- ಬೆಂಗಳೂರಲ್ಲಿ ಕಂಡು ಕೇಳರಿಯದಷ್ಟು ಮಳೆ: ಅನಾಹುತ
- ರಸ್ತೆ, ಅಂಡರ್ ಪಾಸ್, ಮನೆಗಳು ಮುಳುಗಡೆ
- 5ಕ್ಕೂ ಹೆಚ್ಚು ಸಾವು: ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಮಳೆ ಅನಾಹುತ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು ಸಾವಿರಾರು ಎಕರೆ ಜಮೀನು ಹಾಳಾಗಿದೆ. 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ರಾಜಧಾನಿ ಕಂಡು ಕೇಳರಿಯದಷ್ಟು ಮಳೆಯಾಗಿದೆ.
ಬೆಂಗಳೂರಿನ ರಸ್ತೆ, ಅಂಡರ್ ಪಾಸ್, ರಾಜ ಕಾಲುವೆ ಮುಳುಗಿ ಅಪಾರ್ಟ್ಮೆಂಟ್, ಮನೆಗಳ ಒಳಗೆ ನೀರು ನುಗ್ಗಿದೆ. ಪರಿಣಾಮ ಸಾವಿರಾರು ಮನೆಗಳು ಬೀಳುವ ಹಂತ ತಲುಪಿವೆ. ಇನ್ನು ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
2014ರ ಬಳಿಕ ದಾಖಲೆಯ ಮಳೆ!
ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಭಾನುವಾರ ರಾತ್ರಿ ಮೇಘಸ್ಫೋಟದಂತೆ ಮೂರು ಗಂಟೆ ನಿರಂತರ ಮಳೆ ಸುರಿದಿತ್ತು. ಕೇವಲ 24 ಗಂಟೆಗಳಲ್ಲಿ ಸುಮಾರು 83 ಮಿಮೀ ಮಳೆಯಾಗಿದ್ದು, ಇದು 2014ರ ನಂತರ ನಗರದಲ್ಲಿ ಸುರಿದಿರುವ ಅತಿಹೆಚ್ಚಿನ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆಯದ ತಿಳಿಸಿದೆ.
ಕಳೆದ ಎರಡು ತಿಂಗಳಿನಿಂದ ಮಳೆಯಿಂದಾಗಿ ತತ್ತರಿಸಿ ಹೋಗಿರುವ ರೈನ್ ಬೋ ಡ್ರೈವ್ ಲೇಔಟ್ ನಲ್ಲಿ ಮತ್ತೆ ನೀರು ನುಗ್ಗಿದೆ. ಸರ್ಜಾಪುರ ರಸ್ತೆ ಜಲಾವೃತಗೊಂಡಿದ್ದು, 100ಕ್ಕೂ ಹೆಚ್ಚು ಮನೆಗಳಿಗೆ ಜಲದಿಗ್ಧಂಧನ ಬಿದ್ದಿದೆ. ರೈನ್ ಬೋ ಡ್ರೈವ್ ಲೇಔಟ್ ಮುಂಭಾಗದ ಎರಡು ರಸ್ತೆಗಳು ಮುಳುಗಿ ಹೋಗಿವೆ. ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಪ್ರದೇಶ ಜಲಾವೃತಗೊಂಡಿದೆ. ಮಾರತ್ ಹಳ್ಳಿಯ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಇಕೋ ಸ್ಪೇಸ್ ಬಳಿಯ ರಿಂಗ್ ರೋಡ್ ಮೂರು ದಿನದ ಹಿಂದೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಭಾನುವಾರ ಸುರಿದ ಮಳೆಗೆ ಮತ್ತೆ ಕಂಪ್ಲಿಟ್ ರಸ್ತೆ ಮುಳುಗಿ ಹೋಗಿದ್ದು ನದಿಯಂತೆ ಭಾಸವಾಗುತ್ತಿತ್ತು.ಮಾರತ್ ಹಳ್ಳಿಯ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ವ್ಯಕ್ತಿಯೊಬ್ಬ ನೀರಿನಲ್ಲಿ ಸಿಲುಕಿಕೊಂಡಿದ್ದ ಸ್ಥಳೀಯ ಸೆಕ್ಯೂರಿಟಿ ಗಾರ್ಡ್ ಗಳು ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ರಸ್ತೆಯ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಲವು ಅಂಡರ್ ಪಾಸ್ಗಳು ಜಲಾವೃತಗೊಂಡಿವೆ. ಸೋಮವಾರ ತಡರಾತ್ರಿ ಅಂಡರ್ ಪಾಸ್ ಜಲಾವೃತಗೊಂಡಿದ್ದರಿಂದ ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮಂಗಳವಾರ ಕೊಂಚ ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ.
