- ರಾಶಿ ಇಡಿ : ಬಂಪರ್ ಬೆಲೆ
NAMMUR EXPRESS NEWS
ಕಳಸ: ಕೆಂಪು ಅಡಿಕೆ ಬೆಲೆ ಎರಡು ವಾರಗಳಿಂದ ಏರು ಹಾದಿಯಲ್ಲಿದ್ದು, ‘ರಾಶಿ ಇಡಿ’ ಮಾದರಿಗೆ ಕ್ವಿಂಟಲ್ಗೆ ₹ 55 ಸಾವಿರ ಧಾರಣೆ ಬಂದಿದೆ. ಇದು ಈ ವರ್ಷದ ಗರಿಷ್ಠ ಮಟ್ಟವಾಗಿದೆ.
ಅಡಿಕೆ ಮಾರಾಟ ಮಾಡದೆ ಉಳಿಸಿಕೊಂಡಿರುವ ಬೆಳೆಗಾರರ ಪಾಲಿಗಿದು ಬಂಪರ್ ಬೆಲೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಹಸಿ ಅಥವಾ ಸರಕು ಮಾದರಿ ಅಡಿಕೆಗೆ ಕ್ವಿಂಟಲ್ಗೆ ₹ 63 ಸಾವಿರದಿಂದ 180 ಸಾವಿರದವರೆಗೆ ಮಾರಾಟವಾಗಿದೆ.
ಬೆಟ್ಟೆ ಅಡಿಕೆ ಕ್ವಿಂಟಲ್ಗೆ 156 ಸಾವಿರ, ರಾಶಿ ಇಡಿ ಅಡಿಕೆಗೆ ₹54 ಸಾವಿರ ಬೆಲೆ ಇದೆ. ಗೊರಬಲು ಅಡಿಕೆ ಕೂಡ ₹40 ಸಾವಿರಕ್ಕೆ ಮಾರಾಟ ಆಗುತ್ತಿದೆ. ಸ್ಥಳೀಯ ವ್ಯಾಪಾರಿಗಳು ಮಂಗಳವಾರ ರಾಶಿ ಇಡಿ ಅಡಿಕೆಯನ್ನು ಕ್ವಿಂಟಲ್ಗೆ ₹55,500 ದರದಲ್ಲಿ ಖರೀದಿಸಿದರು.
ಅಡಿಕೆಯನ್ನು ಮಾರಾಟ ಮಾಡದೆ ಉಳಿಸಿಕೊಂಡಿರುವ ಬೆಳೆಗಾರರ ಸಂಖ್ಯೆ ಶೇ 10ಕ್ಕಿಂತಲೂ ಕಡಿಮೆ ಇದ್ದು, ಬೆಲೆ ಏರಿಕೆ ಲಾಭ ಹೆಚ್ಚಿನವರಿಗೆ ಲಭಿಸುತ್ತಿಲ್ಲ. ಶೇ 50ಕ್ಕಿಂತ ಹೆಚ್ಚಿನ ಅಡಿಕೆ ಬೆಳೆಗಾರರು ಕಳೆದ ಹಂಗಾಮಿನಲ್ಲಿ ಸಂಸ್ಕರಣೆಯ ಕಿರಿಕಿರಿ ಬೇಡ ಎಂದು ಹಸಿ ಅಡಿಕೆಯನ್ನೇ ಮಾರಾಟ ಮಾಡಿದ್ದರು.
ಅಡಿಕೆ ಸಂಸ್ಕರಣೆ ಮಾಡಿ ಉಳಿಸಿಕೊಂಡಿದ್ದ ಬೆಳೆಗಾರರು, ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಮಳೆಗಾಲ ಆರಂಭವಾಗುವ ಮುನ್ನವೇ ಬಹುತೇಕ ಅಡಿಕೆ ಮಾರಾಟ ಮಾಡಿದ್ದಾರೆ, ಅನುಕೂಲಸ್ತ ಬೆಳೆಗಾರರು ಮಾತ್ರ ಅಡಿಕೆಯನ್ನು ಮಾರದೆ ಉಳಿಸಿಕೊಂಡಿದ್ದಾರೆ.