ಶೃಂಗೇರಿಯಲ್ಲಿ ಅಬ್ಬರಿಸಿದ ಶಿವದೂತ ಗುಳಿಗ..!!?
* ರಂಗ ಸಿಂಗಾರ, ಶೃಂಗೇರಿ ಸಮಿತಿಯಿಂದ ನಾಟಕ ಪ್ರದರ್ಶನ ಆಯೋಜನೆ
* ನಾಟಕ ನೋಡಿ ಖುಷಿ ಪಟ್ಟ ಜನ,ಕಲಾವಿದರ ಅಭಿನಯಕ್ಕೆ ಫುಲ್ ಫಿಧಾ
NAMMUR EXPRESS NEWS
ಶೃಂಗೇರಿ: ತಾಲೂಕಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಮಹಾವೇದಿಕೆಯಲ್ಲಿ ರಂಗ ಸಿಂಗಾರ ತಂಡದಿಂದ ಆಯೋಜನೆಗೊಂಡಿದ್ದ ವಿನಯ್ ಕುಮಾರ್ ಕೋಡಿಯಾಲ್ಬೈಲ್ರವರ ನಿರ್ದೇಶನದ ” ಶಿವದೂತ ಗುಳಿಗ” ನಾಟಕವು ಯಶಸ್ವಿ ಪ್ರದರ್ಶನ ಕಂಡಿದೆ. ನಾಟಕ ನೋಡಲು ಸ್ಥಳೀಯರು ಸೇರಿದಂತೆ ದೂರ ದೂರುಗಳಿಂದ ಸಾವಿರಾರು ಜನ ಸೇರಿದ್ದರು. ಸುಮಾರು ಎಡೂವರೆ ಗಂಟೆಗಳ ಕಾಲ ಪ್ರದರ್ಶನಗೊಂಡ ನಾಟಕದಲ್ಲಿ ಕಾಂತಾರ ಸಿನಿಮಾದಲ್ಲಿ ನಟಿಸಿರುವ ಸ್ವರಾಜ್ ಶೆಟ್ಟಿಯವರ ಅದ್ಭುತ ನಟನೆ ಹಾಗೂ ಸಹಕಲಾವಿದರ ನಟನೆ ಹಾಗೂ ತಾಂತ್ರಿಕತೆಗೆ ನೆರೆದಿದ್ದ ಪ್ರೇಕ್ಷಕರ ಮನಗೆದ್ದಿದೆ. ಕಾರ್ಯಕ್ರಮವನ್ನು ಆದಿಚುಂಚನಗಿರಿ ಶಾಖಾಮಠದ ಶ್ರೀಶ್ರೀಗುಣನಾಥ ಸ್ವಾಮೀಜಿಯವರು ಉದ್ಘಾಟಿಸಿ, ಉಪಸ್ಥಿತರಿದ್ದು ಸಂಪೂರ್ಣ ನಾಟಕವನ್ನು ವೀಕ್ಷಿಸಿದರು.
ದೇವರನ್ನು ಪ್ರೀತಿಸಲು ನಿಜವಾದ ಭಕ್ತಿ,ನಂಬಿಕೆಯ ಅಗತ್ಯವಿದೆ..!!
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಶ್ರೀಗುಣನಾಥ ಸ್ವಾಮೀಜಿಯವರು ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶಗಳು ಮನುಷ್ಯನ ಅಸ್ತಿತ್ವದ ಅಡಿಪಾಯವನ್ನು ರೂಪಿಸುವ ಐದು ಅಂಶಗಳಾಗಿವೆ. ಇವುಗಳನ್ನು ಪೂಜಿಸಿ, ಪ್ರೀತಿಸಿ ಮತ್ತು ಮುಂದಿನ ಪೀಳಿಗೆಗೆ ಉಳಿಸಿವುದರಿಂದ ಪ್ರಕೃತಿ ಮತ್ತು ವಿಶ್ವಕ್ಕೆ ನಾವು ಮಾದರಿಯಾಗುತ್ತೇವೆ. ಇದು ನಮಗೆ ಪರಿಸರದೊಂದಿಗೆ ಸಾಮರಸ್ಯದ ಸಂಬಂಧವನ್ನು ಬೆಳೆಸುತ್ತದೆ. ಆದ್ದರಿಂದ ನಮ್ಮ ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿಯವರು 5 ಕೋಟಿ ಗಿಡಗಳನ್ನು ನೆಡುವ ಮೂಲಕ ಪ್ರಕೃತಿ ಎಷ್ಟು ಅಗತ್ಯ ಎಂಬುದು ತಿಳಿಸಿದ್ದಾರೆ ಎಂದರು.
ದೇವರನ್ನು ಪ್ರೀತಿಸಲು ಮೂಢನಂಬಿಕೆಯಿಂದ ಮುಕ್ತನಾಗಲು ನಿಜವಾದ ನಂಬಿಕೆ ಮತ್ತು ಭಕ್ತಿಯ ಅಗತ್ಯವಿದೆ. ಆಧ್ಯಾತ್ಮಿಕ ಸ್ಪಷ್ಟತೆಯನ್ನು ಉತ್ತೇಜಿಸುವ ಧರ್ಮ ಗ್ರಂಥಗಳು, ಉಪನಿಷತ್ ಮತ್ತು ಬೋಧನೆಗಳ ಮೂಲಕ ದೈವಿಕ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು. ಭಯ ಆಧಾರಿತ ಆಚರಣೆಗಳನ್ನು ಪ್ರೀತಿ, ದಯೆ ಮತ್ತು ನಿಸ್ವಾರ್ಥತೆಯ ಕ್ರಿಯೆಗಳೊಂದಿಗೆ ಬದಲಾಯಿಸಬೇಕು. ಇದು ದೇವರ ಸಾರವನ್ನು ಪ್ರತಿಬಿಂಬಿಸುತ್ತದೆ. ಮೂಡನಂಬಿಕೆ ಅಜ್ಞಾನದಿಂದ ಉಂಟಾಗುತ್ತದೆ, ಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಯೊಂದಿಗೆ ಅದನ್ನು ಎದುರಿಸಿ. ದೈವಿಕತ್ವದ ಜೊತೆ ಆಳವಾದ ಸಂಪರ್ಕವನ್ನು ಬೆಳೆಸುವ ಪ್ರಾರ್ಥನೆ, ಧ್ಯಾನ ಮತ್ತು ನೈತಿಕ ಜೀವನಗಳಂತಹ ಅರ್ಥಪೂರ್ಣ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.