ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಆಯುಧ ಪೂಜೆ ಸಂಭ್ರಮ!
* ಶ್ರೀಮಠದಲ್ಲಿ ಗಜಾಶ್ವ ಪೂಜೆ,ವಾಹನ ಪೂಜೆ: ಸಿಂಹವಾಹಿನಿ ಅಲಂಕಾರದಲ್ಲಿ ಶ್ರೀಶಾರದೆ
* ಶತಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಜಗದ್ಗುರುಗಳು ಭಾಗಿ
* ಶಾರದಾಂಬೆ ನೋಡಲು ಸಾವಿರಾರು ಪ್ರವಾಸಿಗರ ಆಗಮನ
* ಹರಿಹರಪುರ, ಹೊರನಾಡಿನಲ್ಲೂ ವಿಜೃಂಭಣೆಯ ದಸರಾ ಆಚರಣೆ
NAMMUR EXPRESS NEWS
ಶೃಂಗೇರಿ: ಶ್ರೀಶಾರದಾ ಪೀಠದಲ್ಲಿ ಶರನ್ನವರಾತ್ರಿಯ ಒಂಭತ್ತನೇ ದಿನದಂದು ಸಿಂಹವಾಹಿನಿ ಚಾಮುಂಡಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀಶಾರದೆಯ ದರ್ಶನ ಪಡೆಲು ಲಕ್ಷಾಂತರ ಜನ ಭಕ್ತರು ಆಗಮಿಸುತ್ತಿದ್ದು ಶೃಂಗೇರಿಯಲ್ಲಿ ನವರಾತ್ರಿಯ ಸಂಭ್ರಮ ಮನೆಮಾಡಿದೆ.
ಆಯುಧ ಪೂಜೆ ಸಂಭ್ರಮ!
ಆಯುಧ ಪೂಜೆಯ ನಿಮಿತ್ತ ಶ್ರೀಮಠದ ಆನೆಗಳಾದ ಶ್ರೀಲಕ್ಷ್ಮಿ,ಜಯಲಕ್ಷೀ ಸೇರಿದಂತೆ ಉತ್ಸವ ಕುದುರೆಗಳಿಗೆ ಶ್ರೀಜಗದ್ಗುರುಗಳು ಗಜಾಶ್ವ ಪೂಜೆ ನೆರವೇರಿಸಿದರು. ನಂತರ ಶ್ರೀಮಠದ ಯಾಗಮಂಟಪದಲ್ಲಿ ನಡೆಯುತ್ತಿದ್ದ ಶತಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ರಾತ್ರಿ ಬೀದಿ ಉತ್ಸವದ ನಂತರ ಶ್ರೀಮಠದೊಳಗೆ ನಡೆಯುವ ಜಗದ್ಗುರಗಳ ದರ್ಬಾರ್ ವಿಶೇಷವಾಗಿದ್ದು ನೂರಾರು ಭಕ್ತರು ಪಾಲ್ಗೊಳ್ಳುವರು.
ವಿಜಯದಶಮಿ ವಿಶೇಷ ಪೂಜೆ
ವಿಜಯದಶಮಿ ಅಂಗವಾಗಿ ತಾಯಿ ಶಾರದೆಗೆ ಗಜಲಕ್ಷ್ಮಿ ಅಲಂಕಾರ ಇರಲಿದ್ದು,ಬೆಳಿಗ್ಗೆ ಲಕ್ಷ್ಮೀನಾರಾಯಣ ಹೃದಯ ಹೋಮ,ರಾಮಪಟ್ಟಾಭಿಷೇಕ ಸರ್ಗ ಪಾರಾಯಣೆ ನಡೆಯಲಿದ್ದು ಸಂಜೆ ವಿಜಯೋತ್ಸವ,ಬೀದಿ ಉತ್ಸವ, ಶಮಿ ಪೂಜೆ ನಡೆಯಲಿದ್ದು ಜಗದ್ಗುರುಗಳು ಭಾಗವಹಿಸಲಿದ್ದಾರೆ.
ವಿಜೃಂಭಣೆಯ ಶಾರದಾಂಬ ಮಹಾರಥೋತ್ಸವ
ಅ.13ರ ಭಾನುವಾರದಂದು ಗಜಾಶ್ವಗಳ ಸಹಿತ,ಹಲವಾರು ಸ್ಥಬ್ಧ ಚಿತ್ರಗಳು,ಡೋಲು,ಚಂಡೆ,ವಾದ್ಯ,ಭಜನೆ,ಮಂತ್ರಘೋಷಗಳೊಡನೆ ಅದ್ದೂರಿ ಶ್ರೀಶಾರದಾಂಬ ಮಹಾರಥೋತ್ಸವ ನಡೆಯಲಿದ್ದು,ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಇದರೊಂದಿಗೆ ಶಾರದಾ ಶರನ್ನವರಾತ್ರಿಗೆ ತೆರೆ ಬೀಳಲಿದೆ. ಈಗಾಗಲೇ ಶೃಂಗೇರಿಗೆ ಪ್ರವಾಸಿಗರು ಆಗಮಿಸುತ್ತಿದ್ದು ಮಹಾರಥೋತ್ಸವಕ್ಕೆ ಲಕ್ಷಾಂತರ ಜನ ಸೇರಲಿದ್ದಾರೆ. ಇದಕ್ಕಾಗಿ ಎಲ್ಲಾ ತಯಾರಿಗಳು ಭರದಿಂದ ಸಾಗಿದೆ.
ಹರಿಹರಪುರ ಹಾಗೂ ಹೋರನಾಡಿನಲ್ಲೂ ವಿಜೃಂಭಣೆಯ ದಸರಾ ಆಚರಣೆ
ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಹಾಗೂ ಹರಿಹರಪುರ ಲಕ್ಷ್ಮೀನೃಸಿಂಹ ಮಠದಲ್ಲಿ ಕೂಡ ವೈಭವದ ನವರಾತ್ರಿ ಉತ್ಸವ ನಡೆಯುತ್ತಿದ್ದು ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಹರಿಹರಪುರಕ್ಕೆ ಶಾಸಕ ರಾಜೇಗೌಡ ಭೇಟಿ ನೀಡಿ ದೇವರ ದರ್ಶನ ಪಡೆದರು.