- ನ.28ರಂದು ಬೃಹತ್ ಪ್ರತಿಭಟನೆ: ಸರ್ಕಾರದ ಗಮನ ಸೆಳೆಯಲು ಯತ್ನ
- ಮಲೆನಾಡಿನ ಎಲ್ಲಾ ನಾಯಕರು ಹಾಜರ್
NAMMUR EXPRESS NEWS
ಶಿವಮೊಗ್ಗ: ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತ ಸಮಿತಿ ಬೃಹತ್ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದೆ.
ನಾಡಿಗೆ ಬೆಳಕು ಕೊಟ್ಟು ಕತ್ತಲಲ್ಲಿ ಬದುಕು ಕಾಣುತ್ತಿರುವ ಸಂತ್ರಸ್ತರ ಸಮಸ್ಯೆಯನ್ನು ಬಿಜೆಪಿ ಸರ್ಕಾರ ಸೃಷ್ಟಿಸಿದೆ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಒತ್ತಾಯಿಸಿ ನಾವು ನ.28ರಂದು ಶಿವಮೊಗ್ಗದಲ್ಲಿ ಸಂತ್ರಸ್ತರ ಬೃಹತ್ ಸಮಾವೇಶವನ್ನು ಆಯೋಜಿಸಿದ್ದೇವೆ. ಈ ಸಮಾವೇಶಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಆಗಮಿಸುತ್ತಾರೆ ಎಂದರು.
ಸಮಿತಿಯ ಸಂಚಾಲಕ ಆರ್. ಪ್ರಸನ್ನಕುಮಾರ್ ಮಾತನಾಡಿ, ಸಂತ್ರಸ್ತರ ಬದುಕು ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ಸಂತ್ರಸ್ತರ ಪರವಾಗಿ ಇತ್ತು. ಸುಮಾರು 58 ಡಿನೋಟಿಫಿಕೇಷನ್ ಮಾಡುವ ಮೂಲಕ ಸಂತ್ರಸ್ತರ ಬದುಕಲ್ಲಿ ಬೆಳಕು ಮೂಡಿಸಿತ್ತು. ಆದರೆ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಎರಡು ನೋಟಿಫಿಕೇಷನ್ನಿಗೆ ಸಂಬಂಧಿಸಿದಂತೆ ರದ್ದಾಗಿರುವುದನ್ನೇ ಇಟ್ಟಕೊಂಡು ಉಳಿದೆಲ್ಲಾ ಡಿನೋಟಿಫಿಕೇಷನ್ ರದ್ದುಮಾಡಿ ನೋಟಿಫಿಕೇಷನ್ ಮಾಡಿ ಸಂತ್ರಸ್ತರನ್ನು ಅತಂತ್ರರನ್ನಾಗಿ ಮಾಡಿದೆ ಎಂದು ದೂರಿದರು.
ಸಮಿತಿಯ ಮತ್ತೊಬ್ಬ ಮುಖಂಡ ಮಧು ಬಂಗಾರಪ್ಪ ಮಾತನಾಡಿ, ಧಮ್, ತಾಕತ್ ಇದ್ದರೆ ಮುಖ್ಯಮಂತ್ರಿಗಳು ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲಿ. ಅವರು ಪದೇಪದೇ ಧಮ್ ಬಗ್ಗೆ ಮಾತನಾಡುತ್ತಾರೆ. ಅವರ ಧಮ್ ಅನ್ನು ಈಗ ಸಮಸ್ಯೆ ಬಗೆಹರಿಸುವುದಕ್ಕೆ ಎತ್ತಲಿ. ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲಿ. ಬಿಜೆಪಿ ಸರ್ಕಾರ ಹೇಳಿಕೆ ಕೊಟ್ಟರೆ ಪ್ರಯೋಜನವಿಲ್ಲ, ಸಂತ್ರಸ್ತರ ಪರವಾಗಿ ಬಿಜೆಪಿ ಸರ್ಕಾರ ಮೇಲ್ಮನವಿ ಸಲ್ಲಿಸಿಲ್ಲ. ರೈತರನ್ನು ಒಕ್ಕಲೆಬ್ಬಿಸುತ್ತಲೇ ಇದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಜನಾಂದೋಲನವನ್ನೇ ಹಮ್ಮಿಕೊಂಡಿದೆ. ಇದರ ಜೊತೆಗೆ ಮಲೆನಾಡು ಭಾಗದ ಸಮಸ್ಯೆಗಳನ್ನು ಇಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ. ಇದು ರಾಜಕಾರಣವಲ್ಲ, ಬದುಕಿನ ಪ್ರಶ್ನೆ ಎಂದರು.
