– ಬಾಲಕನ ಮೇಲೆ ಬೀದಿ ನಾಯಿ ದಾಳಿ!
– ಚಿಕ್ಕಮಗಳೂರು ನಗರದಲ್ಲಿ ನಡೆದ ಘಟನೆ
• ಮೂಡಿಗೆರೆ: ಖಾರದ ಪುಡಿ ಎರಚಿ ಹಣ, ಚಿನ್ನ ದರೋಡೆ
• ಶೃಂಗೇರಿ: ಬೆಳಗ್ಗೆ ಭೀಕರ ಅಪಘಾತ: ಟ್ರಾಫಿಕ್ ಜಾಮ್
• ಕೊಪ್ಪ: ಮರ ಕಡಿದು ಮಂಗನ ಕಾಯಿಲೆ ಬಂತು!
NAMMUR EXPRESS NEWS
ಚಿಕ್ಕಮಗಳೂರು: ಬೀದಿ ನಾಯಿಗಳ ಕಾಟ ಎಲ್ಲೆಡೆ ಹೆಚ್ಚಾಗಿದೆ. ಇದೀಗ ಬಾಲಕನ ಮೇಲೆ ಏಕಾಏಕಿ ಬೀದಿ ನಾಯಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಆದಿಶಕ್ತಿ ನಗರದಲ್ಲಿ ನಡೆದಿದೆ. ಮುಜಾಮಿಲ್(8) ಬೀದಿ ನಾಯಿ ದಾಳಿಗೆ ಒಳಗಾದ ಬಾಲಕ. ರಸ್ತೆಯಲ್ಲಿ ಬರುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ಮಾಡಿದ್ದು, ತಕ್ಷಣವೇ ಸ್ಥಳಿಯರಿಂದ ಬಾಲಕನ ರಕ್ಷಣೆ ಮಾಡಲಾಗಿದೆ. ದಾಳಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬಾಲಕನಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಖಾರದ ಪುಡಿ ಎರಚಿ ಹಣ, ಚಿನ್ನ ದರೋಡೆ: ಅರೆಸ್ಟ್
ಮೂಡಿಗೆರೆ: ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾಲೀಕರ ಕಣ್ಣಿಗೆ ಖಾರದ ಪುಡಿ ಎರಚಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅನ್ಸರ್, ಖಲಂದರ್, ಶೈನಿಂಗ್ ಕುಮಾರ್, ಆಶ್ರಫ್, ಉಮೇಶ್ ಬಂಧಿತ ಆರೋಪಿಗಳು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಸಮೀಪದ ಹೆಬ್ಬಾರಟ್ಟಿ ಗ್ರಾಮದಲ್ಲಿ 15/02/2024 ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಅನಂತರಾಮ್ ಹೆಬ್ಬಾರ್ ಎಂಬವರ ಮನೆಗೆ ನುಗ್ಗಿದ ನಾಲ್ವರು ಯುವಕರು ಮಾರಕಾಸ್ತ್ರಗಳನ್ನು ತೋರಿಸಿ ಹಣ ನೀಡುವಂತೆ ಬೆದರಿಸಿದ್ದಾರೆ.
ಬಳಿಕ ಮನೆಯಲ್ಲಿದ್ದ 5 ಲಕ್ಷ ರೂ. ಹಾಗೂ ಮಹಿಳೆಯ ಕೊರಳಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರ ದೋಚಿದ್ದಾರೆ. ಈ ವೇಳೆ ಮನೆ ಮಾಲೀಕರನ್ನು ಬಿಡಿಸಲು ಬಂದ ಕೆಲಸಗಾರ ಮಾಣಿಭಟ್ಟ ಎಂಬವರ ಕೈಯನ್ನು ದರೋಡೆಕೋರರು ಕಡಿದಿದ್ದಾರೆ. ಇತ್ತ ಮನೆಯವರು ಕೂಗಾಡುತ್ತಿದ್ದಂತೆ ಅಕ್ಕಪಕ್ಕದ ತೋಟಗಳಲ್ಲಿದ್ದ ಕಾರ್ಮಿಕರು ಮನೆ ಬಳಿ ಆಗಮಿಸುವಷ್ಟರಲ್ಲಿ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ಆದರೆ ಬಂದಿದ್ದ ನಾಲ್ವರು ಆರೋಪಿಗಳಲ್ಲಿ ಮೂವರು ಓಡಿ ಹೋಗಿದ್ದು, ಓರ್ವ ಆರೋಪಿ ಅರಮನೆ ತಲಗೂರು ಎಂಬ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಅವಿತು ಕುಳಿತಿದ್ದನ್ನು ಆತನನ್ನು ಹಿಂಬಾಲಿಸಿದ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಶೃಂಗೇರಿ: ಬೆಳ್ಳಂಬೆಳಗ್ಗೆ ಅಪಘಾತ
ಶೃಂಗೇರಿ ತಾಲ್ಲೂಕಿನ ಮೆಣಸೆ ಸಮೀಪದ ರಾಜೀವ್ ಗಾಂಧಿ ಸಂಸ್ಕೃತ ಕಾಲೇಜು ಸಮೀಪ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರಿನಿಂದ ಶೃಂಗೇರಿಗೆ ಬರುತ್ತಿದ್ದ ಸ್ವಿಫ್ಟ್ ಹಾಗೂ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಆಲ್ಟೋ ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಅಪಘಾತದ ಹೊಡೆತಕ್ಕೆ ಎರಡೂ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಪೆಟ್ಟಾಗಿವೆ.
ಕೊಪ್ಪ: ಮರ ಕಡಿದು ಮಂಗನ ಕಾಯಿಲೆ ಬಂತು!
ಕೊಪ್ಪ: ಕೊಪ್ಪ ತಾಲ್ಲೂಕಿನಲ್ಲಿ ನುಗ್ಗಿ ಗ್ರಾಮ ಪಂಚಾಯಿತಿಯ ಎರಡು ಹಳ್ಳಿಗಳು ಮಂಗನ ಕಾಯಿಲೆಯ ಕೇಂದ್ರ ಬಿಂದುವಾಗಿವೆ. ಅರಣ್ಯ ಇಲಾಖೆ ಜಾಗದಲ್ಲಿದ್ದ ಮರಗಳನ್ನು ಕಡಿದಿದ್ದೇ ರೋಗ ಹರಡಲು ಕಾರಣ ಎಂಬುದು ಬಹಿರಂಗವಾಗಿದೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಒಟ್ಟು 26 ಪ್ರಕರಣ ಇದ್ದು, ಈ ಪೈಕಿ 24 ಪ್ರಕರಣ ಕೊಪ್ಪ ತಾಲ್ಲೂಕಿನಲ್ಲೆ ದಾಖಲಾಗಿವೆ. 79 ವರ್ಷ ವಯಸ್ಸಿನ ಒಬ್ಬರು ಮೃತಪಟ್ಟಿದ್ದು, ಉಳಿದವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇನ್ನೂ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾಸನೂರು ಕಾಡಿನ ಕಾಯಿಲೆ(ಕೆಎಫ್ಡಿ) ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಹರಡಿದ ಮಂಗಗಳಿಗೆ ಕಚ್ಚಿದ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗ ಹರಡುತ್ತಿದೆ. ಮಂಗಗಳು ಸಾಯುವುದು ಈ ರೋಗದ ಮುನ್ಸೂಚನೆ.