ಕಾಫಿನಾಡಲ್ಲಿ ಭೂಕುಸಿತ: ಅವೈಜ್ಞಾನಿಕ ಕಾಮಗಾರಿಯೇ ಕಾರಣ!
* ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದಿಂದ ಅಧ್ಯಯನ
* ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಮಳೆಗಾಲದಲ್ಲಿ ಪ್ರತಿ ಬಾರಿ ಭೂಕುಸಿತ ಉಂಟಾಗಲು ಭಾರಿ ಮಳೆಯೊಂದಿಗೆ ಅವೈಜ್ಞಾನಿಕವಾಗಿ ನಡೆಸಿರುವ ಕಾಮಗಾರಿಗಳೂ ಕಾರಣ ಎಂದು ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿಗೆ ವರದಿ ನೀಡಿದೆ. ಇದರೊಂದಿಗೆ ಭೂ ಕುಸಿತ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಲಹೆಗಳನ್ನೂ ಕೊಟ್ಟಿದೆ.
ತಾಲೂಕಿನ ಮುಳ್ಳಯ್ಯನ ಗಿರಿ, ದತ್ತಪೀಠ ರಸ್ತೆ, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ತಾಲೂಕಿನ ಅಲ್ಲಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಧಾರಾಕಾರ ಮಳೆ ಇನ್ನೊಂದು ವಾರ ಮುಂದುವರಿದಿದ್ದಲ್ಲಿ ಕೇರಳದ ವಯನಾಡಿನಲ್ಲಿ ನಡೆದಂಥ ಅವಘಡ ಕಾಫಿನಾಡಿನಲ್ಲಿಯೂ ಸಂಭವಿಸುವ ಅಪಾಯವಿತ್ತು. ಹೀಗಾಗಿ ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರ ತಂಡವನ್ನು ಚಿಕ್ಕಮಗಳೂರಿನ ಭೂ ಕುಸಿತ ಪ್ರದೇಶಗಳಿಗೆ ಕಳಿಸಿ ಭೂ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಆದ್ದರಿಂದ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ದಕ್ಷಿಣ ವಲಯದ ನಿರ್ದೇಶಕ ಡಾ. ಸಜೀವ್ ಹಾಗೂ ಸಹ ಸಿಬ್ಬಂದಿ ಡಿ.ಎಸ್.ರವಿ ಸೇರಿದಂತೆ ಅಧಿಕಾರಿಗಳ ತಂಡ ಆ.10 ರಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳ ಸುಮಾರು 15ಕ್ಕೂ ಹೆಚ್ಚು ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತ್ತು, ದತ್ತಪೀಠ ರಸ್ತೆ, ಮುಳ್ಳಯ್ಯನಗಿರಿ, ಕೊಪ್ಪ ತಾಲೂಕಿನ ಗುಡ್ಡೇತೋಟ, ಹೊರನಾಡು-ಜಯಪುರ ರಸ್ತೆ, ಬಸರೀಕಟ್ಟೆ, ನಾರ್ವೆ, ಶೃಂಗೇರಿ ಪಟ್ಟಣ, ಕೆರೆಕಟ್ಟೆ, ನೆಮ್ಮಾರ್, ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಎಲ್ಲ ಕಡೆಗಳಲ್ಲಿ ಪ್ರಮುಖವಾಗಿ ಭಾರಿ ಮಳೆಯಿಂದಲೇ ಭೂ ಕುಸಿದಿದೆ. ಜತೆಗೆ ಅಲ್ಲಲ್ಲಿ ನಡೆಸಿರುವ ಅವೈಜ್ಞಾನಿಕ ಕಾಮಗಾರಿಗಳೂ ಭೂ ಕುಸಿತಕ್ಕೆ ಕಾರಣ ಎಂಬುದನ್ನು ವರದಿಯಲ್ಲಿ ತಜ್ಞರ ತಂಡ ಉಲ್ಲೇಖಿಸಿದೆ. ರಸ್ತೆ ಹಾಗೂ ಗುಡ್ಡದ ಇಳಿಜಾರು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ. ಕೆಲವೆಡೆ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮಳೆಯ ನೀರು ಹರಿಯಲು ಚರಂಡಿ ನಿರ್ಮಾಣ ಮಾಡಿಲ್ಲ. ರಸ್ತೆ ನಿರ್ಮಾಣಕ್ಕೆ ಬೆಟ್ಟಗಳ ಮಣ್ಣನ್ನು ತೆಗೆಯಲಾಗಿದ್ದು, ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಿಲ್ಲ. ಹೀಗಾಗಿ ನಿರಂತರ ಮಳೆಯ ಸಂದರ್ಭದಲ್ಲಿ ಬೆಟ್ಟದ ಮೇಲೆ ಬೀಳುವ ಮಳೆಯ ನೀರು ಸಡಿಲವಾದ ಮಣ್ಣಿನೊಂದಿಗೆ ಬೆರೆತು ಭೂ ಕುಸಿತ ಉಂಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭೂಕುಸಿತ ತಡೆಯಲು ನೀಡಿದ ಸಲಹೆಗಳೇನು?
