- ಎಲ್ಲಾ ನಾಯಕರು ಸೇರಿ ಸಂಘಟನೆ: ಸಿಎಂ ಬೊಮ್ಮಾಯಿ
- ಸೆ.2ಕ್ಕೆ ಮಂಗಳೂರಿಗೆ ಪ್ರಧಾನಿ ಮೋದಿ
NAMMUR EXPRESS NEWS
ಬೆಂಗಳೂರು: ಪಕ್ಷದ ಸಂಘಟನೆ, ಪ್ರವಾಸ, ಜನಸಂಪರ್ಕ ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದ್ದು, ಆರು ಕಡೆ ದೊಡ್ಡ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸೋಮವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಡಿಯೂರಪ್ಪ ಅವರು ಪಕ್ಷದ ಸಂಘಟನೆಯ ಕುರಿತು ಚರ್ಚಿಸಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದೆಹಲಿಗೆ ಹೋಗಿ ಭೇಟಿಯಾಗಿ ಬಂದಿದ್ದಾರೆ. ಅಲ್ಲಿಯ ಮಾತುಕತೆ, ಸೂಚನೆಯ ಬಗ್ಗೆ ವಿವರವಾಗಿ ಚರ್ಚೆ ಮಾಡಿದ್ದೇವೆ. ಪ್ರಧಾನಿ ಮೋದಿಯವರು ಬರುವ ಸೆಪ್ಟೆಂಬರ್ 2ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಭೇಟಿ ನೀಡುವ ಸಂದರ್ಭದಲ್ಲಿ ಪಕ್ಷದ ವತಿಯಿಂದ ಮಾಡಬೇಕಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಿದ್ದೇವೆ. ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್ ಅವರು ವಿವಿಧ ತಂಡಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಬರುವ ದಿನಗಳಲ್ಲಿ ಇನ್ನೊಂದು ಸಭೆಯನ್ನು ರಾಜ್ಯ ಮಟ್ಟದ ಹಿರಿಯ ನಾಯಕರೊಂದಿಗೆ ನಡೆಸಿ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಾರ್ಯಕ್ರಮದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರ್ಣಯವಾಗಿದೆ ಎಂದರು.