ಐಟಿ ರಿಟರ್ನ್ಸ್ ಸಲ್ಲಿಸದಿದ್ರೆ 5,000 ರೂ. ದಂಡ!
– ಜು.31 ಕೊನೆ ದಿನ: 3 ದಿನ ಮಾತ್ರ ಬಾಕಿ
– ಐಟಿ ಮಾಡದಿದ್ರೆ ಲೋನ್ ಸಿಗಲ್ಲ
NAMMUR EXPRESS NEWS
ನವ ದೆಹಲಿ: 2021-22ರ ಆದಾಯಕ್ಕೆ ಸಂಬಂಧಿಸಿದಂತೆ 2022-23ನೇ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಜು.31 ಕೊನೆಯ ದಿನವಾಗಿದೆ. ಗಡುವು ವಿಸ್ತರಣೆ ಮಾಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆಯಾದರೂ, ವಿಸ್ತರಣೆ ಮಾಡುವುದಿಲ್ಲ ಎಂದು ಐಟಿ ಇಲಾಖೆ ಈಗಾಗಲೇ ಅನೇಕ ಸಲ ಸ್ಪಷ್ಟಪಡಿಸಿದೆ. ಇದರ ನಡುವೆ ಗಡುವಿನ ದಿನಾಂಕಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿವೆ. ಅಂದಹಾಗೇ, ಗಡುವು ಮುಗಿದ ಬಳಿಕವೂ ತಡವಾಗಿ ಈ ವರ್ಷದ ಡಿಸೆಂಬರ್ 31ರವರೆಗೂ ಐಟಿಆರ್ ದಾಖಲಿಸಲು ಅವಕಾಶವಿರುತ್ತದೆ. ಆದರೆ, ದಂಡ ತೆರಬೇಕಾಗುತ್ತದೆ. ತೆರಿಗೆ ವಿನಾಯಿತಿಯ ಪ್ರಯೋಜನವೂ ತಪ್ಪಲಿದೆ.
ದೊಡ್ಡ ಮೊತ್ತದ ತೆರಿಗೆ ಪಾವತಿದಾರರು ತೆರಿಗೆ ಪಾವತಿಸುವುದರಲ್ಲಿ ತಡವಾದರೆ, ಪಾವತಿಸದ ತೆರಿಗೆಗೆ ಶೇಕಡ 2ರಷ್ಟು ಬಡ್ಡಿಯು ಆಗಸ್ಟ್ನಿಂದ ಅನ್ವಯವಾಗಲಿದೆ. ತಡವಾಗಿ ಐಟಿಆರ್ ಸಲ್ಲಿಕೆಯಾದರೆ, ಐದು ಲಕ್ಷ ರೂಪಾಯಿ ಆದಾಯಕ್ಕೆ 5,000 ರೂಪಾಯಿಯವರೆಗೂ ದಂಡ ವಿಧಿಸಲಾಗುತ್ತದೆ. ವಾರ್ಷಿಕ ಆದಾಯ ಐದು ಲಕ್ಷ ರೂ.ಗಿಂತಲೂ ಕಡಿಮೆ ಇದ್ದರೆ, ಒಂದು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.
ಹೀಗಾಗಿ ದಂಡ ತಪ್ಪಿಸಬೇಕು ಎಂದುಕೊಳ್ಳುವವರು ಶುಕ್ರವಾರವನ್ನೂ ಸೇರಿಸಿ ಮೂರು ದಿನಗಳ ಒಳಗೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಬೇಕಾಗಿದೆ. ತಪ್ಪಿದಲ್ಲಿ ದುಬಾರಿ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗದೇ ಇರಲು ಇದೇ ಜುಲೈ 31ಕ್ಕೂ ಮುನ್ನ ಐಟಿಆರ್ ಸಲ್ಲಿಸಿ.
ಅರ್ಧಕ್ಕೂ ಹೆಚ್ಚು ಜನ ಬಾಕಿ :
ಆದಾಯ ತೆರಿಗೆ ಇಲಾಖೆಯ ಪೋರ್ಟಲ್ನಲ್ಲಿ ಜುಲೈ 27ರ ವರೆಗಿನ ವಿವರಗಳಿದ್ದು, 3.73 ಕೋಟಿ ಐಟಿಆರ್ಗಳು ಸಲ್ಲಿಕೆಯಾಗಿವೆ. ಇದರಲ್ಲಿ 2.93 ಕೋಟಿ ರಿಟರ್ನ್ಸ್ಗಳನ್ನು ಖುದ್ದು ತೆರಿಗೆದಾರರು ದೃಢೀಕರಿಸಿದ್ದಾರೆ. ಇದರಲ್ಲಿ 2.18 ಕೋಟಿ ಐಟಿಆರ್ಗಳನ್ನು ತೆರಿಗೆ ಇಲಾಖೆಯು ದೃಢೀಕರಿಸಿದೆ. ಈ ತನಕ ಸಲ್ಲಿಕೆಯಾಗಿರುವ ಐಟಿಆರ್ಗಳ ಸಂಖ್ಯೆ ಶೇ. 45ಕ್ಕೂ ಕಡಿಮೆ ಇದೆ. ಜುಲೈ 28ರಂದು ಒಂದಿಷ್ಟು ಸಲ್ಲಿಕೆಯಾಗಿದೆ ಎಂದುಕೊಂಡರೂ ಹೆಚ್ಚು ಕಡಿಮೆ ಅರ್ಧದಷ್ಟು ತೆರಿಗೆದಾರರು ಇನ್ನೂ ತಮ್ಮ ಐಟಿಆರ್ ಅನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023