ಕಾಫಿನಾಡಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ!
– ವಿಮಾನ ನಿಲ್ದಾಣದ ಕನಸಿಗೆ ಮತ್ತೆ ಬಂತು ಜೀವ
– ಯಾವಾಗ ನಿರ್ಮಾಣವಾಗಲಿದೆ ಗೊತ್ತಾ…?
– ಎಷ್ಟು ಎಕರೆ ಭೂಮಿ ಬೇಕಾಗುತ್ತೆ? ಅನುಕೂಲ ಏನು?
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣದ ಕನಸಿಗೆ ಮತ್ತೆ ಜೀವ ಬಂದಿದೆ. ಅಗತ್ಯ ಇರುವ ಹೆಚ್ಚುವರಿ ಜಾಗ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. 2023-24ರ ವಾರ್ಷಿಕ ಬಜೆಟ್ನಲ್ಲಿ ಚಿಕ್ಕಮಗಳೂರಿನಲ್ಲಿ ಏರ್ ಸ್ಟ್ರಿಪ್ ಯೋಜನೆಯನ್ನು ಸರ್ಕಾರ ಘೋಷಿಸಿತ್ತು. 20 ಆಸನ ಸಾಮಥ್ಯದ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಕನಿಷ್ಠ 1,200 ಮೀಟರ್ ಉದ್ದ ಮತ್ತು 150 ಮೀಟರ್ ಅಗಲದ ರನ್ವೇ ಅಗತ್ಯವಿತ್ತು. ಇದೀಗ ಆ ಪ್ರಕ್ರಿಯೆ ಶುರುವಾಗಿದೆ.
ಎಷ್ಟು ಎಕರೆ ಭೂಮಿ ಬೇಕಾಗುತ್ತೆ?
ಮಿನಿ ವಿಮಾನ ನಿಲ್ದಾಣಕ್ಕೆ ಒಟ್ಟು 140 ಎಕರೆ ಭೂಮಿ ಬೇಕಾಗುತ್ತದೆ. ಕೈಗಾರಿಕೆಗಳ ಇಲಾಖೆಯ ಹೆಸರಿನಲ್ಲಿ 105 ಎಕರೆ ಜಮೀನು ಮತ್ತು ಹತ್ತಿರದ 15 ಎಕರೆ ಸರ್ಕಾರಿ ಭೂಮಿಯನ್ನು ಪ್ರಸ್ತುತ ಯೋಜನೆಗೆ ಮೀಸಲಿಡಲಾಗಿದೆ. ಒಟ್ಟು 120.2 ಎಕರೆ ಭೂಮಿ ಲಭ್ಯವಿದ್ದು, ಉಳಿದ 19.21 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.
ಜಿಲ್ಲಾಡಳಿತ ಅಗತ್ಯ ಭೂಮಿ ಒದಗಿಸಿದರೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಮಿನಿ ವಿಮಾನ ನಿಲ್ದಾಣದ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.