ರಾಜ್ ಕುಮಾರ್ ಸಿನಿಮಾ ಕಾಲು ತುಳಿತದಲ್ಲಿ ಇಬ್ಬರು ಸಾವನ್ನಪ್ಪಿದ್ದರು!
– ಸಾಮಾಜಿಕ ಜಾಲ ತಾಣ, ಪ್ರಚಾರ ಇಲ್ಲದ ಕಾಲದಲ್ಲೇ ರಾಜ್ ಕ್ರೇಜ್
– ರೇಸ್ ಕೋರ್ಸ್ ಅಲ್ಲಿ ಟಿಕೆಟ್ ಹಂಚಲಾಗಿತ್ತು…!
– “ತಾಯಿಗೆ ತಕ್ಕ ಮಗ’ ಸಿನಿಮಾ ಟಿಕೇಟ್ ದುರಂತ”
NAMMUR EXPRESS NEWS
ಬೆಂಗಳೂರು: 1978 ಡಾ:ರಾಜ್ ಕುಮಾರ್ ಅವರ ಶಂಕರ್ ಗುರು, ಆಪರೇಶನ್ ಡೈಮೆಂಡ್ ರಾಕೇಟ್, ತಾಯಿಗೆ ತಕ್ಕ ಮಗ ಮುಂತಾದ ಯಶಸ್ವಿ ಚಿತ್ರಗಳ ಕಾಲ. ಶಂಕರ್ ಗುರು ಚಿತ್ರಕ್ಕೆ ಹೋಗಿದ್ದ ಅಭಿಮಾನಿ ಒಬ್ಬ ಆದರ್ಶ್ ಚಿತ್ರಮಂದಿರದ ರಷ್ ನಲ್ಲಿ ಪ್ರಾಣ ಕಳೆದು ಕೊಂಡಿದ್ದ . ಆನಂತರ ತೆರೆಗೆ ಬಂದದ್ದು ತಾಯಿಗೆ ತಕ್ಕ ಮಗ.
ಅಂದು ಡಾ ರಾಜ್ ಸಿನಿಮಾ ಬಿಡುಗಡೆ ದಿನ ಗಲಭೆಯನ್ನು ತಪ್ಪಿಸಲು ಪೊಲೀಸರು ಬಿಡುಗಡೆ ದಿನಾಂಕ ಹೇಳದೆ ಬಿಡುಗಡೆ ಮಾಡಲು ಸಲಹೆ ನೀಡಿದ್ದರು. ಆದರೆ ತಾಯಿಗೆ ತಕ್ಕ ಮಗ ಚಿತ್ರ ತಂಡ ದೊಡ್ದ ಎಡವಟ್ಟು ಮಾಡಿದ್ದರು. ಚಿತ್ರೀಕರಣವಾಗುತ್ತಿದ್ದ ಸಮಯದಲ್ಲೇ ಬಾಕ್ಸಿಂಗ್ ಗ್ಲೌಸ್ ತೊಟ್ಟು ಫೋಸ್ ನೀಡಿದ ಅಣ್ಣಾವ್ರ ಪೋಸ್ಟರ್ ಅನ್ನು ಬೀದಿಗಳಲ್ಲಿ ಅಂಟಿಸಿದ್ದರು. ಆ ಸ್ಟೈಲ್ ನೋಡಿ ಅಭಿಮಾನಿಗಳು ರೋಮಾಂಚನಗೊಂಡಿದ್ದರು. ಗದೆ ಹಿಡಿದು ವ್ಯಾಯಾಮ ಮಾಡುವ ಭಂಗಿಯಲ್ಲಿ ಕಬ್ಬಿಣದಂತಹಾ ದೇಹದಾರ್ಢ್ಯಕ್ಕೆ ಬೆರಗುಗೊಳ್ಳುತ್ತಿದ್ದರು. ಭಾರಿ ಕುತೂಹಲ ಹುಟ್ಟಿಸಿದ್ದ ಅಣ್ಣನ ‘ತಾಯಿಗೆ ತಕ್ಕ ಮಗ’ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಹಬ್ಬ ಆಚರಿಸಿದ್ದರು. ಮೊದಲ ದಿನದ ಟಿಕೇಟ್ ಪಡೆಯಲು ಅಭಿಮಾನಿಗಳು ದೊಡ್ಡ ಪೈಪೋಟಿ ನಡೆಸಿದ್ದರು.
