ಚಿಕ್ಕಮಗಳೂರು ಟಾಪ್ ನ್ಯೂಸ್
– ಬಾಳೆಹೊನ್ನೂರು: ಹುಲಿ ದಾಳಿಯಿಂದ ಇಬ್ಬರಿಗೆ ಗಂಭೀರ ಗಾಯ!
– ಕಾಫಿನಾಡಿಗೆ ಮತ್ತೆ ಬೀಟಮ್ಮ ಗ್ಯಾಂಗ್ ಎಂಟ್ರಿ!
– ವಿದ್ಯುತ್ ಸ್ಪರ್ಶಿಸಿ ಸಲಗ ಸಾವನ್ನಪ್ಪಿರುವ ಘಟನೆ!
NAMMUR EXPRESS NEWS
ಬಾಳೆಹೊನ್ನೂರು: ಕಾಡು ಪ್ರಾಣಿಯ ದಾಳಿಯಿಂದ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಬಿದರೆ ಪಂಚಾಯಿತಿಯ ನೆಲ್ಲಿಖಾನ್ ಬಳಿ ನಡೆದಿದೆ. ಮೇಸ್ತ್ರಿಯಾದ ರಾಜು ಹಾಗೂ ಅಸ್ಸಾಂ ಮೂಲದ ವ್ಯಕ್ತಿ ಮೇಲೆ ಕಾಡು ಪ್ರಾಣಿ ದಾಳಿ ಮಾಡಿದೆ.
ರಾಜು ಅವರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿದ್ದು, ಅಸ್ಸಾಂ ಮೂಲದ ವ್ಯಕ್ತಿಯನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆಯವರು ಹುಲಿ ಬಿಟ್ಟಿದ್ದಾರೆ ಅದರಿಂದಲೇ ದಾಳಿಯಾಗಿದೆ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ, ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಹುಲಿ ದಾಳಿ ಎಂಬ ವದಂತಿ ಸತ್ಯಕ್ಕೆ ದೂರವಾಗಿದ್ದು, ಕಾಡು ಕೋಣದ ದಾಳಿಯಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ.
– ಕಾಫಿನಾಡಿಗೆ ಮತ್ತೆ ಬೀಟಮ್ಮ ಗ್ಯಾಂಗ್ ಎಂಟ್ರಿ!
ಚಿಕ್ಕಮಗಳೂರು: ಕಾಫಿನಾಡಿಗೆ ಮತ್ತೆ ಬೀಟಮ್ಮ ಗ್ಯಾಂಗ್ನಲ್ಲಿದ್ದ ಕೆಲವು ಕಾಡಾನೆಹಿಂಡು ಲಗ್ಗೆ ಇಟ್ಟಿದ್ದು, ಕಾಡಾನೆಗಳ ಹಿಂಡನ್ನ ಕಂಡು ಜನರು ಎದ್ದು,ಬಿದ್ದು ಓಟಕಿತ್ತಿದ್ದಾರೆ. ಈಗ ಹಣ್ಣಾಗಿರುವ ಕಾಫಿಯನ್ನು ಕಾರ್ಮಿಕರು ಕೊಯ್ದುಮಾಡುತ್ತಿರುವಾಗಲೇ ಕಾಡಾನೆ ಹಿಂಡು ತೋಟಕ್ಕೆ ಲಗ್ಗೆ ಇಟ್ಟಿದ್ದು, ಕಾರ್ಮಿಕರು ಜೀವಭಯದಿಂದ ಮನೆಸೇರಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ಲೂರಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಟಮ್ಮ ಗುಂಪಿನ ಆನೆಗಳು ಕಾಣಿಸಿಕೊಂಡಿವೆ. ತುಡುಕೂರು ಗ್ರಾಮದ ಉದಯಗೌಡ ಮತ್ತು ಮಹೇಶಗೌಡ ಎಂಬುದವರ ತೋಟದಲ್ಲಿ ಗೇಟ್ ಮುರಿದು ಸುಮಾರು 20 ಆನೆಗಳು ತೋಟಕ್ಕೆ ನುಗ್ಗಿದ್ದರಿಂದ ಕಾಫಿಹಣ್ಣನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಕಾರ್ಮಿಕರು ಓಟ ಕಿತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿನೀಡಿ ಪರಿಶೀಲಿಸಿದ್ದಾರೆ.
– ವಿದ್ಯುತ್ ಸ್ಪರ್ಶಿಸಿ ಸಲಗ ಸಾವನ್ನಪ್ಪಿರುವ ಘಟನೆ!
ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್ʼನ ಒಂದು ಸಲಗ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ತುಡುಕೂರು ಗ್ರಾಮದ ಬಳಿ ನಡೆದಿದೆ. ಕಳೆದ 3 ದಿನಗಳಿಂದ ಬೀಟಮ್ಮ ಗ್ಯಾಂಗ್ʼನ 17 ಕಾಡಾನೆಗಳ ಹಿಂಡು ತುಡುಕೂರು ಸುತ್ತಮುತ್ತ ಇದ್ದು, ಸಾಕಷ್ಟು ಬೆಳೆಗಳನ್ನು ನಾಶ ಮಾಡಿದೆ. ಈ 17 ಕಾಡಾನೆಗಳಲ್ಲಿ ಒಂದು ಕಾಡಾನೆ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.