ಕರ್ನಾಟಕದ ದೇವಸ್ಥಾನಗಳಿಗೆ ಇನ್ನು ನಂದಿನಿ ತುಪ್ಪ ಕಡ್ಡಾಯ!
* ಪ್ರಸಾದದ ಗುಣಮಟ್ಟ ಕಾಪಾಡಲು ಸರ್ಕಾರದ ಆದೇಶ
* ತಿರುಪತಿಗೆ 350 ಮೆಟ್ರಿಕ್ ಟನ್ ನಂದಿನಿ ತುಪ್ಪ ರವಾನೆ!
NAMMUR EXPRESS NEWS
ಬೆಂಗಳೂರು: ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಹಂದಿ ಮತ್ತು ದನದ ಕೊಬ್ಬಿನ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದ ದೇವಸ್ಥಾನಗಳಿಗೆ ಹೊಸ ಆದೇಶ ಹೊರಡಿಸಲಾಗಿದೆ.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಶುದ್ಧ ನಂದಿನಿ ತುಪ್ಪ ಬಳಸುವಂತೆ ಆದೇಶ ಹೊರಡಿಸಲಾಗಿದೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಿಗೆ ಇದು ಅನ್ವಯವಾಗಲಿದೆ. ದೇವಾಲಯಗಳಲ್ಲಿ ನಂದಿನಿ ತುಪ್ಪ ಮಾತ್ರ ಬಳಸುವಂತೆ ಆದೇಶಿಸಲಾಗಿದೆ. ದೇವಸ್ಥಾನ ದೀಪಗಳಿಗೆ, ಪ್ರಸಾದ ತಯಾರಿಕೆ, ದಾಸೋಹ ಭವನದಲ್ಲಿ ನಂದಿನಿ ತುಪ್ಪ ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ದೇವಾಲಯಗಳಲ್ಲಿ ತಯಾರಿಸುವ ಪ್ರಸಾದದ ಗುಣಮಟ್ಟ ಕಾಪಾಡುವಂತೆ ಎಚ್ಚರಿಕೆ ನೀಡಲಾಗಿದೆ.
* ತಿರುಪತಿಗೆ 350 ಮೆಟ್ರಿಕ್ ಟನ್ ತುಪ್ಪ ರವಾನೆ!
ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ವಿಚಾರವಾಗಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ಸಿಎಂ ಚಂದ್ರಬಾಬು ನಾಯ್ಡು ಮಾಡಿರುವ ಆರೋಪಕ್ಕೂ, ನಮ್ಮ ನಂದಿನಿಗೂ ಯಾವುದೇ ಸಂಬಂಧವಿಲ್ಲ. ಕಳೆದ ಕೆಲ ದಿನಗಳ ಹಿಂದೆ ಟಿಟಿಡಿ ಪ್ರೆಸ್ ಮೀಟ್ ಮಾಡಿದೆ. ನಂದಿನಿ ಹಾಲು ಹೊರಗಿಟ್ಟು ಬೇರೆ ಬೇರೆ ತುಪ್ಪ ತೆಗೆದುಕೊಂಡಿದ್ದಾರೆ. ಇದರ ಉದ್ದೇಶ ಏನು ಅಂತ ಟಿಟಿಡಿ ಅವರು ಕೇಳಿದ್ದಾರೆ. ಹಿಂದೆ ನಂದಿನಿ ತುಪ್ಪ ಏಕೆ ಬೇಡ ಅಂತ ಹೇಳಿದ್ದರು ಅನ್ನೋದು ನಮ್ಮಗೆ ಗೊತ್ತಿಲ್ಲವೆಂದು ತಿಳಿಸಿದ್ದಾರೆ.
ಈಗ ಮತ್ತೆ ನಂದಿನಿ ಹಾಲು ಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ.ಈಗ ಮತ್ತೆ ಕಳೆದ ಒಂದು ತಿಂಗಳಿನಿಂದ 350 ಮೆಟ್ರಿಕ್ ಟನ್ ತುಪ್ಪ ಹೋಗುತ್ತಿದೆ. ಈಗ ಆರೋಪ ಅಷ್ಟೇ ಪ್ರಾಣಿ ಕೊಬ್ಬಿನ ಅಂಶ ಬಳಕೆ ಆಗ್ತಾಯಿತ್ತಾ? ಅನ್ನೋ ವರದಿ ಬರಬೇಕು. ಒಂದೂ ವೇಳೆ ಬಳಕೆ ಆಗ್ತಾಯಿತ್ತು ಅಂದರೆ ದುರದೃಷ್ಟಕರ ವಿಚಾರ ಇದು. ಒಟ್ಟಾರೆ ನಂದಿನಿಯಿಂದ ತುಪ್ಪ ಕೊಡಲು ತಯಾರಿ ಇದ್ದೀವಿ ಎಂದು ತಿಳಿಸಿದ್ದಾರೆ.