- ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಲು ಕಾಂಗ್ರೆಸ್ ಸಜ್ಜು
- ಎತ್ತಿನ ಗಾಡಿಯಲ್ಲಿ ಬರ್ತಾರೆ ಸಿದ್ದರಾಮಯ್ಯ, ಡಿಕೆಶಿ
NAMMUR EXPRESS POLITICAL NEWS
ಬೆಂಗಳೂರು: ಸೋಮವಾರರಿಂದ ಹತ್ತು ದಿನಗಳ ಕಾಲ ಮಹತ್ವದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು ಬೆಲೆ ಏರಿಕೆ, ಕರೋನಾ ನಡುವೆ ಈ ಅಧಿವೇಶನ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ.
ಮಳೆಗಾಲದ ಅಧಿವೇಶನವನ್ನು ವಿಧಾನಸೌಧದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಈಗಾಗಲೇ ವಿರೋಧ ಪಕ್ಷಗಳು ತಯಾರಿ ಮಾಡಿಕೊಂಡಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ.
ಕೊರೊನಾ ವೈರಸ್, ಲಾಕ್ಡೌನ್, ಬೆಲೆ ಏರಿಕೆ, ಪ್ರವಾಹ ಪರಿಸ್ಥಿತಿ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರಸ್ತಾಪ ಮಾಡಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈಗಾಗಲೇ ತಯಾರಿ ಮಾಡಿಕೊಂಡಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯೂ ಆಗಿದೆ. ಜೊತೆಗೆ ಯಾವ್ಯಾವ ವಿಚಾರಗಳ ಬಗ್ಗೆ ಸಮದಸ್ಯರು ಪ್ರಸ್ತಾಪ ಮಾಡಬೇಕು ಎಂಬುದನ್ನು ಈಗಾಗಲೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಸೂಚಿಸಿದ್ದಾರೆ.
ಬೊಮ್ಮಾಯಿಗೆ ಮೊದಲ ಅಧಿವೇಶನ!
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಎದುರಿಸುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಗೃಹ ಮಂತ್ರಿ ಆರಗ ಸೇರಿ ಅನೇಕ ಸಚಿವರಿಗೆ ಇದು ಮೊದಲ ಅಧಿವೇಶನ ಇದಾಗಿದೆ. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಬಳಿಕ ನಡೆಯುತ್ತಿರುವ ಅಧಿವೇಶನವೂ ಇದಾಗಿದೆ.
ಬೆಸ್ಟ್ ಶಾಸಕರಿಗೆ ಬಹುಮಾನ!
ವಿಧಾನ ಮಂಡಲ ಅಧಿವೇಶನ ಕೊನೆಯ ದಿನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರಕಟಿಸಲಿರುವುದು ಈ ಬಾರಿಯ ಅಧಿವೇಶನ ವಿಶೇಷ.
ಯಾವತ್ತು ಏನೇನು..?
ಕರ್ನಾಟಕ 15ನೇ ವಿಧಾನಸಭೆಯ 10ನೇ ಅಧಿವೇಶನದ ಕಾರ್ಯಕಲಾಪಗಳು ಸೆಪ್ಟೆಂಬರ್ 13 ರಿಂದ 24 ರವರೆಗೆ 10 ದಿನಗಳ ಕಾಲ ನಡೆಯಲಿದೆ. ಈ ಅಧಿವೇಶನಲ್ಲಿ ಸರ್ಕಾರದಿಂದ 18ಕ್ಕಿಂತ ಹೆಚ್ಚು ವಿಧೇಯಕಗಳು ಮಂಡನೆಯಾಗಲಿವೆ ಎಂಬ ಮಾಹಿತಿಯಿದೆ. ಜೊತೆಗೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳು, ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು, ಅರ್ಧ ಗಂಟೆ ಕಾಲಾವಧಿಯ ಚರ್ಚೆ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆಗಳು, ನಿಲುವಳಿ ಸೂಚನೆಗಳು ಚರ್ಚೆಗೆ ಬರಲಿವೆ.ಈ ಭಾರಿ ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಮಾಹಿತಿಗಳು ನಮ್ಮ ವಿಧಾನಮಂಡಲದ ವೆಬ್ಸೈಟ್ನಲ್ಲಿ ಲಭ್ಯವಾಗಲಿವೆ ಎಂದು ಈಗಾಗಲೇ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಎತ್ತಿನಗಾಡಿಯಲ್ಲಿ ಬರ್ತಾರೆ ಸಿದ್ದು, ಡಿಕೆಶಿ!
ಕೃಷಿ ಕಾಯ್ದೆ, ಬೆಲೆ ಏರಿಕೆ, ಸರಕಾರದ ವೈಫಲ್ಯ ಖಂಡಿಸಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎತ್ತಿನಗಾಡಿಯಲ್ಲಿ ವಿಧಾನ ಸೌಧಕ್ಕೆ ಬರಲಿದ್ದಾರೆ. ಇದು ರಾಜ್ಯದ ಗಮನ ಸೆಳೆದಿದೆ.