-ಆಕಾಶವಾಣಿಯಲ್ಲಿ ಜ.11ರಿಂದ ಶೈಕ್ಷಣಿಕ ಕಾರ್ಯಕ್ರಮ.
-ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ.
ಬೆಂಗಳೂರು: ಶಿಕ್ಷಣ ಇಲಾಖೆಯು ಆಕಾಶವಾಣಿ ಮೂಲಕ ಜನವರಿ 11 ರಿಂದ “ಕಲಿಯುತ್ತಾ ನಲಿಯೋಣ” ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗಿನ ಮಕ್ಕಳಿಗಾಗಿ ಇರುವ ನಲಿಕಲಿ ಮತ್ತು ಕಲಿನಲಿ ಕಾರ್ಯಕ್ರಮಗಳನ್ನು ಶಾಲೆಗೆ ಹೋಗದ ಮಕ್ಕಳಿಗಾಗಿ ಜನವರಿ 11ರಿಂದ ಏಪ್ರಿಲ್ 5 ರವರೆಗೆ ಆಕಾಶವಾಣಿ ಪ್ರಸಾರ ಮಾಡಲಾಗುತ್ತಿದೆ.
ಸೋಮವಾರದಿಂದ ಶುಕ್ರವಾರದವರೆಗೂ ಬೆಳಿಗ್ಗೆ 10 ಗಂಟೆಯಿಂದ 10.15 ರವರೆಗೆ ಒಂದು ಮತ್ತು ಎರಡನೇ ತರಗತಿಗಳಿಗೆ ಹಾಗೂ 10:15 ರಿಂದ 10.30 ಗಂಟೆಯವರೆಗೂ 3 ಮತ್ತು 4ನೇ ತರಗತಿಗಳಿಗೆ ಹಾಡು, ಕಥೆ, ನಾಟಕ, ಸಂಭಾಷಣೆ, ಒಗಟು, ಮತ್ತು ವಿವಿಧರೀತಿಯ ಮಕ್ಕಳ ಕಲಿಕಾ ಪೂರ್ವಕ ಕಾರ್ಯಕ್ರಮದ ಪ್ರಸಾರ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ ಎಂದು ಸಚಿವರು ವಿವರಿಸಿದ್ದಾರೆ.
ಒಂದರಿಂದ ನಾಲ್ಕನೇ ತರಗತಿಯವರೆಗೆ ಓದುತ್ತಿರುವ ಮಕ್ಕಳ ಎಲ್ಲಾ ಪೋಷಕರಿಗೆ ಈ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಆಲಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.
ಅಲ್ಲಿ ಪ್ರಸಾರಗೊಳ್ಳುವ ಹಾಡು, ಕಥೆ ಇತ್ಯಾದಿಗಳನ್ನು ನಿಮ್ಮ ಮಕ್ಕಳಿಗೆ ಮತ್ತೊಮ್ಮೆ ಹೇಳುವುದರ ಮೂಲಕ ಹೇಳಿಸುವ ಮೂಲಕ ಮಕ್ಕಳಿಗೆ ನಲಿಯುವುದರ ಜೊತೆಗೆ ಕಲಿಯುವುದನ್ನು ಅಭ್ಯಾಸ ಮಾಡಿಸಿ ಎಂದಿದ್ದಾರೆ.
ಹಾಗೂ ತಮ್ಮ ಮಕ್ಕಳಿಂದ ಯಾವುದಾದರೂ ಕತೆ,. ಹಾಡು, ಒಗಟು ಹೇಳಿದರೆ ಅದನ್ನು ವಾಟ್ಸಾಪ್ ನಂಬರ್ 9449417612 ಗೆ ಕಳಿಸಿದರೆ ಅ ಪ್ರಸಾರ ಮಾಡಲಾಗುವುದು. ಈ ಕಾರ್ಯಕ್ರಮ ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುತ್ತದೆ. ನಂತರ ಈ ಕಾರ್ಯಕ್ರಮಗಳು ಯೂಟ್ಯೂಬ್ ನಲ್ಲಿ ಸಹ ಲಭ್ಯವಿರುತ್ತವೆ ಎಂಬ ಮಾಹಿತಿಯನ್ನು ಸಚಿವರು ತಿಳಿಸಿದ್ದಾರೆ.