ಸಂತ್ರಸ್ತರ ಕಣ್ಣೀರು ಒರೆಸುವ ನಾಟಕ: ಕಿಮ್ಮನೆ
ಮಾಜಿ ಸಚಿವ ಹಾಗೂ ಸಮಿತಿಯ ಮುಖಂಡ ಕಿಮ್ಮನೆ ರತ್ನಾಕರ್ ಮಾತನಾಡಿ, ಬಿಜೆಪಿ ಸರ್ಕಾರ ಸಮಸ್ಯೆಯನ್ನು ಜೀವಂತವಾಗಿ ಇಟ್ಟುಕೊಂಡಿದೆ. ಕಾಂಗ್ರೆಸ್ ಸರ್ಕಾರ ಸಂತ್ರಸ್ತರ ಪರವಾಗಿ ಮಾಡಿದ ಕಾಯಿದೆಗಳನ್ನೆಲ್ಲ ವಜಾ ಮಾಡಲು ಅನುಕೂವಾಗುವಂತೆ ಹೊಸ ಕಾಯಿದೆಯನ್ನೇ ಮಾಡಿದೆ. ಸಂತ್ರಸ್ತರ ಕಣ್ಣೀರು ಒರೆಸುವ ತಂತ್ರಗಾರಿಕೆ ಮಾಡುತ್ತಿದೆ. ಕೇಂದ್ರದ ಮೇಲೆ ಎತ್ತಿಹಾಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆಯೇಕೆ ಎಂದು ಅರ್ಥವಾಗುತ್ತಿಲ್ಲ. ಅರಣ್ಯ ಕಾಯಿದೆಗೆ ತಿದ್ದುಪಡಿ ಮಾಡಿದರೆ ಸಾಕು. ಮೋದಿಯನ್ನು ಮಧ್ಯ ತರುವ ಅಗತ್ಯವೇ ಇಲ್ಲ. ಯಾವುದೋ ಕಾರ್ಪೊರೇಷನ್ ವ್ಯಾಪ್ತಿಗೆ ಬರುವ ಕಾನೂನನ್ನು ಬಡವರ ಬದುಕಿಗೆ ತರುವುದು ಅರ್ಥವಿಲ್ಲ ಎಂದರು.
ಈ ಸರ್ಕಾರಕ್ಕೆ ಬಡವರ ಬದುಕು ಬೇಡ. ಬಣ್ಣ ಬೇಕು. ಬಣ್ಣವನ್ನು ಇಟ್ಟುಕೊಂಡು ಬಣ್ಣಿಸುವ ಬಿಜೆಪಿ ಸರ್ಕಾರಕ್ಕೆ ಸಮಸ್ಯೆಗಳೇ ಗೊತ್ತಿಲ್ಲ. ಜಾತಿ, ಧರ್ಮದ ಆಧಾರದಲ್ಲಿ ಮನುಷ್ಯರ ಭಾವನೆಗಳನ್ನು ಕೆರಳಿಸಿ ಶಾಂತಿಯನ್ನು ಕದಡಿ ಅಭಿವೃದ್ಧಿಯನ್ನೇ ಕಡೆಗಣಿಸುತ್ತಿರುವ ಈ ಬಿಜೆಪಿ ಸರ್ಕಾರಕ್ಕೆ ನಾವು ತಕ್ಕ ಪಾಠ ಕಲಿಸುತ್ತೇವೆ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನೇ ನಾವು ಮುಂದಿಟ್ಟುಕೊಂಡು ಇದನ್ನು ಮುಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿಯೇ ಸಂತ್ರಸ್ತರ ಸಮಸ್ಯೆ ಪರಿಹರಿಸವ ಘೋಷಣೆ ಮಾಡುತ್ತೇವೆ ಎಂದರು. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈ ಸರ್ಕಾರಕ್ಕೆ ಮಾನ ಮರ್ಯಾದೆ ಎಂಬುದೇ ಇಲ್ಲ ಈಗಾಗಲೇ ಶರಾವತಿ ಸಂತ್ರಸ್ತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ನಾಲ್ಕೂವರೆ ವರ್ಷವಾದರೂ ಸಮಸ್ಯೆ ಬಗ್ಗೆ ಮಾತನಾಡದ ಮಲೆನಾಡಿನ ಬಿಜೆಪಿ ಶಾಸಕರು ಇದ್ದಕ್ಕಿದ್ದಂತೆ ಸಂತ್ರಸ್ತರ ಪರವಾಗಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.
