ಬೈಕ್ ಸವಾರರಿಗೆ ಶಾಕಿಂಗ್ ನ್ಯೂಸ್!
– ಹಿಂಬದಿ ಸವಾರ ಮೃತಪಟ್ಟರೆ ವಾಹನ ಮಾಲೀಕನಿಂದಲೇ ಪರಿಹಾರ
– ಹೈಕೋರ್ಟ್ ಮಹತ್ವದ ಆದೇಶ.. ಏನಿದು ಆದೇಶ?
NAMMUR EXPRESS NEWS
ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಹಿಂಬದಿ ಸವಾರ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬೈಕಿನ ಹಿಂಬದಿ ಸವಾರನ ಸಾವಿಗೆ ಬೈಕ್ ಮಾಲೀಕನೇ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ. ಈ ಮೂಲಕ ಬೈಕ್ ಓಡಿಸುವವನ ನಿರ್ಲಕ್ಷ್ಯ ಮಾಡಿದರೆ ದಂಡ ಪಾವತಿಸಬೇಕಾಗುತ್ತದೆ..!. ಹೌದು. ತುಮಕೂರಿನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ ವಿಮಾ ಸಂಸ್ಥೆಗೆ ಪರಿಹಾರ ಪಾವತಿಸಲು ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆಯಲ್ಲದೇ ನ್ಯಾಯಮಂಡಳಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಮೃತನ ಕುಟುಂಬದವರಿಗೆ ನೀಡುವಂತೆ ವಾಹನದ (ಹೀರೋ ಹೋಂಡಾ ಬೈಕ್) ಮಾಲೀಕ ನಿಜಾಮುದ್ದೀನ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನಲೆ ಏನು..?: 2011ರ ಮಾರ್ಚ್ 24ರಂದು ಮೃತ ಸಿದ್ದಿಕ್ ಉಲ್ಲಾಖಾನ್ ಎಂಬುವವರು ಕುಣಿಗಲ್ ಬಳಿ ನಿಜಾಮುದ್ದೀನ್ ಅವರ ಬೈಕ್ನಲ್ಲಿ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದರು. ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಬೈಕ್ ಹಳ್ಳಕ್ಕೆ ಬಿದ್ದಿತ್ತು ಈ ವೇಳೆ ತೀವ್ರವಾಗಿ ಗಾಯಗೊಂಡ ಖಾನ್ ರನ್ನು ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾರ್ಚ್ 26, 2011ರಂದು ಖಾನ್ ಮೃತಪಟ್ಟಿದ್ದರು. ನಂತರ ಖಾನ್ ಕುಟುಂಬ ಸದಸ್ಯರು ಪರಿಹಾರ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ಖಾನ್ ಚಿಕಿತ್ಸೆ ಮತ್ತು ಇತರೆ ವೆಚ್ಚಗಳಿಗಾಗಿ 12 ಲಕ್ಷ ರೂ ಖರ್ಚು ಮಾಡಿದ್ದು ಈ ಒಟ್ಟು 15 ಲಕ್ಷ ರೂ.ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕುಣಿಗಲ್ ನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ 2017ರ ಆ.24ರಂದು ವಾರ್ಷಿಕ ಶೇ. 6 ಬಡ್ಡಿಯೊಂದಿಗೆ 7,27,114 ರೂ.ಗಳನ್ನು ಪರಿಹಾರ ನೀಡುವಂತೆ ವಿಮಾ ಸಂಸ್ಥೆ ಆದೇಶಿಸಿತ್ತು.
ಆದರೆ ಇದಕ್ಕೆ ಹೈಕೋರ್ಟ್ ತೀರ್ಪು ನೀಡಿದ್ದು, ವಾಹನದ ಆಸನದ ಸಾಮರ್ಥ್ಯವು 1+1ಆಗಿದ್ದು, ಅದರ ಆಧಾರದ ಮೇಲೆ ನ್ಯಾಯ ಮಂಡಳಿಯು ವಿಮಾ ಕಂಪನಿಯ ಮೇಲೆ ಪರಿಹಾರ ನೀಡುವ ಹೊಣೆ ಗಾರಿಕೆಯನ್ನು ನಿಗದಿಪಡಿಸಿದೆ. ನ್ಯಾಯಾಧೀಕರಣದ ಆದೇಶ ಸೂಕ್ತವಾಗಿಲ್ಲ ಎಂದು ತಿಳಿಸಿದೆಯಲ್ಲದೆ, ಪರಿಹಾರ ಪಾವತಿಸುವ ಹೊಣೆಯನ್ನು ಬೈಕ್ ಮಾಲೀಕನಿಗೆ ವರ್ಗಾಯಿಸಿ ಆದೇಶಿಸಿದೆ.