7.5 ಸಾವಿರ ಶಿಕ್ಷಕರ ಭರ್ತಿಗೆ ಪ್ರಸ್ತಾವನೆ: ನೇಮಕಕ್ಕೆ ಸಿದ್ಧತೆ
– ಈ ವರ್ಷ ಐದು ಸಾವಿರ ಶಿಕ್ಷಕರ ನಿವೃತ್ತಿ
– ಅತಿಥಿ ಶಿಕ್ಷಕರ ನೇಮಕ ಶುರುವಾಗುತ್ತಾ?
NAMMUR EXPRESS NEWS
ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಅಗತ್ಯವಾದಷ್ಟು ಶಿಕ್ಷಕರನ್ನು ಭರ್ತಿ ಮಾಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗುತ್ತಿರುವ ಬೆನ್ನಲ್ಲೇ ಈ ಶೈಕ್ಷಣಿಕ ವರ್ಷದಲ್ಲಿ 4985 ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಆಸಕ್ತಿ ತೋರಿಸಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ (2022-23) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇದ್ದ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು.
ಆ ಪೈಕಿ 13352 ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 12415 ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಅಷ್ಟರ ನಡುವೆಯೇ ಮುಂದಿನ ಶೈಕ್ಷಣಿಕ ಅವಧಿಗೆ ಹೊಸದಾಗಿ ಐದು ಸಾವಿರ ಶಿಕ್ಷಕರ ಕೊರತೆ ಎದುರಾಗಲಿದೆ. 2023ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೋರಿರುವ ಪ್ರಸ್ತಾವನೆಯು ಆರ್ಥಿಕ ಇಲಾಖೆ ಪರಿಶೀಲನೆಯಲ್ಲಿದೆ.
ಇದಲ್ಲದೆ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 2500 ಶಿಕ್ಷಕರ ಹುದ್ದೆಗಳನ್ನು 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿಗೊಳಪಟ್ಟು ನೇರ ನೇಮಕ ಮೂಲಕ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಆದರೆ ಈ 15 ಸಾವಿರ ಹುದ್ದೆಗಳಲ್ಲಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ 1648 ಹುದ್ದೆಗಳು ಮಾತ್ರ ಉಳಿದಿರುವ ಕಾರಣ, ಪ್ರಸಕ್ತ ಸಾಲಿನಲ್ಲಿ ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆದಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಅತಿಥಿ ಶಿಕ್ಷಕರೇ ಗತಿ: ಶಿಕ್ಷಕರ ನೇಮಕ ವಿವಿಧ ಕಾರಣಗಳಿಂದ ಅಷ್ಟು ಸಲೀಸಲ್ಲದ ಪ್ರಕ್ರಿಯೆ. ಹೀಗಾಗಿ ಖಾಲಿ ಹುದ್ದೆಯನ್ನು ಭರ್ತಿ ಮಾಡಿಕೊಳ್ಳುವವರೆಗೂ ಅತಿಥಿ ಶಿಕ್ಷಕರನ್ನು ಒಂದು ವರ್ಷದ ಅವಧಿಗೆ ಬಳಕೆ ಮಾಡಿಕೊಳ್ಳುವ ಪರಂಪರೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಲಿ ಹುದ್ದೆಗಳಿಗೆ ಎದುರಾಗಿ ಒಟ್ಟು 35192 ಅತಿಥಿ ಶಿಕ್ಷಕರು ಹಾಗೂ ಪ್ರೌಢಶಾಲೆಗಳಲ್ಲಿ ಕೊರತೆ ಇರುವ ಹುದ್ದೆಗಳಿಗೆ ಪ್ರಸ್ತುತ ಸಾಲಿನಲ್ಲಿ ಒಟ್ಟು 7808 ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಶಿಕ್ಷಕರ ಕೊರತೆ ನೀಗಿಸಲಾಗಿದೆ ಎಂಬುದು ಸರ್ಕಾರದ ವಾದವಾಗಿದೆ.
ಆದ್ಯತೆ ಮೇಲೆ ನೇಮಕ: ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಹುದ್ದೆ ಭರ್ತಿಗೆ ನಿಯಂತ್ರಣ ಹಾಕಲಾಗಿತ್ತು. ಬಳಿಕ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಆದ್ಯತೆ ಮೇಲೆ ನೇಮಕಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಶಿಕ್ಷಕರ ನೇಮಕ ಪ್ರಸ್ತಾವನೆಯನ್ನೂ ಪರಿಶೀಲಿಸಲಾಗುತ್ತಿದೆ. ಶಿಕ್ಷಕರ ಅನಿವಾರ್ಯತೆಯ ಅರಿವಿದೆ. ಮುಖ್ಯಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಿ ಅವಕಾಶ ಮಾಡಿಕೊಡಲಾಗುತ್ತದೆ. ಹೊಸ ವರ್ಷ ಅಥವಾ ಬಜೆಟ್ ಸಂದರ್ಭದಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆಂಗ್ಲ, ವಿಜ್ಞಾನಕ್ಕೂ ಅಡ್ಡಿ: ಪ್ರಸ್ತುತ ಸನ್ನಿವೇಶದಲ್ಲಿ ಆಂಗ್ಲ ಭಾಷೆ ಹಾಗೂ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬೇಕಾಗಿದೆ. ಆದರೆ, ನಿರೀಕ್ಷೆಯಷ್ಟು ಶಿಕ್ಷಕರ ಲಭ್ಯತೆ ಇಲ್ಲವಾಗಿದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ 2127 ಆಂಗ್ಲ, 6934 ವಿಜ್ಞಾನ ಶಿಕ್ಷಕರ ಕೊರತೆ ಇದೆ.