ಶೃಂಗೇರಿ ನಾಗೇಶ್ ಕಾಮತ್ಗೆ ಸೇವಾ ಸಾಧಕ ಸನ್ಮಾನ..
– ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಗೌರವ
– ಸಂಸ್ಥಾಪಕ ದಿ.ಅಜಿತ್ ಕುಮಾರ್ ಪುಣ್ಯಸ್ಮರಣೆ ಪ್ರಯುಕ್ತ ನೀಡುವ ಗೌರವ ಸನ್ಮಾನ
– ತಾಲೂಕಿನಾದ್ಯಂತ ಸೇವಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಾಗೇಶ್ ಕಾಮತ್ ಸೇವೆ
NAMMUR EXPRESS NEWS
ಶೃಂಗೇರಿ: ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಸಂಸ್ಥಾಪಕರಾದ ದಿವಂಗತ ಅಜಿತ್ ಕುಮಾರ್ ಅವರ ಪುಣ್ಯಸ್ಮರಣೆ ನಿಮಿತ್ತ ಸೇವಾ ದಿನವನ್ನು ತಾಲೂಕಿನ ಮಾನುಗಾರಿನ ಜ್ಞಾನ ಭಾರತೀ ವಿದ್ಯಾಕೇಂದ್ರದ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದಿ.ಅಜಿತ್ ಕುಮಾರ್ ಸ್ಮರಣಾರ್ಥ ಸೇವಾ ವಿಭಾಗದಲ್ಲಿ ಹಲವು ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಸೇವಾ ಸಾಧಕ ಸನ್ಮಾನ ನೀಡಿ ಗೌರವಿಸಿದ್ದು, ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಕಳೆದ ಹತ್ತಾರು ವರ್ಷಗಳಿಂದ ಪ್ರಚಾರ ಬಯಸದೆ ಶ್ರಮಿಸುತ್ತಿರುವ ಶೃಂಗೇರಿಯ ನಾಗೇಶ್ ಕಾಮತ್ ಅವರಿಗೆ ಸೇವಾ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಕ್ತಾರರಾಗಿ ಆಗಮಿಸಿದ ಹರಿಹರಪುರದ ಪ್ರಭೋದಿನಿ ಗುರುಕುಲದ ಉಮೇಶ್ ಅವರು ಮಾತನಾಡಿ ಸಂಘದ ಪ್ರಚಾರಕರಾಗಿದ್ದ ಅಜಿತ್ ಕುಮಾರ್ ಅವರು ಸಾಮಾನ್ಯರು ಕೂಡ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು, ಸೇವೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಹಿಂದು ಸೇವಾ ಪ್ರತಿಷ್ಠಾನ ಪ್ರಾರಂಭ ಮಾಡಿದರು, ವಿಶೇಷ ಕಲ್ಪನೆಯೊಂದಿಗೆ ಸದಾ ಸಮಾಜಕ್ಕಾಗಿ ಕೆಲಸ ಮಾಡಿದ ಅಜಿತ್ ಕುಮಾರ್ ಅವರು ಕಡಿಮೆ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಮರಣಹೊಂದಬೇಕಾಯಿತು, ಅವರನ್ನು ಒಮ್ಮೆ ಪೇಜಾವರ ಶ್ರೀಗಳು ಧಾವಂತದ ಸಂತ ಎಂದು ಬಣ್ಣಿಸಿದ್ದರು ಎಂದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹಿಂದು ಸೇವಾ ಪ್ರತಿಷ್ಠಾನ ಸೇವಾ, ಸಂಸ್ಕಾರ ಪರಿಸರ, ಹೀಗೆ ಎಲ್ಲಾ ವಿಭಾಗದಲ್ಲಿ ಕೂಡ ಕಾರ್ಯ ಮಾಡುತ್ತಿದೆ, ಇದೇ ದಾರಿಯಲ್ಲಿ ನಾಗೇಶ್ ಕಾಮತ್ ಅಂತವರು ಕೂಡ ಪ್ರಚಾರ ಬಯಸದೆ ಸ್ವಚ್ಛ ಸುಂದರ ಪರಿಸರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕರಾದ ವಿಶ್ವನಾಥ ಮಾನಗಾರು, ಹಿಂದು ಸೇವಾ ಪ್ರತಿಷ್ಠಾನದ ತಾಲೂಕು ಸಂಯೋಜಕರಾದ ಶ್ರೀ ನೂತನ ಸೂರ್ಯ ಮತ್ತು ಸುಮಂಗಲ ಆನಂದಸ್ವಾಮಿ, ಸುವರ್ಣ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.