ಬೆಂಗಳೂರು ಮಹಾಮಳೆಗೆ ಯುವತಿ ಬಲಿ!
ಬೆಂಗಳೂರು ಮಹಾ ಮಳೆಗೆ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದಿದೆ.
ಅಖಿಲಾ (23) ಮೃತ ಯುವತಿ, ಬಿಕಾಂ ಪದವೀಧರೆಯಾಗಿದ್ದ ಅಖಿಲಾ ಖಾಸಗಿ ಕಾಲೇಜಿನಲ್ಲಿ ಕಳೆದ ಎರಡು ವರ್ಷದಿಂದ ಅಡ್ಮಿನಿಸ್ಟ್ರೇಷನ್ ಡಿಪಾಟ್ರ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ತಂದೆ ತಾಯಿ ಜೊತೆಗೆ ಸಿದ್ದಾಪುರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಆದರೆ ಸೋಮವಾರ ರಾತ್ರಿ 8 ಗಂಟೆಗೆ ಕೆಲಸ ಮುಗಿಸಿಕೊಂಡು ಶಾಲೆಯಿಂದ ಹೊರಟಿದ್ದರು.
ರಾತ್ರಿ 9.30ಕ್ಕೆ ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ ಸಮೀಪ ಬಂದಿದ್ದಾರೆ. ಈ ವೇಳೆ ಭಾರೀ ಮಳೆ ಸುರಿಯುತ್ತಿದ್ದ ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿತ್ತು. ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಬಂದ ಅಖಿಲಾ ಅವರು ಸ್ಕೂಟರ್ ನೀರು ಹೆಚ್ಚಿದ್ದರಿಂದ ಇದ್ದಕ್ಕಿದ್ದಂತೆ ಆಫ್ ಆಗಿದೆ. ಈ ವೇಳೆ ಕೆಳಗೆ ಬೀಳುತ್ತಿದ್ದ ಅಖಿಲಾ ಸಹಾಯಕ್ಕೆ ಬಲ ಭಾಗದಲ್ಲಿಯೇ ಇದ್ದ ಎಲೆಕ್ಟ್ರಿಕಲ್ ಪೋಲ್ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ.
ನಂತರ ಕೆಳಗೆ ಬಿದ್ದ ಯುವತಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಅಖಿಲಾ ಕೊನೆಯುಸಿರೆಳೆದಿದ್ದಾರೆ.
4 ದಿನ ರಾಜ್ಯಾದ್ಯಂತ ಮಳೆ ಅಬ್ಬರ
ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು ಈ ಮಧ್ಯೆ ಮುಂದಿನ 4 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈರುತ್ಯ ಮನ್ಸೂನ್ ಚುರುಕು ಆಗಿರುವುದು ಮತ್ತು ಕನ್ಯಾಕುಮಾರಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಮೈಟ್ರೈ ಸುಳಿಗಾಳಿಯಿಂದ ಮಳೆಯಾಗುತ್ತಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬಳ್ಳಾರಿಯಲ್ಲಿ ಮಳೆಯಾಗಲಿದೆ. ಆದರಲ್ಲೂ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಆಗಲಿದೆ.
ಬುಧವಾರ:ಬೀದರ್, ಕೊಪ್ಪಳ, ಕಲಬುರಗಿ, ಯಾದಗಿರಿ, ಗದಗ, ಬಾಗಲಕೋಟೆ, ರಾಯಚೂರು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲಾ ಕಡೆ ಮಳೆಯಾಗಲಿದೆ. ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಾಗಿದೆ.
ಗುರುವಾರ:ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ ಚಿಕ್ಕಮಗಳೂರು, ಕೊಡಗು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಆರೆಂಜ್ ಅಲರ್ಟ್ ಪ್ರಕಟಿಸಲಾಗಿದೆ.
ಶುಕ್ರವಾರ:ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ ಚಿಕ್ಕಮಗಳೂರು, ಕೊಡಗು, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ.
ಮಲೆನಾಡಲ್ಲೂ ಮಳೆ ಅವಾಂತರ!
ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದೆ.ಚಿಕ್ಕಮಗಳೂರು ಜಿಲ್ಲೆಯ ಜಯಪುರ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಭಾರೀ ಪ್ರಮಾಣದ ಮಳೆಯಾಗಿದ್ದು ಮಳೆಯ ಆರ್ಭಟಕ್ಕೆ 15ಕ್ಕೂ ಹೆಚ್ಚು ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗವಾದ ಜಯಪುರ-ಕೊಗ್ರೆ ಸಂಪರ್ಕಿಸುವ ರಸ್ತೆ ಕುಸಿದಿದೆ. ಇನ್ನು ಬಾಳೆಹೊನ್ನೂರು, ಜಯಪುರ, ಕೊಪ್ಪದಲ್ಲಿ ಅತೀ ಹೆಚ್ಚು ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು ಗೋಡೆ ಕುಸಿದು ಶಿವಮೊಗ್ಗ ನಗರದಲ್ಲಿ ವೃದ್ದೆ ಮೃತಪಟ್ಟಿದ್ದಾಳೆ. ಇನ್ನು ಅಡಿಕೆಗೆ ಕೊಳೆ ರೋಗದ ಭೀತಿ ಎದುರಾಗಿದೆ.
600 ಕೋಟಿ ಪರಿಹಾರ ಘೋಷಣೆ ಮಾಡಿದ ಸಿಎಂ
ರಾಜ್ಯದ ಹಲವೆಡೆ ಸತತವಾಗಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತಾಗಿ 600 ಕೋಟಿ ರೂ.ಘೋಷಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಪರಿಹಾರ ಕಾರ್ಯ ಕೈಗೊಳ್ಳುವ ಸಂಬಂಧ ಬೆಂಗಳೂರಿಗೆ ಮಾತ್ರ 300 ಕೋಟಿ ರೂ. ನೀಡಲಾಗಿದೆ. ಇನ್ನುಳಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಿಗೆ 300 ಕೋಟಿ ರೂ. ಒದಗಿಸಲಾಗಿದೆ. ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಂತ್ರಸ್ತರಿಗೆ ಒಂದು ವಾರದಲ್ಲಿ ಪರಿಹಾರ ಒದಗಿಸಬೇಕು. ಜನ-ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವರುಣನ ಆರ್ಭಟದಿಂದ ಆಸ್ತಿ ಹಾನಿಯ ಜತೆಗೆ ಬೆಳೆ ಹಾನಿಯೂ ಸಂಭವಿಸಿದೆ. ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ತಂಡ ಬುಧವಾರ ರಾಜ್ಯಕ್ಕೆ ಆಗಮಿಸುತ್ತಿದೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಷ್ಟದ ಪ್ರಮಾಣ ಮತ್ತಷ್ಟುಹೆಚ್ಚಾಗಲಿದೆ. ಈವರೆಗೆ 11 ಸಾವಿರ ಕೋಟಿ ರು. ನಷ್ಟದ ಅಂದಾಜು ಮಾಡಲಾಗಿತ್ತು. ಆದರೆ, ಈಗ ಇದರ ಮೊತ್ತವು ಮತ್ತಷ್ಟು ಹೆಚ್ಚಾಗಲಿದೆ. ಈ ಬಗ್ಗೆ ಕೇಂದ್ರದ ತಂಡದ ಗಮನಕ್ಕೆ ತಂದು ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಕೋರಲಾಗುವುದು ಎಂದರು.
ಮಳೆ ಹಾನಿ: ಕೇಂದ್ರದ ತಂಡ ಆಗಮನ
ರಾಜ್ಯದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ನಿರಂತರವಾಗಿ ಸಂಭವಿಸುತ್ತಿರುವ ಹಾನಿಯನ್ನು ಅಧ್ಯಯನ ನಡೆಸಲು ಕೇಂದ್ರದ ಹಿರಿಯ ಅಧಿಕಾರಿಗಳ ಮೂರು ತಂಡಗಳು ಸೆ.7ರಿಂದ ಸೆ. 9 ರವರೆಗೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಮಳೆ ಮತ್ತು ಪ್ರವಾಹದಿಂದ ಬೆಳೆನಷ್ಟ ಮತ್ತು ಮೂಲಸೌಕರ್ಯಗಳಿಗೆ ಆಗಿರುವ ಹಾನಿಯ ಬಗ್ಗೆ ಈ ತಂಡಗಳು ಅಧ್ಯಯನ ನಡೆಸಲಿವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಗೃಹ ಇಲಾಖೆ ಜಂಟಿಕಾರ್ಯದರ್ಶಿ ಆಶಿಶ್ ಕುಮಾರ್ ಅವರ ನೇತೃತ್ವದಲ್ಲಿ ಒಟ್ಟು ಮೂರು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿವೆ. ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಕೆ.ಮನೋಹರನ್ ಅವರು ಇನ್ನೆರಡು ತಂಡಗಳಲ್ಲಿ ಇರಲಿದ್ದಾರೆ.