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಳೆಗಾಲದ ವೇಳೆ ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತದೆ. ಈ ಬಾರಿಯೂ ಕೆಲವೆಡೆ ಧರೆ ಕುಸಿದಿತ್ತು. ಈ ಸಂಬಂಧ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರ ತಂಡ ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ ತಡೆಯಲು ಹಲವು ಸಲಹೆ ನೀಡಿದೆ.
* ಹೆದ್ದಾರಿ ಪಕ್ಕದಲ್ಲಿ ಸೈಡ್ ಡೇಪರಿ ಸಿಸ್ಟಮ್ ಅಳವಡಿಸಬೇಕು,ಅಂದರೆ ಇಳಿಜಾರಿನ ಅತ್ಯಂತ ದುರ್ಬಲ ಭಾಗಗಳನ್ನು ಗುರುತಿಸಿ ಅಲ್ಲಿಗೆ ಸೈಡ್ ಡೇಪರಿ ಸ್ಟೋಪ್ ಸಿಸ್ಟಮ್ ಅಳವಡಿಸಬೇಕು.
* ರಾಕ್ ಸೈಲಿಂಗ್ ಮತ್ತು ಸ್ಥಿರೀಕರಣ, ನಿಯಮಿತವಾಗಿ ಇಳಿಜಾರನ್ನು ಪರೀಕ್ಷಿಸಿ ಮತ್ತು ರಾಕ್ ಸೈಲಿಂಗ್ ತಂತ್ರಗಳನ್ನು ಬಳಸಿಕೊಂಡು ಸಡಿಲವಾದ ಅಥವಾ ಅಸ್ಥಿರವಾದ ಬಂಡೆಯ ತುಣುಕುಗಳನ್ನು ತೆಗೆಯಲು, ಅಪಾಯಕಾರಿ ಬಂಡೆಗಳನ್ನು ಹೊರಹಾಕಲು ಮತ್ತು ತೆಗೆಯಲು ಸಹಕಾರಿಯಾಗಲಿದೆ.
* ಕಲ್ಲು ಬೀಳುವ ಹಾಗೂ ಹೆಚ್ಚಿನ ಅಪಾಯ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ಚಿಹ್ನೆಗಳನ್ನು ಮತ್ತು ಭೌತಿಕ ತಡೆಗಳನ್ನು ಸ್ಥಾಪಿಸಬೇಕು.
* ಮೇಲ್ಮೈ ಹರಿವನ್ನು ಕಡಿಮೆ ಮಾಡಲು, ನೀರಿನ ಹರಿವನ್ನು ನಿರ್ವಹಿಸಲು ಮತ್ತು ಇಳಿಜಾರಿನ ಸ್ಥಿರತೆ ಹೆಚ್ಚಿಸಲು ಲೈನಿಂಗ್ ಟೋ ಡೈನ್ ನಿರ್ಮಿಸಬೇಕು.
* ಆಯಕಟ್ಟಿನ ರೀತಿಯಲ್ಲಿ ಕಲ್ವರ್ಟ್ಗಳನ್ನು ನಿರ್ಮಿಸಿ ಪರಿಣಾಮಕಾರಿ ನೀರಿನ ನಿರ್ವಹಣೆ ಮತ್ತು ಇಳಿಜಾರು ಸ್ಥಿರೀಕರಣ ಅವಕಾಶ ಮಾಡಿಕೊಡಬೇಕು.
* ಮಳೆಗಾಲದಲ್ಲಿ ಜಲಪಾತಗಳ ಸಮೀಪವಿರುವ ಪ್ರದೇಶಗಳನ್ನು ತಡೆರಹಿತ ವಲಯಗಳಾಗಿ ಗೊತ್ತುಪಡಿಸಿ, ನೀರು-ಸಂಬಂಧಿತ ಅಪಾಯಗಳನ್ನು ಕಡಿಮೆ ಮಾಡಲು ಸ್ಪಷ್ಟ ಸಂಚಾರ ನಿಯಮಗಳನ್ನು ಅಳವಡಿಸಿ ಮತ್ತು ಅವುಗಳನ್ನು ಜಾರಿಗೊಳಿಸಬೇಕು ಎಂಬ ಸಲಹೆಗಳನ್ನು ನೀಡಲಾಗಿದೆ.