ಕಸ್ತೂರಿ ರಂಗನ್ ವರದಿ ಜಾರಿಗೆ ಕೊನೆ ಪ್ಲಾನ್!
* ಒತ್ತುವರಿ ತೆರವು ಆತಂಕದಲ್ಲಿ ಮಲೆನಾಡಿನ ಜನತೆ
* ಸಣ್ಣಪುಟ್ಟ ಒತ್ತುವರಿ ಮಾಡಿಕೊಂಡ ಕೃಷಿ ಚಟುವಟಿಕೆಗೆ ಸವಾಲು
NAMMUR EXPRESS NEWS
ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಲ್ಲಿರುವ ಶೃಂಗೇರಿ ತಾಲೂಕಿನ ಬಹುತೇಕ ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿದ್ದು, ಕಸ್ತೂರಿ ರಂಗನ್ ವರದಿ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಇನ್ನೊಂದೆಡೆ ಒತ್ತುವರಿ ತೆರವು ಆದೇಶ ಇದೀಗ ರೈತರಿಗೆ ಢವ ಢವ ಶುರುವಾಗಿದೆ.
ಈಗಾಗಲೇ 5 ಬಾರಿ ಕರಡು ಅಧಿಸೂಚನೆ ಪ್ರಕಟಗೊಂಡಿದ್ದರೂ, ಮತ್ತೆ ಆರನೇ ಬಾರಿ ಕರಡು ಅಧಿಸೂಚನೆ ಪ್ರಕಟವಾಗಲಿದ್ದು, ಆಕ್ಷೇಪಣೆಗೆ ಸಂಬಂಧಿಸಿದಂತೆ 60 ದಿನಗಳ ಗಡುವು ನೀಡಲಾಗಿತ್ತು. ಪಶ್ಚಿಮ ಘಟ್ಟ ತಪ್ಪಲಿನ ನೂರಾರು ಹಳ್ಳಿಗಳು ವರದಿ ಜಾರಿಗೆ ಬಂದರೆ ಸಮಸ್ಯೆಗೆ ಸಿಲುಕಲಿದೆ.
ಈಗಾಗಲೇ ಸರ್ಕಾರದ ಅರಣ್ಯ ಕಾಯ್ದೆಗಳು, ಅರಣ್ಯ ಇಲಾಖೆ ನೀತಿ ನಿಯಮಗಳಿಂದ ನಿರಂತರ ಶೋಷಣೆ ಗೊಳಗಾಗುತ್ತಿರುವ ಈ ಭಾಗದ ನಿವಾಸಿಗಳಿಗೆ ಇನ್ನೂ ಕಸ್ತೂರಿ ರಂಗನ್ ವರದಿ ಜಾರಿಯಾದರೆ ವಿದ್ಯುತ್, ರಸ್ತೆ, ಸೇತುವೆ, ಕುಡಿಯುವ ನೀರು, ಜನವಸತಿ ಪ್ರದೇಶ, ಮನೆಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳಿಗೆ ಕುತ್ತು ಬಂದು ಭವಿಷ್ಯದ ಬದುಕಿನ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಮಡುಗಟ್ಟಿದೆ.
ಸಣ್ಣ ರೈತರು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಅವರ ಭೂಮಿ ಕಸಿದುಕೊಂಡು ಅವರ ಬದುಕಿಗೆ ಕೊಡಲಿಯೇಟು ನೀಡಲು ಹೊರಟಿದೆ.ಕಸ್ತೂರಿ ರಂಗನ್ ವರದಿ ಮಾರಕ ಯೋಜನೆ. ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ಕೈ ಬಿಡಬೇಕೆಂಬುದು ರೈತರ ಬೇಡಿಕೆಯಾಗಿದೆ