ತರೀಕೆರೆ: ಸಾಕಾರಗೊಳ್ಳುತ್ತಿದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕನಸು!
* 29.35 ಕೋಟಿ ಕಾಮಗಾರಿಗೆ ಲೋಕೋಪಯೋಗಿ ಸಚಿವರಿಂದ ಚಾಲನೆ
* ತರೀಕೆರೆ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಯೋಜನೆ
NAMMUR EXPRESS NEWS
ತರೀಕೆರೆ: ತರೀಕೆರೆ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ – 69 ರ ಸರಪಳಿ 169.88 ರಿಂದ 172.38 ಕಿ.ಮೀ. ವರೆಗೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ ಹಾಗೂ ತರೀಕೆರೆ ಪುರಸಭೆ ವ್ಯಾಪ್ತಿಯ ಬಿ. ಹೆಚ್ ರಸ್ತೆ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೆರವೇರಿಸಿದರು.
ತರೀಕೆರೆ ಕ್ಷೇತ್ರದ ಶಾಸಕರಾದ ಜಿ.ಹೆಚ್ ಶ್ರೀನಿವಾಸ್, ಚಿಕ್ಕಮಗಳೂರಿನ ಶಾಸಕರಾದ ಹೆಚ್. ಡಿ. ತಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಮತ್ತು ಕಾಡಾ ಅಧ್ಯಕ್ಷರಾದ ಅಂಶುಮಂತ್ ಗೌಡ ರವರು ಹಾಗೂ ಇತರ ಪ್ರಮುಖ ಮುಖಂಡರುಗಳು ಉಪಸ್ಥಿತರಿದ್ದರು.
ತರೀಕೆರೆ ಶಾಸಕರ ನೇತೃತ್ವದಲ್ಲಿ ಯೋಜನೆ
ದಶಕಗಳ ಪ್ರಯತ್ನದಿಂದ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಸಾಕಾರಗೊಳ್ಳುತ್ತಿದೆ ಎಂದು ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಹೊಣೆ ಕೇಂದ್ರ ಸರ್ಕಾರದ್ದಾಗಿತ್ತಾದರೂ,ರಾಜ್ಯ ಸರ್ಕಾರವೇ ಅಗತ್ಯ ಅನುದಾನ ನೀಡಿ ರಸ್ತೆ ಅಭಿವೃದ್ಧಿಗೆ ಹಸಿರು ನಿಶಾನೆ ತೋರಿದೆ.
ಎಸ್ಎಚ್ಡಿಪಿ, ಅಪೆಂಡಿಕ್ಸ್, ಡಲ್ಟ್, ಸಿಎಂ ವಿಶೇಷ ಅನುದಾನ ಸೇರಿ ವಿವಿಧ ಯೋಜನೆ ಮೂಲಕ ಅಂದಾಜು 29.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದಿದ್ದಾರೆ.
ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ ಪಟ್ಟಣದ ಕೋಡಿ ಕ್ಯಾಂಪ್ನಿಂದ ತಾಲೂಕು ಕಚೇರಿವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, 29.35 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆ ಡಿವೈಡರ್, ಫುಟ್ಪಾತ್, ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿದೆ. ರಸ್ತೆಯ ಎರಡೂ ಬದಿಯಲ್ಲಿ ಯುಜಿಡಿ,30 ಮೀಟರ್ಗೆ ಒಂದರಂತೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಸಿಎಂ ವಿರುದ್ದದ ಮುಡಾ ಹಗರಣದ ಆರೋಪ ಬಿಜೆಪಿಯ ದುರುದ್ದೇಶಿತ ಹುನ್ನಾರ. ಈ ಪ್ರಕರಣದಲ್ಲಿ ಬಿಜೆಪಿ ಇಡಿ, ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದು ಫಲಪ್ರದವಾಗುವುದಿಲ್ಲ. ಏನೇ ಆದರೂ ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಮುಗಿಸಲಿದ್ದಾರೆ ಎಂದು ಶಾಸಕ ಜಿ.ಹೆಚ್ ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.