- ನಿರ್ಮಾಪಕರ ಸಂಘದಿಂದ ತೀರ್ಮಾನ
NAMMUR EXPRESS NEWS
ಜೀ ಕನ್ನಡ ವಾಹಿನಿಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ ಸೆಟ್ನಲ್ಲಿ ಇದೀಗ ಅಲ್ಲೋಲ ಕಲ್ಲೋಲವಾಗಿದೆ. ಧಾರವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅನಿರುದ್ಧರನ್ನು ಸೀರಿಯಲ್ನಿಂದ ಹೊರಗೆ ಕಳುಹಿಸಲಾಗಿದೆ. ಆರ್ಯವರ್ಧನ್ ಎಂಬ ಪಾತ್ರದ ಮೂಲಕ ಕರುನಾಡಿನ ಮನಸ್ಸನ್ನು ಗೆದ್ದಿದ್ದ ಅನಿರುದ್ಧರ ಕಿರಿಕ್ ತಾಳಲಾರದೇ ಧಾರವಾಹಿ ತಂಡ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಕಿರುತೆರೆ ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್ ಅನಿರುದ್ಧ ಸೀರಿಯಲ್ ಸೆಟ್ ನಲ್ಲಿ ಮಾಡಿಕೊಂಡ ಕಿರಿಕ್ಗಳ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿರ್ಮಾಪಕ ವಿಜಯ್ ಗೆ ಆದ ಅನುಭವ ನಾಳೆ ನಮಗೂ ಆಗಮಬಹುದು. ನಾವು ನಟ ಅನಿರುದ್ಧರನ್ನು ಬಾಯ್ಕಾಟ್ ಮಾಡುತ್ತಿಲ್ಲ. ಬದಲಾಗಿ ಅವರನ್ನು 2 ವರ್ಷಗಳ ಕಾಲ ಕಿರುತೆರೆಯಿಂದ ದೂರ ಇಡಲು ನಿರ್ಧರಿಸಿದ್ದೇವೆ. ಎಲ್ಲಾ ಚಾನೆಲ್ಗಳ ನಿರ್ಮಾಪಕರು ಈ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಎಲ್ಲ ಧಾರವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಸಂಚಿಕೆ ನಿರ್ದೇಶಕರಾದ ಉತ್ತಮ್ ಮಧು ಅವರಿಗೆ ಶೂಟಿಂಗ್ ಸೆಟ್ನಲ್ಲಿ ಅನಿರುದ್ಧ ಶತ ಮೂರ್ಖ ಎಂದು ಕರೆದಿದ್ದಾರೆ. ಡೈಲಾಗ್ ವಿಚಾರದಲ್ಲಿ ಗೊಂದಲ ಉಂಟಾಗಿದ್ದ ಕಾರಣಕ್ಕೆ ಮಧು ಅವರನ್ನು ಈ ರೀತಿ ಹೀಯಾಳಿಸಿ ಅನಿರುದ್ಧ ಏಕಾ ಏಕಿ ಶೂಟಿಂಗ್ ಸೆಟ್ನಿಂದ ಹೊರ ನಡೆದಿದ್ದರು. ಧಾರವಾಹಿ ತಂಡವನ್ನು ಕುಟುಂಬ ಎನ್ನುವ ಅನಿರುದ್ಧ ಈ ರೀತಿ ಮಾಡಿರುವುದು ಸರಿಯೇ..? ಇವರ ನಡೆಯಿಂದ ಧಾರವಾಹಿ ನಿರ್ಮಾಪಕರಿಗೆ ಉಂಟಾಗಿರುವ ನಷ್ಟವನ್ನು ಯಾರು ತುಂಬಿಕೊಡ್ತಾರೆ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನ ನಿರ್ದೇಶಕರ ಜೊತೆ ಚರ್ಚೆ ಮಾಡದೇ ಅನಿರುದ್ಧ ಈ ರೀತಿ ಹೊರಟು ಹೋಗಿದ್ದು ಎಷ್ಟು ಸರಿ..? ಅನಿರುದ್ಧ ಅನೇಕ ಬಾರಿ ಆರೂರು ಜಗದೀಶರಿಗೆ ತೊಂದರೆ ನೀಡಿದ್ದಾರೆ. ಇದರಿಂದ ಆರೂರು ಜಗದೀಶ್ ಖಿನ್ನತೆಗೆ ಒಳಗಾಗಿದ್ದರು. ಅನಿರುದ್ಧರ ಕಿರಿಕ್ ತಾಳಲಾರದೇ ಆರೂರು ಜಗದೀಶ್, ವಿಜಯ್ ಸೀರಿಯಲ್ ಸೆಟ್ಗೆ ಹೋಗುತ್ತಿರಲಿಲ್ಲ. ಅವರಿಗೆ ಎಷ್ಟು ಹಿಂಸೆ ಆಗಿದೆ ಎನ್ನುವುದನ್ನು ಇದರಲ್ಲೇ ಊಹಿಸಿಕೊಳ್ಳಿ ಎಂದು ಹೇಳಿದ್ದಾರೆ.
ಇದು ನಿನ್ನೆ ಮೊನ್ನೆಯ ಕತೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಹೈದರಾಬಾದ್ನಲ್ಲಿ ಶೂಟಿಂಗ್ ಸೆಟ್ನಲ್ಲಿ ಆರೂರು ಜಗದೀಶ್ ನನ್ನ ಬಳಿ ಕಣ್ಣೀರು ಹಾಕಿದ್ದರು. ಇದರಿಂದ ಹೇಗೆ ಪಾರಾಗುವುದು ಎಂದೂ ಕೇಳಿದ್ದರು. ಸಂಘಕ್ಕೆ ಈ ಬಗ್ಗೆ ಲಿಖಿತ ದೂರು ಬಂದಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಅನಿರುದ್ಧರನ್ನು ಸಿರಿಯಲ್ ಗಳಿಂದ ದೂರವಿಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಅನಿರುದ್ಧ ಜೊತೆ ಜೊತೆಯಲಿ ಸೀರಿಯಲ್ ಸೆಟ್ನಿಂದ ಹೊರ ನಡೆದಿರುವುದರಿಂದ ಧಾರವಾಹಿ ತಂಡಕ್ಕೆ ಯಾವುದೇ ನಷ್ಟವಿಲ್ಲ ಏಕೆಂದರೆ ಧಾರವಾಹಿಯ ಪ್ರಮುಖ ನಾಯಕ ಕತೆ ಮಾತ್ರ. ಕತೆ ಒಳ್ಳೆಯದಾಗಿದ್ರೆ ಯಾವುದೇ ನಟನಾದರೂ ಜನರು ನೋಡುತ್ತಾರೆ.ಜನರೇನು ಮೂರ್ಖರಲ್ಲ, ವಿಷ್ಣುವರ್ಧನ್ ಒಂದು ವೇಳೆ ಬದುಕಿದ್ದರೆ ಇದನ್ನು ಅವರು ಒಪ್ಪುತ್ತಲೂ ಇರಲಿಲ್ಲ. ನಿರ್ಮಾಪಕರಿಗೆ ನಷ್ಟವಾಗುವುದನ್ನು ಅವರು ಸಹಿಸುತ್ತಿರಲಿಲ್ಲ. ಜನರು ಇದನ್ನು ಅರ್ಥ ಮಾಡಿಕೊಳ್ತಾರೆ ಎಂದು ಹೇಳಿದರು.