ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ” ರವರ ಜನ್ಮ ದಿನಾಚರಣೆ
-ಜಯಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿ ಸಂಭ್ರಮಾಚರಣೆ.
-ಪುಷ್ಪ ನಮನ ಸಲ್ಲಿಸಿದ ನಂತರ ಶಾಲಾ ಸುತ್ತಮುತ್ತ ಶ್ರಮದಾನ, ಸ್ವಚ್ಛತೆ ಕೆಲಸ ಪೂರ್ಣಗೊಳಿಸಿದರು.
NAMMUR EXPRESS NEWS
ಜಯಪುರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ವಿನೂತನವಾಗಿ ಗಾಂಧೀ ಜಯಂತಿಯನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಶ್ರೀಲತಾ, ಉಪಾಧ್ಯಕ್ಷರಾದ ಶ್ರೀಮತಿ ಶೃತಿ, CRP ಧನಂಜಯ್, ಮುಖ್ಯ ಶಿಕ್ಷಕರು ಶ್ರೀಮತಿ ಮಂಜುಳಾ, ಎಸ್ ಡಿ ಎಂ ಸಿ ಯ ಎಲ್ಲ ಸದಸ್ಯರು, ಊರಿನ ಗ್ರಾಮಸ್ಥರುಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಅತ್ಯಂತ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಶಿಕ್ಷಕರುಗಳಾದ ಶ್ರೀಮತಿ ಹೇಮಾವತಿ ಮತ್ತು ಶ್ರೀಯುತ ಶಿವಕುಮಾರ್ ಇವರುಗಳ ಕೈಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಷ್ಪ ನಮನ ಸಲ್ಲಿಸಿದ ನಂತರ ಶಾಲಾ ಸುತ್ತಮುತ್ತ ಶ್ರಮದಾನ ಮಾಡಿ ಸ್ವಚ್ಛಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಹೇಮಾವತಿ ಮತ್ತು ಶ್ರೀಯುತ ಶಿವಕುಮಾರ್ ಅವರನ್ನು ಅತ್ಯಂತ ಗೌರವದಿಂದ
ಸನ್ಮಾನಿಸಿದರು. ಮುಖ್ಯ ಅತಿಥಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲ ತಾಂಬೂಲಗಳೊಂದಿಗೆ ಬೆಳ್ಳಿ ಕಾಣಿಕೆಗಳನ್ನು ನೀಡಿ ಗೌರವಿಸಿದರು. ಸನ್ಮಾನಿತರು ಕಾರ್ಯಕ್ರಮವನ್ನು ಉದ್ದೇಶಿಸಿ ಗಾಂಧಿ ಜಯಂತಿ ಬಗ್ಗೆ ಮಾತನಾಡುತ್ತಾ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ವ್ಯಕ್ತಿತ್ವ ಹಾಗೂ ಅವರು ದೇಶಕ್ಕೆ ನೀಡಿದ ಮಹಾನ್ ಕೊಡುಗೆಗಳ ಬಗ್ಗೆ ತಿಳಿಸಿದರು. ಈ ಮಹಾನ್ ವ್ಯಕ್ತಿಗಳು ನಡೆದು ಬಂದ ದಾರಿಯಲ್ಲಿ ನಾವಲ್ಲರೂ ಸಾಗಬೇಕು . ನಮ್ಮ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವುದರ ಜೊತೆಗೆ ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಗುವಂತೆ ಮಕ್ಕಳನ್ನು ಪೋಷಿಸಿ ಬೆಳೆಸಬೇಕು ಎಂದು ತಿಳಿಸಿದರು.
