ಮೇಯುತ್ತಿದ್ದ ಕುರಿಗಳ ಕಳ್ಳತನ ಆರೋಪಿ ಬಂಧನ
– ಆಲ್ದೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 90 ಗ್ರಾಂ ಚಿನ್ನದ ಉಂಗುರಗಳು ಸೀಜ್
– ಕಡೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಹೊತ್ತಿ ಉರಿದ ಮನೆ
NAMMUR EXPRESS NEWS
ಕೊಟ್ಟಿಗೆಹಾರ: ಮೇಯುತ್ತಿದ್ದ ಕುರಿಗಳನ್ನು ಕಳ್ಳತನ ಮಾಡಿ ಅಪರಿಹರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಅತ್ತಿಗೆರೆ ಬಳಿ ನಡೆದಿದೆ. ಶಿವಮೊಗ್ಗ ಮೂಲದ ಭದ್ರಾವತಿಯ ಜಬೀವುಲ್ಲಾ ಮತ್ತು ಕುಟುಂಬದವರು ಕಾರಿನಲ್ಲಿ ಕೊಟ್ಟಿಗೆ ಹಾರದ ಅತ್ತಿಗೆರೆ ಸಮೀಪ ಮೇಯುತ್ತಿದ್ದ ಮೊಹಮ್ಮದ್ ಎಂಬುವವರ 5 ಕುರಿಗಳನ್ನು ಕಾರಿನಲ್ಲಿ ತುಂಬಿದಾಗ ಸ್ಥಳೀಯರೊಬ್ಬರು ಕುರಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸ್ಥಳೀಯರು ಜಮಾಯಿಸಿ ಆರೋಪಿ ಜಬೀವುಲ್ಲಾನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸ್ ಠಾಣಾ ಸಬ್ ಇನ್ ಸ್ಪೆಕ್ಟರ್ ಕೌಶಿಕ್, ಪೊಲೀಸ್ ಸಿಬ್ಬಂದಿ ಜಗದೀಶ್ ಮತ್ತಿತರ ಸಿಬ್ಬಂದಿಗಳು ಭೇಟಿ ನೀಡಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಆಲ್ದೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 90 ಗ್ರಾಂ ಚಿನ್ನದ ಉಂಗುರಗಳು ಸೀಜ್
ಆಲ್ದೂರು: ಲೋಕಸಭೆ ಚುನಾವಣೆಗೆ 2024 ದಿನಾಂಕ ಘೋಷಣೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ಆಲ್ದೂರಿನ ವಸ್ತಾರೆ ಜಂಕ್ಷನ್ ಬಳಿ ದಾಖಲೆ ಇಲ್ಲದೆ ಬಲೆನೋ ವಾಹನದಲ್ಲಿ ಸಾಗಿಸುತ್ತಿದ್ದ 90 ಗ್ರಾಂ ಮೌಲ್ಯದ 18 ಚಿನ್ನದ ಉಂಗುರಗಳನ್ನು ವಶಕ್ಕೆ ಪಡೆದಿದ್ದಾರೆ. ಚಿನ್ನದ ವ್ಯಾಪಾರಿ ಒಬ್ಬರು ಗಟ್ಟಿ ಖರೀದಿಸಿ ಅದರಿಂದ ಉಂಗುರಗಳನ್ನು ತಯಾರಿಸಿ ಉಡುಪಿಯ ಜ್ಯುವೆಲರಿ ಅಂಗಡಿ ಮಾಲೀಕರಿಗೆ ನೀಡಲು ತೆರಳುತ್ತಿದ್ದರು ಎನ್ನಲಾಗಿದ್ದು, ತಪಾಸಣೆ ನಡೆಸಿದ ಪೊಲೀಸರು ಚಿನ್ನದ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ: ಹೊತ್ತಿ ಉರಿದ ಮನೆ
ಕಡೂರು: ಮನೆ ಮೇಲೆ ತುಂಡಾಗಿ ವಿದ್ಯುತ್ ತಂತಿ ಬಿದ್ದ ಪರಿಣಾಮ ಮನೆಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬ್ಯಾಗಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯವರು ತೋಟಕ್ಕೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಮಂಜಮ್ಮ, ಚಂದ್ರಪ್ಪ ಎಂಬುವರ ಮನೆ ಬೆಂಕಿಯಿಂದ ಸಂಪೂರ್ಣ ಹಾನಿಯಾಗಿ, ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳಿಯರು ಹಾಗೂ ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸಿದ್ದು. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.