- ವಾರ್ಡ್ ಮಟ್ಟದಲ್ಲೇ ಪರವಾನಗಿ ಪಡೆಯಿರಿ
- ಆಯೋಜಕರಿಂದ ಮುಚ್ಚಳಿಕೆ
NAMMUR EXPRESS NEWS
ಬೆಂಗಳೂರು : ಗೌರಿ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅನುಮತಿ ಪಡೆಯುವ ಸಂಬಂಧ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗೊಂಡ ಏಕ ಗವಾಕ್ಷಿ ವ್ಯವಸ್ಥೆ ಇರಬೇಕು, ಅರ್ಜಿ ಸಲ್ಲಿಸಿದ 3 ದಿನದೊಳಗೆ ಪರವಾನಗಿ ನೀಡಬೇಕು, ಸರ್ಕಾರನೀಡಿರುವ ಸೂಚನೆ ಪಾಲಿಸುವ ಬಗ್ಗೆ ಆಯೋಜಕ ರಿಂದ ಮುಚ್ಚಳಿಕೆ ಪಡೆಯಬೇಕು ಎಂಬ ಅಂಶಗಳು ಸೇರಿದಂತೆ ವಿವಿಧ ಅಂಶ ಗಳನ್ನು ಒಳಗೊಂಡ ಮಾರ್ಗಸೂಚಿ ಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್
ಸಂಪರ್ಕ ಮತ್ತಿತರ ಪರವಾನಗಿ ಪಡೆಯಲು ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯಬೇಕು.
ಸಂಬಂಧಿಸಿದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ್ಡ್ ಮಟ್ಟದಲ್ಲಿ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಏಕ ಗವಾಕ್ಷಿ ವ್ಯವಸ್ಥೆ ಸ್ಥಾಪಿಸಬೇಕು. ಕಾರ್ಯಕ್ರಮದ ಆಯೋಜಕರು ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಬೇಕು ಈ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ನಡೆಸಿ 3 ದಿನದೊಳಗೆ ಪರವಾನಗಿ ನೀಡಬೇಕು ಎಂದು ತಿಳಿಸಲಾಗಿದೆ. ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಆಯೋಜಕರಿಂದ ಮುಚ್ಚಳಿಕೆ: ನ್ಯಾಯಾಲಯದ ನಿರ್ದೇಶನಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ನೀಡಿರುವ ಸೂಚನೆ ಗಳನ್ನು ಪಾಲಿಸುವ ಬಗ್ಗೆ ಆಯೋಜಕರಿಂದ ಮುಚ್ಚಳಿಕೆ ಪಡೆಯಬೇಕು. ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದಂತೆ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಆಯೋಜಕರಿಂದ ಖಾತರಿ ಪಡೆಯಬೇಕು. ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸು ವಂತೆ ಆಯೋಜಕರಿಗೆ ಸೂಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಹೈಟೆನ್ನನ್ ವಿದ್ಯುತ್ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿ ಸ್ಥಾಪಿಸಲು ಅನುಮತಿ ನೀಡಬಾರದು. ಉತ್ಸವಕ್ಕೆ ಮೊದಲು ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.