ಸನ್ಮಾನಿತರಾದ ಇಬ್ಬರು ಶಿಕ್ಷಕರುಗಳು ಸದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಸಭಿಕರಲ್ಲಿ ಹಂಚಿಕೊಂಡರು ಈ ಸಂದರ್ಭದಲ್ಲಿ ಪೋಷಕರು ಹಾಗೂ ಮಕ್ಕಳು ಭಾವುಕರಾಗಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು. ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಪೋಷಕರು, ಶಾಲಾ ಎಸ್ ಡಿ ಎಂ ಸಿ ಸಮಿತಿಯವರು ಉತ್ತಮವಾಗಿ ಸಹಕರಿಸಿರುವುದಾಗಿ ತಿಳಿಸಿದರು. ಮುಂದೆಯೂ ಕೂಡ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಾಲಾ ಸಮಿತಿ ಹಾಗೂ ಪೋಷಕರು ಸಹಕಾರವನ್ನು ನೀಡಬೇಕು ಎಂದು ಸೂಚಿಸಿದರು.
ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಧನಂಜಯ್ ರವರು ಸನ್ಮಾನಿತರಾದ ಈ ಇಬ್ಬರು ಶಿಕ್ಷಕರುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಖಾಸಗಿ ಶಾಲಾ ಮಕ್ಕಳಿಗಿಂತ ಕಡಿಮೆ ಇಲ್ಲದಂತೆ ಮಕ್ಕಳಲ್ಲಿ ಕಲಿಕೆ ಹಾಗೂ ಶಿಸ್ತನ್ನು ಮೂಡಿಸಿರುತ್ತಾರೆ. ಶಾಲಾ ಶೈಕ್ಷಣಿಕ ಮತ್ತು ಇಲಾಖಾ ಚಟುವಟಿಕೆಗಳಲ್ಲಿ ಇಬ್ಬರು ಶಿಕ್ಷಕರು ಸರಿಸಮಾನವಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಅತ್ಯಂತ ಉತ್ಸಾಹದಿಂದ ಕರ್ತವ್ಯ ನಿರ್ವಹಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಇಬ್ಬರು ಶಿಕ್ಷಕರನ್ನು ಗೌರವಯುತವಾಗಿ ಸನ್ಮಾನಿಸಿದ ಶಾಲಾ ಸಮಿತಿ ಮತ್ತು ಗ್ರಾಮಸ್ಥರಿಗೆ ಇಲಾಖೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ವೇದಿಕೆಯ ಅಧ್ಯಕ್ಷತೆ ವಹಿಸಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಶ್ರೀಲತಾ ರವರು ಮಾತನಾಡುತ್ತಾ ಗಾಂಧಿ ಜಯಂತಿಯ ದಿನದಂದು ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಗೌರವಿಸಿದ್ದು ಎಲ್ಲರಿಗೂ ಸಂತಸ ತಂದಿದೆ ಎಂಬ ವಿಚಾರವನ್ನು ಹಂಚಿಕೊಂಡರು. ಇಬ್ಬರು ಶಿಕ್ಷಕರು ಅತ್ಯಂತ ಪ್ರಾಮಾಣಿಕವಾಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಶಾಲಾ ಸಮಿತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ SDMC ಅಧ್ಯಕ್ಷರ ಸ್ಥಾನವನ್ನು ಮಹಿಳೆಯರಿಗೆ ನೀಡಿ ಪ್ರೋತ್ಸಾಹ ನೀಡಿರುತ್ತಾರೆ ಇವರ ಮುಂದಿನ ವೃತ್ತಿ ಜೀವನ ಮತ್ತು ವ್ಯಯಕ್ತಿಕ ಜೀವನ ಚೆನ್ನಾಗಿರಲೆಂದು ದೇವರಲ್ಲಿ ಪ್ರಾರ್ಥಿಸಿಕೊಂಡರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಸರಳ ವ್ಯಕ್ತಿತ್ವ ಜೀವನದ ಬಗ್ಗೆ ಮಕ್ಕಳಿಗೆ ತಿಳಿಸಿ ಅಧ್ಯಕ್ಷೀಯ ಭಾಷಣವನ್ನು ಮುಗಿಸಿದರು. ಲಘು ಉಪಹಾರ ಮತ್ತು ಸಿಹಿಯನ್ನು ಹಂಚಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.