ಕರ್ನಾಟಕದಲ್ಲಿ ಮುಂಗಾರು ಮಳೆ..!
– ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ
– ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ
NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ವ್ಯಾಪಿಸತೊಡಗಿದ್ದು,ಶುಕ್ರವಾರ ಸಂಜೆ ಇಂದು ಬೆಳಗ್ಗೆ ತನಕ ಸುರಿದ ಮಳೆಗೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿವಿಧ ರೀತಿಯ ಅನಾಹುತ, ಅವಾಂತರಗಳಾಗಿವೆ. ವಿಜಯಪುರದ ಡೋಣಿ ನದಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿ ಸೇತುವೆ ಮೇಲೆ ಹರಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿತು. ಸವದತ್ತಿ ದೇವಸ್ಥಾನ ಮತ್ತು ಗೋಕರ್ಣದ ಮಹಾಬಲೇಶ್ವರ ದೇಗುಲದೊಳಗೆ ನೀರು ನುಗ್ಗಿದೆ. ಶಿವಮೊಗ್ಗ ಜಿಲ್ಲೆ ಆಗುಂಬೆ ಸಮೀಪ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆಯೂ ನಡೆದಿದೆ. ಇನ್ನೊಂದೆಡೆ, ದಾರವಾಡದ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಧಾರಾಕಾರ ಮಳೆಗೆ ಜಪಕ್ಕೆ ಕುಳಿತ ವಿಡಿಯೋ ವೈರಲ್ ಆಗಿತ್ತು. ಕಲಬುರಗಿ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ಜಾನುವಾರುಗಳು ಮೃತಪಟ್ಟಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿತ್ತು. ಇದೇ ರೀತಿ, ಉತ್ತರಕನ್ನಡ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಬೆಳಗಾವಿ, ತುಮಕೂರು, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಬೆಂಗಳೂರು, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗಿದೆ.
ಗೋಕರ್ಣ, ಸವದತ್ತಿ ದೇವಾಲಯಗಳಿಗೆ ನುಗ್ಗಿದ ಮಳೆ ನೀರು:
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳವಾಗಿರುವ ಗೋಕರ್ಣದಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಸಂಗಮ ನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭ ಗುಡಿಗೆ ನುಗ್ಗಿತ್ತು. ಇದರಿಂದಾಗಿ ನಿನ್ನೆ ರಾತ್ರಿ ಭಕ್ತರಿಗೆ ಕೊಂಚ ತೊಂದರೆಯಾಗಿತ್ತು. ಗೋಕರ್ಣ ಮಂದಿರದ ಸಿಬ್ಬಂದಿ ಸತತ ಎರಡು ಗಂಟೆ ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು (ಮರಳ ದಿನ್ನೆ) ಕಡಿದು ನೀರು ಸರಾಗವಾಗಿ ಹೋಗುವಂತೆ ಮಾಡಿದ ಬಳಿಕ ದೇವಸ್ಥಾನದಲ್ಲಿ ನೀರಿನ ಪ್ರಮಾಣ ಇಳಿಕೆಯಾಯಿತು. ಇನ್ನೊಂದೆಡೆ, ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದಲ್ಲಿ ದೇವಸ್ಥಾನಕ್ಕೂ ಮಳೆ ನೀರು ನುಗ್ಗಿದೆ. ಇದರಿಂದಾಗಿ ಭಕ್ತರು ಪರದಾಡಬೇಕಾಯಿತು.