀ ಏರಿಕೆ ಆಗಿದೆ. 30 ಡಿಗ್ರಿ ಸೆಲ್ಸಿಯಸ್ಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ಕೊಂಚ ಕಡಿಮೆ ಆಗಿದೆ.
ವಿಜಯಪುರ, ಚಿಕ್ಕಮಗಳೂರಲ್ಲಿ ಕನಿಷ್ಠ ತಾಪಮಾನ
ಚಿಕ್ಕಮಗಳೂರಲ್ಲಿ 10, ವಿಜಯಪುರ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ 14.5, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15, ದಾವಣಗೆರೆಯಲ್ಲಿ 15, ಧಾರವಾಡದಲ್ಲಿ 16, ಗದಗ 17, ಚಾಮರಾಜನಗರ ಮತ್ತು ಚಿತ್ರದುರ್ಗ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಭಾಗದಲ್ಲಿ ಬೆಳಗ್ಗೆ ಮಂಜು ವಾತಾವರಣ ಕಂಡು ಬರಲಿದೆ. ಮಧ್ಯಾಹ್ನ ತೀವ್ರ ಬಿಸಿಲು ಹಾಗೂ ಒಣಹವೆ ಕಂಡು ಬರುತ್ತಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಇದೇ ರೀತಿಯ ವಾತಾವರಣ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
