ರಾಹುಲ್ ಗಾಂಧಿ ಲೋಕ ಸಭೆಗೆ ರೀ ಎಂಟ್ರಿ!
– ಗಾಂಧಿ ಪ್ರತಿಮೆಗೆ ನಮಸ್ಕರಿಸಿ ಲೋಕ ಸಭೆಗೆ
– ಕಾನೂನು ಸಮರದಲ್ಲಿ ಗೆಲುವಿನ ವಿಜಯೋತ್ಸವ
NAMMUR EXPRESS NEWS
ಹೊಸದಿಲ್ಲಿ: ಕಾನೂನು ಸಮರದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕ ಸಭೆಗೆ ಗ್ರಾಂಡ್ ಎಂಟ್ರಿ ಪಡೆದಿದ್ದಾರೆ.
ಸೋಮವಾರ ಲೋಕ ಸಭೆಯ ಅವರಣದಲ್ಲಿ ಗಾಂಧಿ ಪ್ರತಿಮೆಗೆ ನಮಸ್ಕರಿಸಿ ಬಳಿಕ ಲೋಕ ಸಭೆಗೆ ಹಾಜರ್ ಆಗಿದ್ದಾರೆ.
ಮೋದಿ ಉಪನಾಮ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್ ನ್ಯಾಯಾಲಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರಿಂಕೋರ್ಟ್ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುನಸ್ಥಾಪಿಸಿದ್ದಾರೆ.
ಕೋರ್ಟ್ ಆದೇಶ ಪ್ರತಿಯೊಂದಿಗೆ ಶುಕ್ರವಾರವೇ ಲೋಕಸಭಾ ಕಾರ್ಯದರ್ಶಿ ಭೇಟಿ ಮಾಡಿದ್ದ ಕಾಂಗ್ರೆಸ್ ನಾಯಕರು, ರಾಹುಲ್ ಅನರ್ಹತೆ ಆದೇಶ ರದ್ದು ಮಾಡುವಂತೆ ಮನವಿ ಮಾಡಿದ್ದರು. ಆ.8 ಹಾಗೂ 9 ರಂದು ಕಾಂಗ್ರೆಸ್ ಮಂಡಿಸಿರುವ ಕೇಂದ್ರದ ವಿರುದ್ಧ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ರಾಹುಲ್ ಗಾಂಧಿಯವರು ಭಾಗವಹಿಸಬೇಕೆಂಬುದು ಕಾಂಗ್ರೆಸ್ ನಾಯಕರ ಬಯಕೆ ಆಗಿತ್ತು. ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಸೂರತ್ ಮ್ಯಾಜಿಸ್ಟ್ರೇಟ್ ವಿಧಿಸಿರುವ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು. ರಾಹುಲ್ ಅವರು 2019ರ ಏಪ್ರಿಲ್ 13 ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ಎಲ್ಲ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು.ಈ ಬಗ್ಗೆ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಅವರು, ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023