ಸಂಜಯ ಚಿತ್ರಮಂದಿರ ಡಾ.ರಾಜ್ ಚಿತ್ರ ಪ್ರದರ್ಶನಕ್ಕೆ ಹೆಸರಾಗಿತ್ತು. ಈ ಕಡೆ ಮಾವಳ್ಳಿ ಆ ಕಡೆ ಪಾರ್ವತಿಪುರ ಚದುರಡಿಗಳ ದೂರದ ಚಾಮರಾಜಪೇಟೆ,ಬಗಲಲ್ಲಿನ ಬಸವನಗುಡಿ, ಒಂದೆರೆಡು ರಸ್ತೆಗಳ ದೂರದ ವಿ.ವಿ.ಪುರ. ಹೀಗೆ ಸಂಜಯ ಚಿತ್ರಮಂದಿರದ ಸುತ್ತಲೂ ಡಾ.ರಾಜ್ ಕುಮಾರ್ ಅಭಿಮಾನಿಗಳ ದಂಡು.
ಡಾ.ರಾಜ್ ಕುಮಾರ್ ಹೊಸ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದರೆ ತೊಂದರೆ ಆಗುವುದನ್ನು ಮುಂಚೆಯೇ ಪೊಲೀಸರು ಸಲಹೆ ನೀಡಿದ್ದರು. ಅದನ್ನು ಲೆಕ್ಕಿಸದೆ ಪ್ರಚಾರ ಮಾಡಿದ ಪರಿಣಾಮ ಅಭಿಮಾನಿಗಳು ಒಂದು ದೊಡ್ಡ ಹಬ್ಬಕ್ಕೆ ಸಿದ್ಧತೆ ಮಾಡಿಕೊಂಡು ಸಂಭ್ರಮಿಸುತ್ತಿದ್ದರು. “ತಾಯಿಗೆ ತಕ್ಕ ಮಗ” ಚಿತ್ರದ ಮೊದಲ ದಿನದ ಟಿಕೇಟ್ ಖರೀದಿಗಾಗಿ ಸಂಜಯ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ದಂಡಿತ್ತು..ಗುದ್ದಾಟ ನೂಕು ನುಗಲು ತಳ್ಳಾಟ ಜಗ್ಗಾಟ ಹೀಗೆ ಅಲ್ಲಿ ತಾಯಿಗೆ ತಕ್ಕ ಮಗ ಚಿತ್ರಕ್ಕೆ ಮೊದಲ ದಿನದ ಪ್ರದರ್ಶನದ ಟಿಕೇಟಿಗಾಗಿ ದೊಡ್ಡ ಸಮರವೇ ನಡೆದಿತ್ತು. ಸಂಜಯ್ ಚಿತ್ರಮಂದಿರದಲ್ಲಿ ಎಲ್ಲರೂ ಒಂದೇ ಸಮನೆ ಒಂದೇ ಸಾಲಿನಲ್ಲಿ ಬರಬೇಕೆಂಬ ಕಾರಣಕ್ಕೆ ಕಬ್ಬಿಣದ ರಾಡ್ ಗಳನ್ನ ಅಕ್ಕ ಪಕ್ಕ ಹಾಕಿದ್ದರು.
