ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು!
– ಡಿಸಿಎಂ ಡಿಕೆಶಿ ದೇಶದಲ್ಲೇ ಶ್ರೀಮಂತ ಶಾಸಕ!
– ದೇಶದ ಮೊದಲ 3 ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ
– ಟಾಪ್ 20 ಮಂದಿ ಪೈಕಿ 12 ಮಂದಿ ಇಲ್ಲಿಯವರೇ
NAMMUR EXPRESS NEWS
ಬೆಂಗಳೂರು: ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು!. ಇನ್ನು ಕರ್ನಾಟಕ ಡಿಸಿಎಂ ಡಿಕೆಶಿ ದೇಶದಲ್ಲೇ ಶ್ರೀಮಂತ ಶಾಸಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ದೇಶದ ಮೊದಲ 3 ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ. ಟಾಪ್ 20 ಮಂದಿ ಪೈಕಿ 12 ಮಂದಿ ಇಲ್ಲಿಯವರೇ ಆಗಿದ್ದಾರೆ. ಈ ಮೂಲಕ ಕರ್ನಾಟಕ ಶ್ರೀಮಂತಿಕೆಯಲ್ಲೂ ಮುಂದಿದೆ.
ಏನಿದು ವರದಿ?:
ಎಡಿಆರ್ ಮತ್ತು ಎನ್ಇಡಬ್ಲ್ಯೂ ಬಿಡುಗಡೆ ಮಾಡಿದ ಜನಪ್ರತಿನಿಧಿಗಳ ಮಾಹಿತಿ ವರದಿಯೊಂದರಲ್ಲಿ ದೇಶದ ಶಾಸಕರ ಆಸ್ತಿಪಾಸ್ತಿ, ಸಾಲ ಇತ್ಯಾದಿ ವಿವರ ಬಹಿರಂಗವಾಗಿದೆ. ಈ ವರದಿ ಪ್ರಕಾರ ಸಚಿವ ಡಿ.ಕೆ ಶಿವಕುಮಾರ್ ಅವರು ಭಾರತದ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ. ಕುತೂಹಲವೆಂದರೆ ಶ್ರೀಮಂತ ಶಾಸಕರು ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
100 ಕೋಟಿ ದಾಟಿದವರು 32 ಮಂದಿ ಇದ್ದಾರೆ!
100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಬಿಲಿಯನೇರ್ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರು 32 ಮಂದಿ ಇದ್ದಾರೆ. ದೇಶದ ಯಾವ ರಾಜ್ಯದಲ್ಲೂ ಇಷ್ಟೊಂದು ಬಿಲಿಯನೇರ್ ಶಾಸಕರು ಇಲ್ಲ. ದೇಶದ ಮೊದಲ ಮೂರು ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ. ಹಾಗೆಯೇ, ಅಗ್ರ 20 ಸಿರಿವಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರೇ 12 ಮಂದಿ ಇದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ನಲ್ಲಿ ಘೋಷಿಸಲಾಗಿರುವ ಅಂಶಗಳನ್ನು ಆಧರಿಸಿ ಎಡಿಆರ್ ಮತ್ತು ಎನ್ಇಡಬ್ಲ್ಯೂ ಈ ಪಟ್ಟಿ ಪ್ರಕಟಿಸಿದೆ. ಅತಿಹೆಚ್ಚು ಬಿಲಿಯನೇರ್ ಶಾಸಕರಿರುವ ರಾಜ್ಯಗಳು ಎಡಿಆರ್ ಒಟ್ಟು 4001 ಶಾಸಕರ ಘೋಷಿತ ಆಸ್ತಿವಿವರಗಳನ್ನು ಅವಲೋಕಿಸಿದ್ದು ನೂರು ಕೋಟಿ ರೂಗೂ ಹೆಚ್ಚು ಮೊತ್ತದ ಆಸ್ತಿಗಳನ್ನು 88 ಶಾಸಕರು ಹೊಂದಿರುವ ಸಂಗತಿಯನ್ನ ಬೆಳಕಿಗೆ ತಂದಿದೆ. ಇದರಲ್ಲಿ ಹೆಚ್ಚಿನವರು ಕರ್ನಾಟಕದವರೇ.
1000 ಕೋಟಿ ರೂಗೂ ಹೆಚ್ಚು ಆಸ್ತಿ ಇರುವ ಮೂವರು ಕನ್ನಡಿಗರೇ!
ದೇಶದ ಅತಿ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಕರ್ನಾಟಕದವರದ್ದೇ. ಡಿಕೆ ಶಿವಕುಮಾರ್, ಕೆಎಚ್ ಪುಟ್ಟಸ್ವಾಮಿ ಗೌಡ ಮತ್ತು ಪ್ರಿಯಾಕೃಷ್ಣ ಅವರು ಮೊದಲ ಮೂರು ಸ್ಥಾನದಲ್ಲಿದ್ದಾರೆ. ಈ ಬಾರಿ ಅಚ್ಚರಿ ಮೂಡಿಸಿದ್ದು ಪುಟ್ಟಸ್ವಾಮಿಗೌಡರದ್ದು. ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಪುಟ್ಟಸ್ವಾಮಿಗೌಡ ಅವರು ತಮ್ಮ ಬಳಿ 1,267 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ 1,413 ಕೋಟಿ ರೂ ಘೋಷಿತ ಆದಾಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಅವರ ಘೋಷಿತ ಆಸ್ತಿ 1,156 ಕೋಟಿ ರೂ ಇದೆ.
ದೇಶದ ಟಾಪ್ 20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರು..ಮತ್ತವರ ಘೋಷಿತ ಆಸ್ತಿ ಮೌಲ್ಯ
- ಡಿ.ಕೆ ಶಿವಕುಮಾರ್, ಕಾಂಗ್ರೆಸ್: 1,413ಕೋಟಿ ರೂ
- ಕೆ.ಎಚ್ ಪುಟ್ಟಸ್ವಾಮಿಗೌಡ, ಪಕ್ಷೇತರ: 1,267 ಕೋಟಿ ರೂ
- ಪ್ರಿಯಾಕೃಷ್ಣ, ಕಾಂಗ್ರೆಸ್: 1,156 ಕೋಟಿ ರೂ
- ಬಿ.ಎಸ್ ಸುರೇಶ, ಕಾಂಗ್ರೆಸ್: 648 ಕೋಟಿ ರೂ
- ಎನ್.ಎ. ಹ್ಯಾರಿಸ್, ಕಾಂಗ್ರೆಸ್: 439 ಕೋಟಿ ರೂ
- ಎಚ್.ಕೆ. ಸುರೇಶ್, ಬಿಜೆಪಿ: 435 ಕೋಟಿ ರೂ
- ಆರ್.ವಿ. ದೇಶಪಾಂಡೆ, ಕಾಂಗ್ರೆಸ್: 363 ಕೋಟಿ ರೂ
- ಎಂ.ಆರ್ ಮಂಜುನಾಥ್, ಜೆಡಿಎಸ್: 316 ಕೋಟಿ ರೂ
- ಎಸ್.ಎನ್. ಸುಬ್ಬಾರೆಡ್ಡಿ, ಕಾಂಗ್ರೆಸ್: 313 ಕೋಟಿ ರೂ
- ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್: 312 ಕೋಟಿ ರೂ
- ಎಂ.ಕೃಷ್ಣಪ್ಪ, ಕಾಂಗ್ರೆಸ್: 296 ಕೋಟಿ ರೂ
- ಮುನಿರತ್ನ, ಬಿಜೆಪಿ: 293 ಕೋಟಿ ರೂ
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023