- ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ನಡೆದ ಘಟನೆ
NAMMUR EXPRESS NEWS
ಕಳಸ: ಮಹಿಳೆಯರಿಗೆ ಆಪರೇಶನ್ ಮಾಡಲು ಬಂದ ವೈದ್ಯ ಮದ್ಯ ಸೇವಿಸಿ ಮಲಗಿದ ಪರಿಣಾಮ, ಅನಸ್ತೇಶಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರು ಪರದಾಡಿದ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಅರೋಗ್ಯ ಇಲಾಖೆ ವೈದ್ಯನನ್ನು ಅಮಾನತು ಮಾಡಿದೆ.
ಮಹಿಳೆಯರಿಗೆ ಸಂತಾನಶಕ್ತಿ ಹರಣ ಆಪರೇಶನ್ ಮತ್ತು ಇತರ ಕೆಲವು ಸಮಸ್ಯೆಗಳಿರುವವರಿಗೆ ಶಸ್ತ್ರಚಿಕಿತ್ಸೆ ಮಾಡುವುದಕ್ಕೋಸ್ಕರ ಕೊಪ್ಪದಿಂದ ವೈದ್ಯ ಡಾ.ಬಾಲಕೃಷ್ಣ ಬಂದಿದ್ದರು. ಆದರೆ ಅವರು ಬರುವಾಗಲೇ ಮದ್ಯಸೇವನೆ ಮಾಡಿ ಬಂದಿದ್ದರು. ಆಪರೇಶನ್ ಮಾಡಲಾಗದೆ, ಶುಗರ್ ಹೆಚ್ಚಾದಂತೆ ನಾಟಕವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಸ್ವಸ್ಥನಾಗಿ ಬಿದ್ದ ವೈದ್ಯನಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು, ಆಂಬ್ಯುಲೆನ್ಸ್ ಮೂಲಕ ಕಳಿಸಲಾಗಿದೆ.
ಡಾ.ಬಾಲಕೃಷ್ಣ ವಿರುದ್ಧ ಈ ಹಿಂದೆಯಿಂದಲೂ ಹಲವು ಆರೋಪಗಳು ಕೇಳಿ ಬರುತ್ತಲೇ ಇವೆ. ಶೃಂಗೇರಿ, ಕೊಪ್ಪ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗಲೂ ಬೇಜವಾಬ್ದಾರಿತನದಿಂದ ವರ್ತಿಸಿ ಹಲವರ ಜೀವಕ್ಕೆ ಕುತ್ತು ತಂದಿದ್ದಾರೆ ಎಂಬ ಆರೋಪ ಇದೆ.
ಅಮಾನತಿಗೆ ಆದೇಶ: ಕುಡಿದು ನಿರ್ಲಕ್ಷ್ಯ ವಹಿಸಿದ ವೈದ್ಯನ ಅಮಾನತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ. ವೈದ್ಯನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಡಿಎಚ್ ಓಗೆ ಸೂಚನೆ ನೀಡಿದ್ದಾರೆ.