13-2-1978 ತಾಯಿಗೆ ತಕ್ಕ ಮಗ ಚಿತ್ರದ ಮ್ಯಾಟ್ನಿ ಪ್ರದರ್ಶನದ ಟಕೇಟ್ ಪಡೆಯಲು ಸಾವಿರಾರು ಅಭಿಮಾನಿಗಳು ಸಾಲಿನಲ್ಲಿ ಟಕೇಟ್ ಗಾಗಿ ನಿಂತಿದ್ದರು. ಅವರ ಕಾತುರ ತುಂಬಾ ತೀವ್ರವಾಗಿ ಒಬ್ಬರಿಗೊಬ್ಬರು ಒತ್ತರಿಸಿ ನಿಂತಿದ್ದರು. ಆ ಒತ್ತಡ ಹೇಗಿತ್ತೆಂದರೇ ಅಲ್ಲಿ ಸರಾಗವಾದ ಉಸಿರಾಟಕ್ಕೂ ತೊಂದರೆಯಾದಂತಿತ್ತು. ಅದೇ ವೇಳೆ ಆ ಸಾಲಿನಲ್ಲಿದ್ದ ಇಬ್ಬರು ಹುಡುಗರು ಉಸಿರು ಗಟ್ಟಿ ಪ್ರಜ್ಞೆ ತಪ್ಪಿದರು. ಅವರನ್ನ ಸಾಲಿನಿಂದ ಹೊರ ತಂದು ನೋಡಿದಾಗ ಅವರು ಸತ್ತುಹೋಗಿದ್ದರು! ದೇವಸ್ಥಾನಗಳಲ್ಲಿ ಪುಣ್ಯ ಸ್ಥಳಗಳಲ್ಲಿ ನೂಕುನುಗ್ಗಲಿಗೆ ಸಾವು ಅನ್ನೋ ವಿಚಾರವನ್ನ ಕೇಳಿರುತ್ತೇವೆ ಅಥವಾ ಓದಿರುತ್ತೇವೆ ಆದರೆ ಒಬ್ಬ ನೆಚ್ಚಿನ ನಟನ ಸಿನಿಮಾ ನೋಡುವ ಬರದಲ್ಲಿ ಪ್ರಾಣವನ್ನೇ ಬಿಟ್ಟ ಅಭಿಮಾನಿಗಳ ದುರಂತ ಹಾಗು ಬೇಸರದ ಕಥೆ ಇದು.
ತಾಯಿಗೆ ತಕ್ಕ ಮಗ ಚಿತ್ರದ ಅಭಿಮಾನಿಗಳ ದುರಂತ ಸಾವಿನ ನಂತರ 17-5-1978 ರಂದು ಬಿಡುಗಡೆಯಾದ ಚಿತ್ರ “ಹುಲಿಯ ಹಾಲಿನ ಮೇವು”. ಈ ಚಿತ್ರಕ್ಕೆ ಮತ್ತೆ ಅದೇ ಟಿಕೇಟ್ ವಿತರಣೆಯ ಸಮಸ್ಯೆಯಾಯಿತು, ಡಾ.ರಾಜ್ ಕುಮಾರ್ ರವರ ಅಭಿಮಾನಿಗಳ ಮಹಾಪೂರವನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸಮಸ್ಯೆಯಾಯಿತು. ಅಂತಹ ಸಂದರ್ಭದಲ್ಲಿ ಪೊಲೀಸರು ಒಂದು ಪ್ಲಾನ್ ಮಾಡಿ “ಹುಲಿಯ ಹಾಲಿನ ಮೇವು” ಚಿತ್ರದ ಮೊದಲ ದಿನದ ಟಿಕೇಟುಗಳನ್ನು ನಗರದ ರೇಸ್ ಕೋರ್ಸ್ ನಲ್ಲಿ ವಿತರಿಸಲಾಯಿತು.
ಅಲ್ಲಿ ಬಿದಿರು ಬೊಂಬು ಮತ್ತು ಸರ್ವೆ ಕಂಬ ಬಳಸಿ ಸಾಲು ಸಾಲಾಗಿ ಅಭಿಮಾನಿಗಳು ನಿಲ್ಲುವಂತೆ ಮಾಡಿ ಬಿಗೀ ಪೊಲೀಸ್ ಬಂದೋಬಸ್ತಿನಲ್ಲಿ ಟಿಕೇಟ್ ವಿತರಿಸಲಾಯಿತು. ಒಂದು ಚಲನಚಿತ್ರದ ಟಿಕೇಟುಗಳನ್ನ ನೀಡಲು,ಅಭಿಮಾನಿಗಳನ್ನ ನಿಯಂತ್ರಿಸಲು ರೇಸ್ ಕೋರ್ಸ್ನಲ್ಲಿ ಟಿಕೇಟ್ ನೀಡಿದ್ದು ಡಾ.ರಾಜ್ ಕುಮಾರ್ ಅವರ ಚಿತ್ರಕ್ಕೆ ಮಾತ್ರ. ಅದೊಂದು ಐತಿಹಾಸಿಕ ದಾಖಲೆ. ಅಂದಿಗೆ ಟಿ.ವಿ, ಮೊಬೈಲ್, ಫೇಸ್ಬುಕ್, ವಾಟ್ಸಪ್ ಯಾವುದೂ ಇಲ್ಲದ ಅಂತಹ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಜನಪ್ರಿಯತೆ ಒಂದು ದಾಖಲೆ.
ಲೇಖನ – ಪುಸ್ತಕ ಪ್ರಪಂಚ