ಅಂತೂ ಆರ್.ಸಿ ಬಿಯ ಹೊಸ ಅಧ್ಯಾಯ
– ಹಾಲಿ ಚಾಂಪಿಯನ್ ಚೆನ್ನೈ ಸೋಲಿಸಿ ಪ್ಲೇ ಆಫ್ಗೆ
– ಕೊಹ್ಲಿ ಆಟಕ್ಕೆ ಅಭಿಮಾನಿಗಳು ಫಿದಾ
NAMMUR EXPREES NEWS
ಬೆಂಗಳೂರು: ಸತತ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಯಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಪುಟಿದೆದ್ದ ಆರ್ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ 4ನೇ ತಂಡವಾಗಿ ಪ್ಲೇ ಆಫ್ಗೆ ಅಧಿಕೃತ ಎಂಟ್ರಿ ಕೊಟಿದೆ.
ಪ್ಲೇ ಆಫ್ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್ ಬಾರಿಸುತ್ತಿದ್ದರೂ ಆರ್ಸಿಬಿ ಪ್ಲೇ ಆಫ್ನಿಂದ ಹೊರ ಬೀಳುತ್ತಿತ್ತು.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸ್ ಮೊದಲ ವಿಕೆಟ್ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್ ಎನಿಸಿಕೊಂಡಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈಗೆ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಮೊದಲ ಎಸೆತದಲ್ಲೇ ಆಘಾತವಿಕ್ಕಿದರು. ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಚೆನ್ನೈ ಡೇಂಜಸರ್ ಬ್ಯಾಟರ್ ಡೇರಿಯಲ್ ಮಿಚೆಲ್(4) ಅವರ ವಿಕೆಟ್ ಕೂಡ ಕಳೆದುಕೊಂಡಿತು. ಆರ್ಸಿಬಿ ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಸಾಗಲಿಲ್ಲ. ಮೂರನೇ ವಿಕೆಟ್ಗೆ ರಹಾನೆ ಮತ್ತು ರಚಿನ್ ರವೀಂದ್ರ ಸೇರಿಕೊಂಡು ಉತ್ತಮ ಜತೆಯಾಟವೊಂದನ್ನು ಸಂಘಟಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಉಭಯ ಆಟಗಾರರ ಈ ಬ್ಯಾಟಿಂಗ್ನಿಂದ ತಂಡಕ್ಕೆ 10 ಸರಾಸರಿಯಲ್ಲಿ ರನ್ ಹರಿದುಬಂತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಫರ್ಗುಸನ್ ಕೊನೆಗೂ ಬೇರ್ಪಡಿಸಿದರು.
33 ರನ್ ಗಳಿಸಿದ ವೇಳೆ ರಹಾನೆ ವಿಕೆಟ್ ಕಳೆದುಕೊಂಡರು. ರಹಾನೆ ಮತ್ತು ರಚಿನ್ ಸೇರಿಕೊಂಡು ಮೂರನೇ ವಿಕೆಟ್ಗೆ 66 ರನ್ ಒಟ್ಟುಗೂಡಿಸಿದರು. ಕರ್ನಾಟಕ ಮೂಲದವರೇ ಆದ ನ್ಯೂಜಿಲ್ಯಾಂಡ್ ಆಟಗಾರ ರಚಿನ್ ರವೀಂದ್ರ ಅರ್ಧಶತಕ ಬಾರಿಸುವ ಮೂಲಕ ಕನ್ನಡಿಗರಿಗೇ ಕಂಟಕವಾಗುವ ಸೂಚನೆ ನೀಡಿದರು. ಆದರೆ ಇವರ ಬ್ಯಾಟಿಂಗ್ ಅಬ್ಬರಕ್ಕೆ ಸ್ವಪ್ನಿಲ್ ಸಿಂಗ್ ಬ್ರೇಕ್ ಹಾಕಿದರು. ಮ್ಯಾಕ್ಸ್ವೆಲ್ ಓವರ್ನಲ್ಲಿ ಜೀವದಾನ ಪಡೆದರೂ ಕೂಡ ಇದೇ ಓವರ್ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಬಲೆಗೆ ಬಿದ್ದರು. ರಚಿನ್ 37 ಎಸೆತಗಳಿಂದ 61 ರನ್(5 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಈ ವಿಕೆಟ್ ಪತನದ ಬಳಿಕ ಶಿವಂ ದುಬೆ(7) ವಿಕೆಟ್ ಕೂಡ ಬಿತ್ತು.
ಮತ್ತೆ ಮಿನುಗಿದ ರವೀಂದ್ರ ಜಡೇಜಾ ಮತ್ತು ಧೋನಿ
ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು 201 ರನ್ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರೂ ಕೂಡ ಇದು ಸಾಧ್ಯವಾಗಲಿಲ್ಲ. ಧೋನಿ ಕ್ರೀಸ್ನಲ್ಲಿ ಇರುತ್ತಿದ್ದರೆ ಚೆನ್ನೈಗೆ ಗೆಲುವು ಖಚಿತವಾಗಿರುತ್ತಿತ್ತು. 6 ಎಸೆತಗಳಲ್ಲಿ 17 ರನ್ ಬೇಕಿದ್ದಾಗ ಧೋನಿ ಯಶ್ ದಯಾಳ್ ಅವರ ಮೊದಲ ಎಸೆತವನ್ನೇ ಸ್ಟೇಡಿಯಂನಿಂದ ಹೊರಗೆಡೆ ಬಾರಿಸಿ 6 ರನ್ ಕಲೆಹಾಕಿದರು. ಈ ಸಿಕ್ಸರ್ 110 ಮೀಟರ್ ದೂರಕ್ಕೆ ಸಿಡಿಯಿತು. ಆದರೆ ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇಲ್ಲಿಗೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು. ಅಂತಿಮ 2 ಎಸೆತದಲ್ಲಿ 10 ರನ್ ಗಳಿಸುವ ಯತ್ನದಲ್ಲಿ ಜಡೇಜಾ ವಿಫಲರಾದರು. ಧೋನಿ 13 ಎಸೆತಗಳಿಂದ 25 ರನ್ ಚಚ್ಚಿದರು.
18ರಂದು ಆಡಿದ್ದ ಎಲ್ಲಾ ಪಂದ್ಯ ಗೆದ್ದ ಆರ್ಸಿಬಿ
ಆರ್ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿತ್ತು. ಹೌದು, ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಇಂದು ಕೂಡ ಆರ್ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆಯಾಗಿತ್ತು. ಅದರಂತೆ ಆರ್ಸಿಬಿ ಗೆಲುವು ಸಾಧಿಸಿ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡಿದೆ. ಮೇ 18ರಂದು ಆರ್ಸಿಬಿ ವಿರುದ್ಧ ಚೆನ್ನೈ 3ನೇ ಸೋಲಿಗೆ ತುತ್ತಾಯಿತು.