ಆಡಂಬರದ ಗಣೇಶೋತ್ಸವ ಬಿಟ್ಟು ಸಮಾಜ ಸೇವೆ!
– ವಿದ್ಯುತ್ ಕಂಬಗಳಿಗೆ ಲೈಟ್ ಅಳವಡಿಕೆ ಮಾಡಿದ ಶಾಂತಿನಗರ ಯುವಕರು
– ರಾಜ್ಯಕ್ಕೆ ಮಾದರಿ ಆಯ್ತು ಹೊಸದುರ್ಗದ ಗಣೇಶ ಸಮಿತಿ
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ನಗರದ ಬೆಟ್ಟಗಳಿಗೆ ಹೊಂದಿಕೊಂಡಿರುವ ಶಾಂತಿನಗರ ಬಡಾವಣೆಯಲ್ಲಿ 11 ವರ್ಷಗಳಿಂದ ಹಿಂದೂ ಮಹಾಗಣಪತಿ ಯುವಕರ ತಂಡ ಗಣಪತಿ ಮೂರ್ತಿಯನ್ನು ಕೂರಿಸಿ, ಗಣೇಶೋತ್ಸವ ಆಚರಿಸಿಕೊಂಡು ಬಂದಿದ್ದರು. ಅದರಂತೆಯೇ, ಈ ಬಾರಿ ಹನ್ನೆರಡನೇ ವರ್ಷದ ಗಣೇಶ ಮಹೋತ್ಸವವನ್ನು ಹಮ್ಮಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಆರ್ಕೆಸ್ಟ್ರಾ ನಡೆಸಲು ಇಟ್ಟಿದ್ದ ಹಣದಲ್ಲಿ ಆರ್ಕೆಸ್ಟ್ರಾ ಆಯೋಜಿಸದೆ, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ತಮ್ಮ ಬಡಾವಣೆಯ ಕೆಲವು ವಿದ್ಯುತ್ ಕಂಬಗಳಿಗೆ ಹೈ ಮಾಸ್ಕ್ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಮಾದರಿಯಾಗಿದ್ದಾರೆ.
ಈ ಬಗ್ಗೆ ಶಾಂತಿನಗರ ಬಡಾವಣೆಯ ಗಣಪತಿ ಯುವಕ ಸಂಘದ ಸಂಚಾಲಕ ಗೋಪಾಲ್ ಮಾತನಾಡಿ, 12 ವರ್ಷಗಳಿಂದಲೂ ಕೂಡ ಗಣೇಶ ಮಹೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ. 2 ಗಂಟೆಯ ಆರ್ಕೆಸ್ಟ್ರಾ ಗಾಗಿ ಬಹಳ ದುಡ್ಡನ್ನು ಖರ್ಚು ಮಾಡುವ ಬದಲು ನಮ್ಮ ಬಡಾವಣೆಯಲ್ಲಿ ಲೈಟ್ ಗಳಿಂದ ಕಂಬಗಳಿಗೆ ನೈಟ್ ಹಾಕಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬ ಸದ್ದುದೇಶದಿಂದ 30 ಲೈಟ್ ಹಾಕಿಸಿದ್ದೇವೆ. ನಮ್ಮ ಮಾದರಿ ಕಾರ್ಯವನ್ನು ಗಮನಿಸಿದ ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕರಾದ ಪ್ರದೀಪ್ 10 ಲೈಟ್ಗಳನ್ನು ಕೊಡಿಸಿ ಸಹಕಾರ ನೀಡಿದ್ದಾರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಗೋಪಾಲ್, ರಂಗನಾಥ್, ಶಶಿಧರ, ಮಂಜುನಾಥ, ತುಳಸಿ ನಾಗ ಮತ್ತು ಯುವರಾಜ್ ಸೇರಿದಂತೆ ಸಂಘದ ಹಲವು ಯುವಕರಿದ್ದರು.