-ಕೋಳಿ ಮಾಂಸ, ಮೊಟ್ಟೆ ಸೇವನೆಯಿಂದ ತೊಂದರೆ ಇದೆಯಾ?
-ಸಾಂಕ್ರಾಮಿಕ ರೋಗವಾಗಿ ಪರಿಣಮಿಸಬಹುದು ಎಚ್ಚರ
ಕೋವಿಡ್ ಅಪಾಯ ತೀವ್ರ ಮಟ್ಟದಲ್ಲಿ ಇರುವ ಹೊತ್ತಲ್ಲೇ ಜಗತ್ತಿಗೆ ಹಕ್ಕಿ ಜ್ವರ ಕಾಡತೊಡಗಿದೆ. ಭಾರತದಲ್ಲೂ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರ ವ್ಯಾಪಿಸಿದೆ. ಕೇರಳ, ಹರಿಯಾಣ ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಬರ್ಡ್ ಫ್ಲೂ ಪ್ರಕರಣಗಳು ಬೆಳಕಿಗೆ ಬಂದಿದ್ದು,ಕರ್ನಾಟಕದಲ್ಲೂ ಹಲವು ಪಕ್ಷಿಗಳು ಸಾವನ್ನಪ್ಪಿವೆ. ಅವೂ ಹಕ್ಕಿ ಜ್ವರ ಪ್ರಕರಣಗಳಾ ಎಂಬುದು ಇನ್ನೂ ದೃಢಪಟ್ಟಿಲ್ಲ.ಆದರೆ ನೆರೆಯ ಕೇರಳದಲ್ಲಿ ಹಕ್ಕಿಜ್ವರವಿರುವಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಹಕ್ಕಿಜ್ವರದ ಪ್ರಮುಖ ರೋಗ ಲಕ್ಷಣವೆಂದರೆ ಕೆಮ್ಮು, ಜ್ವರ, ಗಂಟಲು ನೋವು, ಮೈಕೈ ನೋವು, ನ್ಯೂಮೋನಿಯಾ ಪ್ರಮುಖವಾದವು.
ಕೋಳಿ ಮಾಂಸ, ಮೊಟ್ಟೆ ತಿನ್ನಬಹುದೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಹುಟ್ಟುತ್ತದೆ. ಆದರೆ, ಮೊಟ್ಟೆ ಮತ್ತು ಮಾಂಸವನ್ನು ಸರಿಯಾಗಿ ಬೇಯಿಸಿ ಸೇವಿಸಿದರೆ ಸಮಸ್ಯೆ ಇಲ್ಲ. ಆದರೆ, ಕೋಳಿ ಫಾರಂಗಳಲ್ಲಿ ಯಾವುದಾದರೂ ಒಂದು ಕೋಳಿಗೆ ಈ ವೈರಸ್ ಸೋಂಕು ತಗುಲಿರುವುದು ಕಂಡು ಬಂದಲ್ಲಿ ಕೂಡಲೇ ಫಾರಂನ ಎಲ್ಲಾ ಕೋಳಿಗಳನ್ನ ಕೊಲ್ಲುವುದು ಸರಿಯಾದ ಕ್ರಮ.
ಎಷ್ಟೇ ಜಾಗೃತಿಯಿಂದ ಇದ್ದರೂ ಕೂಡ ಹಕ್ಕಿಜ್ವರ ಇರುವ ಕೋಳಿ ಫಾರಂಗಳಿಂದ ಕೋಳಿಗಳು ಮಾರುಕಟ್ಟೆಗೆ ಪ್ರವೇಶ ಮಾಡುವ ಸಾಧ್ಯತೆ ಇರುವುದರಿಂದ ಜನರು ಸರಿಯಾಗಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸುವುದು ಉತ್ತಮ. ಮೊಟ್ಟೆಯನ್ನು ಅದರ ಹಳದಿ ಲೋಳೆ ಗಟ್ಟಿಯಾಗುವವರೆಗೂ ಬೇಯಿಸಬೇಕು.
ಆದರೆ, ವೈರಸ್ ಮನುಷ್ಯನ ದೇಹಕ್ಕೆ ಪ್ರವೇಶ ಮಾಡಿದ ಬಳಿಕ ಮ್ಯೂಟೇಟ್ ಆಗಿ ವೈರಸ್ ರೂಪಾಂತರಗೊಂಡು ಮನುಷ್ಯನಿಂದ ಮನುಷ್ಯನಿಗೆ ಹರಡುವ ಶಕ್ತಿ ಗಳಿಸಿಬಿಟ್ಟರೆ ಆಗ ಇದೊಂದು ಸಾಂಕ್ರಾಮಿಕ ರೋಗವಾಗಿ ಪರಿಣಮಿಸುವ ಅಪಾಯ ಇದ್ದೇ ಇರುತ್ತದೆ ಎನ್ನುತ್ತಾರೆ ತಜ್ಞರು.