ಈರುಳ್ಳಿ, ಬೆಳ್ಳುಳ್ಳಿ ದುಬಾರಿ!
– ಗಗನಕ್ಕೇರಿದ ಈರುಳ್ಳಿ-ಬೆಳ್ಳುಳ್ಳಿ ಬೆಲೆ
– ದಸರಾ ಹಬ್ಬಕ್ಕೆ ಮತ್ತಷ್ಟು ಏರಿಕೆ
NAMMUR EXPRESS NEWS
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದಿನದಿಂದ ದಿನಕ್ಕೆ ಬಡವರು ಹಾಗೂ ಮಧ್ಯಮವರ್ಗದವರ ಜನರ ಜೀವನಕ್ಕೆ ದುಬಾರಿಯಾಗುತ್ತಿದ್ದು, ಈ ನಡುವೆ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿದ್ದು, ಗ್ರಾಹಕರ ಕಣ್ಣಲ್ಲಿ ಕೊಳ್ಳುವಾಗಲೇ ನೀರು ತರಿಸುತ್ತಿದೆ. ಈರುಳ್ಳಿಯನ್ನು ವ್ಯಾಪಕವಾಗಿ ಬೆಳೆಯುವ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅತಿಯಾದ ಮಳೆಯಾದ ಕಾರಣ ಬೆಳೆಯೆಲ್ಲಾ ನಾಶವಾಗಿದ್ದು, ಮತ್ತೊಂದೆಡೆ ತೇವಾಂಶಕ್ಕೆ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಹಾಗಾಗಿ ಉತ್ಪಾದನೆ ಕುಂಠಿತವಾಗಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ.
ಕಳೆದ ಕೆಲವು ತಿಂಗಳ ಹಿಂದೆ 100 ರೂ.ಗೆ ನಾಲ್ಕು ಕೆಜಿ ಗುಣಮಟ್ಟದ ಈರುಳ್ಳಿ ಚಿಲ್ಲರೆಯಾಗಿ ಮಾರಾಟವಾಗುತ್ತಿತ್ತು. ಈಗ ಕೆಜಿಗೆ 60 ರಿಂದ 70 ರೂ.ಗೆ ಮಾರಾಟವಾಗುತ್ತಿದೆ. ಉತ್ತರ ಕರ್ನಾಟಕದ ಬಳ್ಳಾರಿ, ಾೂರು, ಬೆಳಾವಿ, ಹುಬ್ಬಳ್ಳಿ, ಧಾರವಾಡ ಭಾಗಗಳಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆ ಬೆಳೆಯಲಾಗುತ್ತದೆ. ಆದರೆ ಮಳೆಯಿಂದ ಬೆಳೆ ನಾಶವಾಗಿ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ನಿಗಧಿತ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಪೂರೈಕೆ ಕೂಡ ಕಡಿಮೆಯಾಗಿದ್ದು, ನೆರೆಯ ಮಹಾರಾಷ್ಟ್ರ, ಪುಣೆಯಿಂದಲೂ ಸಹ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪಿತೃಪಕ್ಷ ಹಾಗೂ ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಬೆಳ್ಳುಳ್ಳಿಯೂ ದುಬಾರಿ!
ಈರುಳ್ಳಿ, ಬೆಳ್ಳುಳ್ಳಿ ಒಂದು ರೀತಿಯಲ್ಲಿ ಕಾಂಬಿನೇಷನ್ ನಂತಿದ್ದು, ಒಗ್ಗರಣೆಗೆ ಎರಡೂ ಕೂಡ ಮುಖ್ಯ. ಇದರಲ್ಲಿ ಯಾವುದೇ ಒಂದು ಇಲ್ಲದಿದ್ದರೂ ಅಡುಗೆ ರುಚಿ ಬರುವುದಿಲ್ಲ. ಈ ನಡುವೆ ಬೆಳ್ಳುಳ್ಳಿ ಕೂಡ ಕೆಜಿಗೆ 400 ರೂ. ತಲುಪಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾದ ಕಾರಣ ಬೆಳೆ ಕುಂಠಿತವಾಗಿದ್ದರೆ ಬಯಲು ಸೀಮೆ ಪ್ರದೇಶಗಳಲ್ಲಿ ಮಳೆ ಇಲ್ಲದೆ ನಿಗದಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬೆಳ್ಳುಳ್ಳಿ ಬಾರದಿರುವುದರಿಂದ ಬೆಲೆ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.