- ರಾಜಧಾನಿಯಲ್ಲಿ ಸಹ್ಯಾದ್ರಿ ಸಂಘದಿಂದ ಕಾರ್ಯಕ್ರಮ
- ಕೆವಿಆರ್ ಆಶಯ ಮುಂದುವರಿಸಲು ಪಣ
NAMMUR EXPRESS NEWS
ಬೆಂಗಳೂರು: ಸಹ್ಯಾದ್ರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಕೆ.ವಿ.ಆರ್ ಟ್ಯಾಗೋರ್ ಆವರಿಗೆ ನುಡಿ ನಮನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.
ಮೇ 12 ಅವರು ಮೃತಪಟ್ಟು ಒಂದು ವರ್ಷ ಆಗಿದ್ದು ಅವರ ಸೇವೆ, ಒಡನಾಟ, ಸಹಾಯ, ವ್ಯಕ್ತಿತ್ವನ್ನು ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ನೆನಪಿಸಿಕೊಳ್ಳಲಾಯಿತು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆದ ನೆನಪಿನಂಗಳದಲ್ಲಿ…ಕೆ.ವಿ.ಆರ್ ಟಾಗೋರ್ ಎಂಬ ಕಾರ್ಯಕ್ರಮ ಟ್ಯಾಗೋರ್ ಅವರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಜೊತೆಗೆ ಅವರ ಮಾನವೀಯ ಕೆಲಸಗಳನ್ನು ಮುಂದುವರಿಸಲು ಸಹ್ಯಾದ್ರಿ ಸಂಘ ಪಣ ತೊಟ್ಟಿತು.
ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎನ್. ಎಸ್ ಶ್ರೀಧರಮೂರ್ತಿ ಪ್ರಾಸ್ತಾವಿಕ ಮಾತನಾಡಿ,
ಟ್ಯಾಗೋರ್ ಪ್ರೀತಿಯ ಕಡಲು. ಅವರ ಜೀವನ ಮೌಲ್ಯಗಳನ್ನು ಸಾರುವುದು ಸಮಾಜದ ಕೆಲಸ. ನಾವೆಲ್ಲರೂ ಸೇರಿ ಅವರ ಕೆಲಸಗಳನ್ನು ಮುಂದುವರಿಸೋಣ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಮುದ್ದುಕೃಷ್ಣ ಮಾತನಾಡಿ, ರಾಜ್ಯದಲ್ಲಿ ಓರ್ವ ಪೊಲೀಸ್ ಅಧಿಕಾರಿಯಾಗಿ ಸಾಮಾಜಿಕ ಬೆಸುಗೆ, ಕಲೆ, ಭಾಷೆ, ಸಂಘಟನೆಯಲ್ಲಿ ಟ್ಯಾಗೋರ್ ಮುಂಚೂಣಿ ವ್ಯಕ್ತಿ. ಅವರ ಕಲಾ ಸೇವೆ, ಕಲಾವಿದರ ಬಗೆಗಿನ ಪ್ರೀತಿ ಅಪಾರವಾದುದು ಎಂದರು.
ಖ್ಯಾತ ಬರಹಗಾರ ಪ್ರಧಾನ ಗುರುದತ್ ಮಾತನಾಡಿ, ಟ್ಯಾಗೋರ್ ಅವರ ಪ್ರೀತಿ, ವಿಶ್ವಾಸ ಅವರ ಸೇವೆ ಪ್ರತಿಯೊಬ್ಬರಿಗೂ ಮಾದರಿ. ಅವರ ಆದರ್ಶ ಪಾಲನೆ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ್ಯಾದ್ರಿ ಸಂಘದ ಶ್ರೀಧರ್, ಮಲೆನಾಡಿನ ಮೇಲಿದ್ದ ಟ್ಯಾಗೋರ್ ಪ್ರೀತಿಯನ್ನು ಬಣ್ಣಿಸಿದರು. ಮಲೆನಾಡಿನ ಜನರ ಸಮಸ್ಯೆಗೆ ದನಿಯಾಗಿದ್ದ ಟ್ಯಾಗೋರ್ ಅವರ ಸೇವೆಯನ್ನು ಸಹ್ಯಾದ್ರಿ ಸಂಘ ಮುಂದುವರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಟ್ಯಾಗೋರ್ ಆಪ್ತರು, ಕುಟುಂಬದವರು, ಅಭಿಮಾನಿಗಳು ಇದ್ದರು.
ಕಾರ್ಯಕ್ರಮದಲ್ಲಿ ಕಿರಣಕೆರೆ ಗೋಪಾಲಕೃಷ್ಣ ಅವರ ಸುಗಮ ಸಂಗೀತ ನಡೆಯಿತು. ಸಹ್ಯಾದ್ರಿ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಹೊಸಮನೆ ಸೇರಿದಂತೆ ಸಹ್ಯಾದ್ರಿ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಇದ್ದರು.
ಶೀಘ್ರದಲ್ಲಿ ಅಭಿನಂದನಾ ಪುಸ್ತಕ ಬಿಡುಗಡೆ!
ಮಲೆನಾಡಿನ ಮೇರು ವ್ಯಕ್ತಿತ್ವ, ಸಹ್ಯಾದ್ರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಯಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಪ್ರಮುಖರಾಗಿ, ಮಲೆನಾಡಿನ ದನಿಯಾಗಿ ದೀರ್ಘಕಾಲ ಸೇವೆ ಮಾಡಿರುವ ಸಾವಿರಾರು ಜನರಿಗೆ ಅಣ್ಣನಾಗಿ, ಗೆಳೆಯನಾಗಿ, ಹಿತೈಶಿಯಾಗಿ ಮಾರ್ಗದರ್ಶಕರಾಗಿದ್ದ ಟ್ಯಾಗೋರ್ ಕುರಿತಾದ ಅಭಿನಂದನಾ ಗ್ರಂಥ ಬಿಡುಗಡೆಗೆ ಅವರ ಸ್ನೇಹಿತ ವಲಯ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿ ಪುಸ್ತಕ ಬಿಡುಗಡೆ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.