ಸಿಎಂ ವಿರುದ್ಧ ಲೋಕಾಯುಕ್ತ ತನಿಖೆ!?
– ಮತ್ತಷ್ಟು ಸಂಕಷ್ಟ, ಬಂಧನವಾಗುವ ಸಾಧ್ಯತೆ
– ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ಕಾರ್ಯಕರ್ತರು, ನಾಯಕರು ಪೊಲೀಸ್ ವಶಕ್ಕೆ
NAMMUR EXPRESS NEWS
ಬೆಂಗಳೂರು: ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಸುಮಾರು 56 ಕೋಟಿ ರು. ಮೌಲ್ಯದ 14 ಬದಲಿ ನಿವೇಶನಗಳನ್ನು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮೋದನೆಯನ್ನು ಹೈ ಕೋರ್ಟ್ ಎತ್ತಿಹಿಡಿದಿತ್ತು.ಇದರ ಬೆನ್ನಲ್ಲೇ ಇತ್ತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಹ ಸಿಎಂ ವಿರುದ್ಧ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. 3 ತಿಂಗಳಲ್ಲಿ ಅಂದರೆ ಡಿಸೆಂಬರ್ 24ರೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟ ಹೆಚ್ಚಾಗಿದ್ದು, ಬಂಧನವಾಗುವ ಸಾಧ್ಯತೆಗಳು ಸಹ ಇವೆ.
CRPC ಸೆಕ್ಷನ್ 156(3) ಅಡಿ ಕೇಸ್ ರಿಜಿಸ್ಟರ್ ಮಾಡಲು ಆದೇಶ ನೀಡಲಾಗಿದ್ದು, ತನಿಖಾ ವರದಿ ನೀಡಲು 3 ತಿಂಗಳ ಗಡುವು ನೀಡಲಾಗಿದೆ. ಅಂದ್ರೆ ಡಿಸೆಂಬರ್ 24 2024ಕ್ಕೆ ತನಿಖಾ ವರದಿ ನೀಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದೆ. ಕೋರ್ಟ್ ಆದೇಶದ ಕಾಪಿ ಲೋಕಾಯುಕ್ತ ಡಿಜಿಗೆ ತಲುಪಲಿದೆ. ಬಳಿಕ ಲೋಕಾಯುಕ್ತ ಡಿಜಿ ಮೈಸೂರಿನ ಎಸ್ಪಿಗೆ ನಿರ್ದೇಶನ ನೀಡಲಿದ್ದಾರೆ. ತದ ನಂತರ ಎಸ್ಪಿ ಲೋಕಾಯುಕ್ತ ಎಸ್ಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲಿದ್ದಾರೆ.
ಮೊದಲು ಸಿಎಂ ವಿರುದ್ದ ಎಫ್ಐಆರ್ ದಾಖಲು ಮಾಡಿ ನಂತರ ತನಿಖೆ ಶುರುವಾಗಲಿದ್ದು, ಸಿದ್ದರಾಮಯ್ಯ ಬಂಧನ ಸಾಧ್ಯತೆ ಇದೆ. ಯಾಕಂದರೆ 156(3) ಅಡಿ ತನಿಖೆಗೆ ಆದೇಶವಾದರೆ ಎಫ್ಐಆರ್ ದಾಖಲಿಸಬೇಕು. ಹೀಗಾಗಿ ಶೀಘ್ರದಲ್ಲೇ ಮುಖ್ಯಮಂತ್ರಿ ವಿರುದ್ಧ ಎಫ್ಐಆರ್ ದಾಖಲಾಗಲಿದೆ. ಬಳಿಕ ಅವಶ್ಯಕತೆಗೆ ಅನುಸಾರವಾಗಿ ತನಿಖಾಧಿಕಾರಿ ಅಧಿಕಾರ ಬಳಸಬಹುದು. ಹೀಗಾಗಿ ಬಂಧನ ಸೇರಿದಂತೆ ಸಂಪೂರ್ಣ ಅಧಿಕಾರ ತನಿಖಾಧಿಕಾರಿಗೆ ಇರಲಿದೆ. ಆದ್ದರಿಂದ ಅವಶ್ಯಕತೆ ಇದ್ದರೆ ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯನವರನ್ನು ಬಂಧಿಸಬಹುದು. ಹೀಗಾಗಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡ ಬಳಿಕ ಸಿದ್ದರಾಮಯ್ಯನವರನ್ನು ಯಾವ ಸಂದರ್ಭದಲ್ಲಾದರೂ ಬಂಧನ ಮಾಡಬಹುದು.
ಇನ್ನು ಕೋರ್ಟ್ ಲೋಕಾಯುಕ್ತ ತನಿಖೆಗೆ ಆದೇಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ ಕುಮಾರ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಉತ್ತಮ ಆದೇಶ ಕೊಟ್ಟಿದೆ. ನಿನ್ನೆ ಹೈಕೋರ್ಟ್ ಕೊಟ್ಟ ತೀರ್ಪಿನ ಆದೇಶದ ಪ್ರತಿಯನ್ನು ನೀಡಿದ್ದೆವು. ಖಾಸಗಿ ದೂರಿಗೆ ನ್ಯಾಯ ಸಿಕ್ಕಿದೆ. 3 ತಿಂಗಳೊಳಗೆ ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತಗೆ ಸೂಚನೆ ನೀಡಿದೆ. ಪ್ರಾಮಾಣಿಕವಾಗಿ ತನಿಖೆ ಆಗಬೇಕು ಅಂತಾ ಮನವಿ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ ತನಿಖೆ ಆಗಬೇಕು. FIR ದಾಖಲಿಸಿ ತನಿಖೆ ಆಗಬೇಕು, ಅರೆಸ್ಟ್ ಕೂಡ ಮಾಡಬಹುದು ಎಂದಿದ್ದಾರೆ.
– ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ಕಾರ್ಯಕರ್ತರು, ನಾಯಕರು ಪೊಲೀಸ್ ವಶಕ್ಕೆ
ಬೆಂಗಳೂರು: ಮುಡಾ ಹಗರಣ ಸಂಬಂಧ ರಾಜ್ಯಪಾಲರ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ಕರ್ನಾಟಕ ಹೈಕೋರ್ಟ್ನಲ್ಲಿ ತಿರಸ್ಕೃತಗೊಂಡ ಬೆನ್ನಲ್ಲೇ ಅವರ ರಾಜೀನಾಮೆಗೆ ಆಗ್ರಹ ಹೆಚ್ಚಾಗಿದೆ.
ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು, ಕಾರ್ಯಕರ್ತರು ಬುಧವಾರ ಬೆಂಗಳೂರಿನಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಬೆಂಗಳೂರಿನ ಕುಮಾರಕೃಪ ಗೆಸ್ಟ್ ಹೌಸ್ ಬಳಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.