ನಮ್ಮಹೋರಾಟ ಐತಿಹಾಸಿಕ ರೂಪ ಪಡೆಯುವುದರಲ್ಲಿ ಆಶ್ಚರ್ಯವೇ ಇಲ್ಲ. ನೇಣು ಇಲ್ಲವೇ ಹೋರಾಟ ಎಂಬ ನಿರ್ಧಾರಕ್ಕೆ ಸಂತ್ರಸ್ತರು ಬಂದಿದ್ದಾರೆ.
ಈಗಾಗಲೇ ದಯಾಮರಣಕ್ಕೆ ಸಂತ್ರಸ್ತರು ಅರ್ಜಿ ಹಾಕಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆಗಡುಕ ಬಿಜೆಪಿ ಸರ್ಕಾರದ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟವನ್ನು ನಾವು ಆರಂಭಿಸಿದ್ದೇವೆ. ನ.28ರಂದು ಈ ಬೃಹತ್ ಹೋರಾಟಕ್ಕೆ ಕರೆಕೊಟ್ಟಿದ್ದೇವೆ. ಎತ್ತು ಗಾಡಿ, ಮಕ್ಕಳು, ಮರಿ ಹೀಗೆ ಕುಟುಂಬ ಸಮೇತ ನ.28ರಂದು ಮಲೆನಾಡಿನ ಎಲ್ಲ ಹಳ್ಳಿಗಳ ರಸ್ತೆಗಳು ಶಿವಮೊಗ್ಗಕ್ಕೆ ಸೇರಿಕೊಳ್ಳುತ್ತವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಈ ಹೋರಾಟಕ್ಕೆ ಸುಮಾರು 1ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲಾ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, ಸಂತ್ರಸ್ತರ ಜಾಗೃತಿ ಸಮಿತಿಯ ಮುಖ್ಯ ರೂವಾರಿ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಆಯನೂರಿನಿಂದ ಪಾದಯಾತ್ರೆ ಆರಂಭ
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ನ.28ರಂದು ಆಯನೂರಿನಿಂದ ಪಾದಯಾತ್ರೆ ಆರಂಭವಾಗುತ್ತದೆ. ಶಿವಮೊಗ್ಗದ ಸಮೀಪ ರಾಜ್ಯ ನಾಯಕರು ಈ ಪಾದಯಾತ್ರೆಯಲ್ಲಿ ಹೆಜ್ಜೆಹಾಕಲಿದ್ದಾರೆ. ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ನಡೆಯುತ್ತದೆ ಜಿಲ್ಲೆಯಲ್ಲಿಯೇ ಬಹುದೊಡ್ಡ ಹೋರಾಟ ಇದಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಎ. ರಮೇಶ್ ಹೆಗ್ಡೆ, ಕಲಗೋಡು ರತ್ನಾಕರ್, ಅನಿತಾಕುಮಾರಿ, ಎಸ್.ಪಿ. ದಿನೇಶ್, ಧರ್ಮರಾಜ್, ರೇಖಾ ರಂಗನಾಥ್. ಎನ್. ರಮೇಶ್ ಜಿ.ಡಿ. ಮಂಜುನಾಥ್, ಇಕ್ಕೇರಿ ರಮೇಶ್, ವಿಜಯಕುಮಾರ್, ನಗರದ ಮಹಾದೇವಪ್ಪ ಸೇರಿದಂತೆ ಮೊದಲಾದವರಿದ್ದರು.