ಕಾಫಿನಾಡಿನಲ್ಲಿ ಅಪರೂಪದ ಹಾವು ಪತ್ತೆ!
– ಬ್ಯಾಂಬೋ ಪಿಟ್ ವೈಫರ್ ಹಾವು ಕಂಡು ಜನರಿಗೆ ಸೋಜಿಗ
– ಕಳಸದಲ್ಲಿ ಪತ್ತೆಯಾದ ಹಾವನ್ನು ರಕ್ಷಣೆ
– ಫೈನಾನ್ಸ್ ಕಿರುಕುಳ: ಮಹಿಳೆ ಆತ್ಮಹತ್ಯೆ?… ಇನ್ನು ಹಲವು ಸುದ್ದಿಗಳು
NAMMUR EXPRESS NEWS
ಚಿಕ್ಕಮಗಳೂರು: ಹಾವಿನ ಸಂತತಿಯಲ್ಲೇ ಅತ್ಯಂತ ಅಪರೂಪವೆನಿಸಿದ ಬ್ಯಾಂಬೋ ಪಿಟ್ ವೈಫರ್ ಹಾವೊಂದು ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ಸೆರೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಹಾವು ಈಗ ಅಳಿವಿನಂಚಿಗೆ ತಲುಪಿದೆ, ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಿರುವ ಬ್ಯಾಂಬೋ ಪಿಟ್ ವೈಫರ್ ಹಾವು ಕಳಸೇಶ್ವರ ದೇವಸ್ಥಾನದ ಪಕ್ಕದ ಚಂದ್ರು ಭಟ್ ಅವರ ಮನೆಯ ಅಂಗಳದಲ್ಲಿ ಕಾಣಿಸಿಕೊಂಡಿದೆ. ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಅಪರೂಪದ ಲಕ್ಷಣ ಈ ಹಾವಿಗಿದೆ, ಈ ಹಾವುಗಳು ವಿಷಕಾರಿಯಲ್ಲ ಆದರೆ ಕಡಿದರೆ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತದಂತೆ.ಈ ಅಪರೂಪದ ಹಾವಿನ ಸೌಂದರ್ಯ ನೋಡಿ ಇಲ್ಲಿನ ಜನ ತಮ್ಮ ಮೊಬೈಲ್ ಗಳಲ್ಲಿ ಚಿತ್ರವನ್ನು ಸೆರೆಹಿಡಿದಿದ್ದಾರೆ. ಬಳಿಕ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ ರಿಜ್ವಾನ್ ಅರಣ್ಯಕ್ಕೆ ಬಿಟ್ಟಿದ್ದಾರೆ.
ಶೃಂಗೇರಿ: ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದ ಬೈಕ್ ಸವಾರ
ಶೃಂಗೇರಿ: ಕೆ.ಎಸ್.ಆರ್.ಟಿ.ಸಿ ಬಸ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೆಬೈಲ್ ಸಮೀಪ ನಡೆದಿದೆ. ಶುಕ್ರವಾರ ಸಂಜೆ ಸುಮಾರು 6.30 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಬೈಕ್ ನ ಮುಂಭಾಗ ನಜ್ಜುಗುಜ್ಜಾಗಿದೆ. ಇನ್ನು ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫೈನಾನ್ಸ್ ಕಿರುಕುಳ: ಮಹಿಳೆ ಆತ್ಮಹತ್ಯೆ?
ಚಿಕ್ಕಮಗಳೂರು: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಾತಿಗೆ ಮನೆ ಬಾಗಿಲಿಗೆ ಬಂದು ಅವಮಾನಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ವರದಿಯಾಗಿದೆ. ತಾಲೂಕಿನ ತಂಗಲಿ ಗ್ರಾಮದ ದೇವೀರಮ್ಮ (58) ಎಂಬವರೇ ಫೈನಾನ್ಸ್ ಸಿಬ್ಬಂದಿಯ ಅವಮಾನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಆಗಿದ್ದು, ಗುರುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ದೇಹವನ್ನು ಪುತ್ರ ಹಾಗೂ ದೂರುದಾರ ರಾಘವೇಂದ್ರ ನೋಡಿದ್ದು ಮಧ್ಯಾಹ್ನ ಕಡೂರು ಠಾಣೆಗೆ ದೂರು ನೀಡಿದ್ದಾರೆ. ಈ ಸಮಯದಲ್ಲಿ ದೇವೀರಮ್ಮ ಅವರು ಪುತ್ರ ರಾಘವೇಂದ್ರ ಅವರ ಜೊತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು.
ಆಗ ಸೊಸೆ ದೂರವಾಣಿ ಮೂಲಕ ಕರೆಮಾಡಿ ಘಟನೆಯ ಮಾಹಿತಿ ನೀಡಿದ್ದು ಮನೆಗೆ ಬಂದ ಪುತ್ರ ಮತ್ತು ತಾಯಿ ದೇವೀರಮ್ಮ ಹಾಗೂ ಫೈನಾನ್ಸ್ ಸಿಬ್ಬಂದಿ ನಡುವೆ ಚರ್ಚೆ ನಡೆದಿದ್ದು ಅಂತಿಮವಾಗಿ ಪುತ್ರ ರಾಘವೇಂದ್ರ ಅವರು ಶುಕ್ರವಾರ ಹಣ ಪಾವತಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಫೈನಾನ್ಸ್ ಸಿಬ್ಬಂದಿ ತೆರಳಿದ್ದಾರೆ ಎನ್ನಲಾಗಿದೆ.
ಆದರೆ ಘಟನೆ ನಡೆದ ದಿನ ರಾತ್ರಿ ಊಟ ಮುಗಿಸಿ ಮಲಗಲು ತೆರಳಿದ ದೇವೀರಮ್ಮ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದು, ಬೆಳಗ್ಗೆ ಮನೆ ಮಂದಿಗೆ ಆತ್ಮಹತ್ಯೆ ವಿಷಯ ಗೊತ್ತಾಗಿದೆ.