ಕ್ಷೇತ್ರದ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರ್!
* ಕಾಣೆಯಾಗಿದ್ದಾರೆ ಶೃಂಗೇರಿ ಕ್ಷೇತ್ರದ ಶಾಸಕ ಎಂದ ಜನ
* ರಸ್ತೆ ಗುಂಡಿಗಳಿಂದ ಕೈ ಕಾಲು ಮುರಿದು ಕೊಂಡ ಕ್ಷೇತ್ರದ ಜನತೆ
NAMMUR EXPRESS NEWS
ಶೃಂಗೇರಿ/ಕೊಪ್ಪ/ಎನ್. ಆರ್. ಪುರ: ಶಾಸಕರೇ ನಮಗೆ ಸಿಂಗಾಪುರ ರಸ್ತೆ ಬೇಡ ಸ್ವಾಮೀ.. ನಮಗೆ ನಮ್ಮ ಈ ಹಿಂದಿನ ಶೃಂಗೇರಿ ಕ್ಷೇತ್ರದ ರಸ್ತೆಗಳನ್ನು ಕೊಡಿ ಸಾಕು..!!” ಹೌದು ಇದು ಶೃಂಗೇರಿ ಕ್ಷೇತ್ರದ ಜನರ ಕೂಗು. ರಸ್ತೆ ಗುಂಡಿಗಳಿಂದ ದಿನೇ ದಿನೇ ಅಪಘಾತಗಳಾಗಿ ಜನರು ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶೃಂಗೇರಿ ಕ್ಷೇತ್ರದ ರಸ್ತೆಗಳಲ್ಲಿನ ಹೊಂಡಗಳದ್ದೇ ಚರ್ಚೆಗಳಾಗುತ್ತಿದೆ. ರಸ್ತೆ ಸರಿಪಡಿಸುವಂತೆ ಕನಿಷ್ಠ ರಸ್ತೆಗುಂಡಿಗಳನ್ನಾದರೂ ಮುಚ್ಚುವಂತೆ ಕ್ಷೇತ್ರದ ಜನ ಒತ್ತಾಯಿಸಿದ್ದಾರೆ. ಈ ವಿಷಯ ಇಷ್ಟೆಲ್ಲ ಗಂಭೀರ ಸ್ವರೂಪ ಪಡೆಯುತ್ತಿದ್ದರೂ ಕ್ಷೇತ್ರದ ಶಾಸಕರು ಸ್ಪಂದಿಸುತ್ತಿಲ್ಲ. ಕ್ಷೇತ್ರಕ್ಕೆ ಬರೋ ಸಾವಿರಾರು ಪ್ರವಾಸಿಗರು ರಸ್ತೆಯ ಅವಸ್ಥೆನೋಡಿ ಹಿಡಿಶಾಪ ಹಾಕುತ್ತಿದ್ದಾರೆ. ವರ್ಷಕ್ಕೊಮ್ಮೆ ವಾಹನ ಸರ್ವೀಸ್ಗೆ ಬಿಡುತ್ತಿದ್ದ ಮಾಲಿಕರು,ಚಾಲಕರು ಈಗ ತಿಂಗಳಿಗೊಮ್ಮೆ ರಿಪೇರಿಗೆ ಬಿಡುವಂತಾಗಿದೆ.
ಆಟೋ,ಟಾಕ್ಸಿ ಚಾಲನೆ ಮಾಡಿ ದುಡಿಮೆ ಮಾಡುತ್ತಿದ್ದ ಮಧ್ಯಮ ವರ್ಗ ಈಗ ದುಡಿದ ದುಡ್ಡನ್ನ ಪೂರ್ತಿ ವಾಹನ ರಿಪೇರಿಗೆ ಹಾಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ಸಿಂಗಾಪುರದ ರಸ್ತೆ ಬೇಡ!
ನಾನು ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರವನ್ನು ಸಿಂಗಾಪುರ ಮಾಡುತ್ತೇನೆ ಎಂದು ಹೇಳಿದ್ದ ಶೃಂಗೇರಿ ಕ್ಷೇತ್ರದ ಶಾಸಕರಿಗೆ ಈಗ ಜನ ನಿಮ್ಮ ಸಿಂಗಾಪುರದ ರಸ್ತೆ ಬೇಡ ನಮಗೆ ನಮ್ಮ ಈ ಹಿಂದೆಯಿದ್ದ ಶೃಂಗೇರಿ ಕ್ಷೇತ್ರದ ರಸ್ತೆ ಕಲ್ಪಿಸಿ ಸಾಕು ಎನ್ನುತ್ತಿದ್ದಾರೆ.
ಅರ್ಧಗಂಟೆಯಲ್ಲಿ ತಲುಪುವ ರಸ್ತೆಯಲ್ಲಿ ಈಗ ಒಂದು ಗಂಟೆ ಸಮಯ ಹಿಡಿಯುತ್ತಿದ್ದು ಗುಂಡಿ ತಪ್ಪಿಸಿ ಹೋಗುವುದೇ ದೊಡ್ಡ ಸಾಹಸವಾಗಿದೆ ಎಂದು ವಾಹನ ಚಾಲಕರು ಹೇಳುತ್ತಿದ್ದಾರೆ.
ಶಾಸಕರ ಊರ ಬಳಿಯ ರಸ್ತೆಯಲ್ಲೇ ದೊಡ್ಡ ಹೊಂಡ!
ಶಾಸಕರ ಊರಿನ ದಾರಿ ಹಾಗೂ ಶಾಸಕರು ದಿನ ನಿತ್ಯ ಓಡಾಡೋ ಕ್ಷೇತ್ರದ ಖಾಂಡ್ಯ – ಬಾಳೆಹೊನ್ನೂರು ಮತ್ತು ಖಾಂಡ್ಯ – ಚಿಕ್ಕಮಗಳೂರು ರಸ್ತೆಯಲ್ಲಿಯೇ ದೊಡ್ಡ ಹೊಂಡ ಬಿದ್ದಿದ್ದು ಅಲ್ಲಿನ ಸ್ಥಳೀಯರೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿ ದಿನ ಸಮಸ್ಯೆ ನೋಡುತ್ತಿರುವ ಶಾಸಕರೇ ಈ ಕೂಡಲೇ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು,ಉತ್ತಮ ರಸ್ತೆಗಳ ನಿರ್ಮಾಣ ಮಾಡಿ ಅಪಘಾತದಿಂದಾಗುತ್ತಿರುವ ಸಾವು,ನೋವುಗಳನ್ನು ತಪ್ಪಿಸಿ ಕ್ಷೇತ್ರದ ಜನತೆಗೆ ನೆರವಾಗಬೇಕೆಂಬ ಒತ್ತಾಯ ಕೇಳಿಬಂದಿದೆ.