ಚಿಕ್ಕಮಗಳೂರು ಜಿಲ್ಲೆಯಲ್ಲಿ ಏನೇನ್ ಆಯ್ತು?
ಚಿಕ್ಕಮಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದವರು ಅರೆಸ್ಟ್!
– ಕಡೂರು: ದಲಿತ ಕುಟುಂಬಗಳ ಗುಡಿಸಲು ನೆಲಸಮ: ಆಕ್ರೋಶ
– ಆಲ್ದೂರು: ಬೀಟೆ ಮರ ಕಡಿದು ಸಾಗಿಸುತ್ತಿದ್ದ ಇಬ್ಬರ ಬಂಧನ
NAMMUR EXPRESS NEWS
ಚಿಕ್ಕಮಗಳೂರು: ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರೆಸಿರುವ ಚಿಕ್ಕಮಗಳೂರು ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ಕೊಂಬುಗತ್ತಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸಿ.ಇ.ಎನ್. ಅಪರಾಧ ಪೊಲೀಸರು 1.26 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಫಿನಾಡಿನಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸರು ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐಸ್.ಐ ರಘುನಾಥ ಎಸ್. ವಿ ಮತ್ತು ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಖಾನ್, ಹರೀಶ ಟಿ. ಕೆ, ಧರ್ಮರಾಜ, ಹರಿಪ್ರಸಾದ, ರಮೇಶ ಎನ್. ಆರ್ ಮತ್ತು ಮಹಾದೇವಸ್ವಾಮಿ ಇದ್ದರು.
– ಕಡೂರು: ದಲಿತ ಕುಟುಂಬಗಳ ಗುಡಿಸಲು ನೆಲಸಮ: ಆಕ್ರೋಶ
ಕಡೂರು: ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲನ್ನು ನೆಲಸಮ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಡೂರು ತಾಲೂಕಿನ ಮೇಲನಹಳ್ಳಿ ಸರ್ವೆ ನಂ 22ರಲ್ಲಿ ಇದ್ದ ಗುಡಿಸಲನ್ನು, ಮನೆಯವರು ಕೆಲಸಕ್ಕೆ ಹೋದಾಗ ಏಕಾಏಕಿ ಬಂದು ನೆಲಸಮ ಮಾಡಿದ್ದಾರೆ. ಗುಡಿಸಲಿನಲ್ಲಿದ್ದ ಪಾತ್ರೆ, ಆಹಾರ ಸಾಮಾಗ್ರಿಗಳು ನಾಶವಾಗಿದೆ ಎಂದು ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲನಹಳ್ಳಿ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಾದ ಕಾರಣ ವಾಸಕ್ಕಾಗಿ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ಆದರೆ, ಏಕಾಏಕಿ ಗುಡಿಸಲು ನೆಲಸಮ ಮಾಡಿರುವ ಹಿನ್ನೆಲೆ ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಡೂರಲ್ಲಿ ಸಾವಿರಾರು ಎಕರೆ ಒತ್ತುವರಿ ಮಾಡಿದ್ದಾರೆ, ಅದನ್ನ ತೆರವುಗೊಳಿಸಲ್ಲ. ಬದಲಾಗಿ ದಲಿತರು ವಾಸಕ್ಕಾಗಿ ಗೋಮಾಳದಲ್ಲಿ ಗುಡಿಸಲು ಹಾಕ್ಕೊಂಡ್ರೆ ತೆರವು ಮಾಡುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
– ಆಲ್ದೂರು: ಬೀಟೆ ಮರ ಕಡಿದು ಸಾಗಿಸುತ್ತಿದ್ದ ಇಬ್ಬರ ಬಂಧನ
ಆಲ್ದೂರು: ಅಕ್ರಮವಾಗಿ ಬೀಟೆ ಮರ ಕಡಿದು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ. ಪ್ರದೀಪ್ ಹಾಗೂ ವಿಜಯ್ ಬಂಧಿತ ಆರೋಪಿಗಳು. ತುಂಬಳ್ಳಿಪುರ ಗ್ರಾಮದ ಡಿಮ್ಡ್ ಫಾರೆಸ್ಟ್ ನಿಂದ ಅಕ್ರಮವಾಗಿ ಬೀಟೆ ಮರ ಕಡಿದು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ, ಮರ ಸಾಗಿಸುತ್ತಿದ್ದ ಮಹೇಂದ್ರ ಪಿಕಪ್ ವಾಹನವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಲ್ಲಿ ಪ್ರದೀಪ್ ಹಾಗೂ ವಿಜಯ್ ಎಂಬಾತನನ್ನು ಬಂಧಿಸಿದ್ದು, ಸುರೇಶ್ ಹಾಗೂ ರವಿ ಎಂಬ ಇನ್ನಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ತಲೆಮೆರೆಸಿಕೊಂಡ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ. ಆಲ್ದೂರು ಅರಣ್ಯಾಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆದಿದೆ.