- ಆದೇಶ ಹಿಂಪಡೆದ ಸರ್ಕಾರ
NAMMUR EXPRESS NEWS
ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್ ಪಡಿತರ ಚೀಟಿ ಹೊಂದಿರುವ)ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ) ಕುಟುಂಬಗಳ ಗೃಹ ಬಳಕೆಗೆ ಮಾಸಿಕ 75 ಯುನಿಟ್ ಉಚಿತ ವಿದ್ಯುತ್’ ನೀಡುವ ಸಂಬಂಧ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರಕಾರ ಹಿಂಪಡೆದಿದ್ದು, ಯೋಜನೆ ಆರಂಭಕ್ಕೆ ಮೊದಲೇ ಸ್ಥಗಿತಗೊಂಡಂತೆ ಆಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭಾಗ್ಯಜ್ಯೋತಿ ಕುಟೀರಜ್ಯೋತಿ ಬಳಕೆದಾರರು ಒಳಗೊಂಡಂತೆ ಮಾಸಿಕ 75 ಯುನಿಟ್ಗಳ ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಅನುಷ್ಠಾನಗೊಳಿಸಲು ಆಗಸ್ಟ್ 28ರಂದು ಇಂಧನ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಇದೀಗ ಇಂಧನ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಡಿ.ಎಂ. ಅವರು ಆ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ಮತ್ತೊಂದು ಸುತ್ತೋಲೆ ಹೊರಡಿಸಿದ್ದಾರೆ.
“75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಎಸ್ಸಿ-ಎಸ್ಟಿ ವರ್ಗದ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ವಾತಂತ್ರೋತ್ಸವ ಭಾಷಣದಲ್ಲಿಯೂ ಪ್ರಕಟಿಸಿದ್ದರು. ಆದರೆ, ಇದೀಗ ಯಾವುದೇ ಕಾರಣ ನೀಡದೆ ಸುತ್ತೋಲೆ ಹೊರಡಿಸಿದ ಹತ್ತೇ ದಿನಗಳಲ್ಲಿ ಇಂಧನ ಇಲಾಖೆ ಸುತ್ತೋಲೆ ಹಿಂಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.