ಮಲೆನಾಡಲ್ಲಿ ಹೆಚ್ಚಾಯ್ತು ಕಾಡುಪ್ರಾಣಿಗಳ ಹಾವಳಿ..!!
– ಕಾಡಾನೆ,ಕರಡಿ,ಚಿರತೆಯಾಯ್ತು ಈಗ ಹುಲಿಯ ಸರದಿ
– ಶೃಂಗೇರಿಗೆ ಬಂತು ಹುಲಿ,ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ
NAMMUR EXPRESS NEWS
ಶೃಂಗೇರಿ: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಜನರಲ್ಲಿ ಆತಂಕ ಸೃಷ್ಠಿಯಾಗಿದೆ.
ಹಲವು ದಿನಗಳಿಂದ ಕಾಡುಕೋಣ,ಕಡವೆಡಳಂತಹ ಕಾಡು ಪ್ರಾಣಿಗಳು ಕೃಷಿ ಭೂಮಿಗೆ ನುಗ್ಗಿ ಬೆಳೆದ ಬೆಳೆಗಳನ್ನು ನಾಶ ಮಾಡಿ ರೈತರಿಗೆ ತಲೆ ನೋವಾಗಿದ್ದವು ನಂತರ ಕರಡಿ,ಆನೆಗಳು ದಾಳಿ ಮಾಡಲು ಶುರುಮಾಡಿದ್ದವು. ಇದೇ ಮೊದಲ ಬಾರಿಗೆ ಕೆಲವು ದಿನಗಳ ಹಿಂದೆ ಎನ್ ಆರ್ ಪುರ ತಾಲೂಕಿನ ಸೀತೂರು ಹಾಗೂ ಮುತ್ತಿನಕೊಪ್ಪ ಗ್ರಾಮದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಸೀತೂರು ಘಟನೆ ನಡೆದು ಕೇವಲ 20 ದಿನಗಳೊಳಗೆ ಮುತ್ತಿನಕೊಪ್ಪದಲ್ಲಿ ಮತ್ತೆ ಆನೆ ದಾಳಿ ಮಾಡಿ ಒಬ್ಬರನ್ನು ಬಲಿ ಪಡೆದಿತ್ತು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರು ಅರಣ್ಯ ಇಲಾಖೆಯಿಂದ ಯಾವುದೇ ಮುಂಜಾಗ್ರತಾಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಶೃಂಗೇರಿಗೆ ಬಂತು ಹುಲಿ..!!?
ಡಿ.27 ರ ರಾತ್ರಿ 9:30 ರ ಸಮಯದಲ್ಲಿ ಶೃಂಗೇರಿಯಿಂದ ಕೊಪ್ಪ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿ ವಾಹನವೊಂದಕ್ಕೆ ಮಾರ್ಗದ ಉಳುವೆಬೈಲು ಗ್ರಾಮದಲ್ಲಿ ಹುಲಿಯೊಂದು ಅಡ್ಡ ಬಂದಿದೆ ಎನ್ನಲಾಗಿದೆ. ಹುಲಿಯು ಉಳುವೆ ಪಕ್ಷಿಧಾಮದ ಕಡೆಯಿಂದ ಬಂದು ರಸ್ತೆದಾಟಿದೆ. ಇದನ್ನು ಕಂಡು ಗಾಬರಿಗೊಂಡ ಪ್ರಯಾಣಿಕರು ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ. ಹುಲಿ ಹಾಗೆ ರಸ್ತೆದಾಟಿ ಕಾಡಿನೊಳಗೆ ಹೋಗಿದೆ ನಂತರ ಅದೇ ಸಮಯದಲ್ಲಿ ಬೈಕ್ನಲ್ಲಿ ಬಂದ ಸ್ಥಳೀಯರೊಬ್ಬರಿಗೆ ಮಾಹಿತಿ ನೀಡಿ ಗ್ರಾಮದಲ್ಲಿ ತಿಳಿಸಲು ಹೇಳಿ ತೆರಳಿದ್ದಾರೆ. ನಿನ್ನೆ ಬೆಳಿಗ್ಗೆ ನಡೆದ ಘಟನೆ ಬಗ್ಗೆ ಮಾಹಿತಿ ತಿಳಿದ ಗ್ರಾಮಸ್ಥರು ಹುಲಿ ಕಂಡ ಸ್ಥಳದಲ್ಲಿ ಪರಿಶೀಲಿಸಿ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.ಹುಲಿ ಪಕ್ಷಿಧಾಮದ ಕೆರೆಯಲ್ಲಿ ನೀರು ಕುಡಿದು ಕೋರಕಲ್ಲು, ಮೀಗಿನಕಲ್ಲು ಗ್ರಾಮದ ಕಡೆ ಹೋಗಿರಬಹುದೆಂದು ಶಂಕಿಸಲಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಜಾಸ್ತಿಯಾಗಿದ್ದು, ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳಲ್ಲಿ ಭಯ ಶುರುವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರು ಕಾಡುಪ್ರಾಣಿಗಳು ನಾಡಿನೊಳಗೆ ಬರುವುದನ್ನು ತಡೆಯದೇ,ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.