ಹೊರಗೆ ಔಷಧಿ ಖರೀದಿಸಲು ಬರೆದರೆ ವೈದ್ಯರು ಸಸ್ಪೆಂಡ್.!
– ಸರ್ಕಾರಿ ವೈದ್ಯರುಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ
– ಯಾವುದೇ ತಪ್ಪುಗಳನ್ನು ಮಾಡುತ್ತಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಲು ಸುತ್ತೋಲೆ
NAMMUR EXPRESS NEWS
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಔಷಧಗಳನ್ನು ಆರೋಗ್ಯ ಇಲಾಖೆಯ ಔಷಧಾಲಯದಿಂದ ಸರಬರಾಜು ಮಾಡಲಾಗುತ್ತಿದೆ. ಹೀಗಿದ್ದರೂ ಹೊರಗಡೆ ಔಷಧಿ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ ಬರೆದು ಕಳುಹಿಸಿದರೆ ಅವರನ್ನು ಕೂಡಲೇ ಅಮಾನತುಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನಿಶ್ ಹೇಳಿದ್ದಾರೆ. ಇದಲ್ಲದೆ ನಾವು ರೋಗಿಗಳಿಗೆ ಔಷಧಿ ಖರೀದಿಸಲು ಹೊರಗಡೆಗೆ ಚೀಟಿ ಬರೆದು ಕಳುಹಿಸುತ್ತಿಲ್ಲ ಹಾಗೂ ಹೊರಗಿನ ಖಾಸಗಿ ಔಷಧಿ ಮಳಿಗೆಗಳ ಚೀಟಿಯಲ್ಲಿ ವೈದ್ಯ ಸಲಹೆ ಬರೆಯುವುದು ಮತ್ತಿತರ ತಪ್ಪುಗಳನ್ನು ಮಾಡುತ್ತಿಲ್ಲ ಎಂದು ಕೂಡಲೆ ಪ್ರಮಾಣ ಪತ್ರ ಸಲ್ಲಿಸಲು ಎಲ್ಲಾ ವೈದ್ಯರಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಜೊತೆಗೆ ಈ ರೀತಿಯ ಪ್ರಮಾಣ ಪತ್ರ ನೀಡಿದ ನಂತರವೇ ಜುಲೈ ತಿಂಗಳ ವೇತನ ನೀಡಲು ಆಯಾ ಜಿಲ್ಲೆಗಳ ಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೊರಗಡೆ ಔಷಧ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ ಬರೆದುಕೊಡುವುದನ್ನು ಸರ್ಕಾರ ನಿಷೇಧಿಸಿದೆ ಕೆಲ ಆಸ್ಪತ್ರೆಗಳು ಆಸ್ಪತ್ರೆ ಫಾರ್ಮಸಿಸ್ಟ್ ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೋಗಿಗಳಿಗೆ ಔಷಧಗಳನ್ನು ಬರೆದುಕೊಡುವುದು ಹಾಗೂ ಹೊರಗಿನಿಂದ ಔಷಧಿಗಳನ್ನು ಖರೀದಿಸಲು ಒತ್ತಾಯಿಸುತ್ತಿರುವುದು ತುಮಕೂರಿನ ಕೊರಟಗೆರೆ ಆಸ್ಪತ್ರೆಗೆ ಭೇಟಿ ನೀಡಿದಾಗ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರಿಂದ ನಾವು ತಪ್ಪು ಕೆಲಸಗಳಲ್ಲಿ ತೊಡಗಿಲ್ಲ ಎಂದು ಸ್ವಯಂಘೋಷಿತ ಪತ್ರ ಪಡೆದುಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಸೂಚನೆ ನೀಡಿದ್ದಾರೆ.