Categories
ಕ್ರಿಕೆಟ್ ತೀರ್ಥಹಳ್ಳಿ ಶಿವಮೊಗ್ಗ ಹೊಸನಗರ

ಮೇಕೇರಿ ಕ್ರಿಕೆಟ್ ಲೀಗ್ ಅದ್ದೂರಿ ಕ್ರಿಕೆಟ್ ಹಬ್ಬ!

ಮೇಕೇರಿ ಕ್ರಿಕೆಟ್ ಲೀಗ್ ಅದ್ದೂರಿ ಕ್ರಿಕೆಟ್ ಹಬ್ಬ!
– ಈಶ ಕ್ರಿಕೆಟರ್ಸ್, ಮೇಕೇರಿ-ಕೌರಿ ಇವರ ಆಯೋಜನೆ
• ಫ್ರೆಂಡ್ಸ್ ನಿಸರ್ಗ, ನೇಚರ್ ಕಿಂಗ್ಸ್, ರಾಮ ದೂತ, ಆರ್.ಆರ್ ಬ್ರದರ್ಸ್ ತಂಡಗಳಿಗೆ ಪ್ರಶಸ್ತಿಯ ಗರಿ
• ಗಣ್ಯರ ಉಪಸ್ಥಿತಿಯಲ್ಲಿ ಎಂಸಿಎಲ್ ಗೆ ವರ್ಣರಂಜಿತ ತೆರೆ

ಈಶ ಕ್ರಿಕೆಟರ್ಸ್, ಮೇಕೇರಿ-ಕೌರಿ ಇವರ ಆಶ್ರಯದಲ್ಲಿ ಮೇಕೇರಿ ಪ್ರೀಮಿಯರ್ ಲೀಗ್-2026 ಮೇ 2 ಮತ್ತು 3 ಅದ್ಧೂರಿಯಾಗಿ ನಡೆಯಿತು. ಕು.ಸಾನ್ವಿ ಜೋಯಿಸ್ ಯಡೂರು, ಅಂತರಾಷ್ಟ್ರೀಯ ಕರಾಟೆ ಪಟು ಹಾಗೂ ಎಂ.ಎಂ.ಗೌಡಪ್ಪ ಗೌಡ್ರ, ಆರಕ್ಷಕ ವೃತ್ತ ನಿರೀಕ್ಷಕರು, ಹೊಸನಗರ ಕ್ರೀಡಾಕೂಟ ಉದ್ಘಾಟಿಸಿದರು.

ಲೀಗ್ ನ ಪ್ರಥಮ ಬಹುಮಾನವನ್ನು ಸುಮಂತ್ ಮತ್ತು ಸುಜಿತ್, ಮೇಲಿನಬೈಸೆ ಮಾಲಿಕತ್ವದ ಫ್ರೆಂಡ್ಸ್ ನಿಸರ್ಗ, ದ್ವಿತೀಯ ಬಹುಮಾನವನ್ನು ರಾಜೇಶ್ ಹಿರಿಗೆ ಮತ್ತು ರಾಘವೇಂದ್ರ ಕಲಸುಳ್ಳಿ ಮಾಲಿಕತ್ವದ ನೇಚರ್ ಕಿಂಗ್ಸ್, ತೃತೀಯ ಸ್ಥಾನವನ್ನು ರಾಘವೇಂದ್ರ, ಸಂತೋಷ್ ಯಡೂರು ಮತ್ತು ವಿನಾಯಕ ಅವರ ರಾಮ ದೂತ, ನಾಲ್ಕನೇ ಸ್ಥಾನವನ್ನು ರಜಾಕ್ ಮತ್ತು ರಶೀದ್ ಯಡೂರು ಮಾಲಿಕತ್ವದ ಆರ್.ಆರ್ ಬ್ರದರ್ಸ್ ಚಾಚಿಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಅಂಕಿತ್ ಮೇಕೇರಿ ಅಧ್ಯಕ್ಷತೆ ವಹಿಸಿದ್ದರು.ಕ್ರಿಕೆಟ್ ಪಂದ್ಯಾವಳಿಯ ಪ್ರಾಯೋಜಕರಾದ ಹಾಲಗದ್ದೆ ಉಮೇಶ್, ವಾಟಗದ್ದೆ ದಿನೇಶ್, ಶೇಷಾದ್ರಿ ತಲಗೇರಿ, ಸತೀಶ್ ಹಿರೇಬೈಲ್, ಹೊಸಗದ್ದೆ ಮಂಜು ಹಾಗೂ ಹನ್ನೆರಡು ತಂಡಗಳ ಮಾಲಿಕರು, ಸನ್ಮಾನ ಸ್ವೀಕರಿಸಿದ ನಿಹಾಲ್, ಆದ್ಯ ತಲಗೇರಿ, ಅನುಜ್ಞಾ ಶೆಟ್ಟಿಕೊಪ್ಪ, ಶ್ರೀತ ಚಿಮ್ಮಗೋಡು ಉಪಸ್ಥಿತರಿದ್ದರು. ಕಿಶೋರ್ ಶೆಟ್ಟಿ ಮೇಲಿನಬೈಸೆ ನಿರೂಪಣೆ ನಡೆಸಿಕೊಟ್ಟರು. ಬಳಿಕ ತೀರ್ಥಹಳ್ಳಿ ರಮೇಶ್ ಮತ್ತು ತಂಡದವರಿಂದ ಸಂಗೀತ ರಸಸಂಜೆ ನಡೆಯಿತು.

ಸಹಕಾರಕ್ಕೆ ಅಂಕಿತ್ ಮೇಕೇರಿ ಅಭಿನಂದನೆ

ಎರಡು ದಿನದ ಕ್ರೀಡಾಕೂಟ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಪಂದ್ಯದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಶುಭಹಾರೈಕೆಗಳು. ಮುಂದಿನ ವರ್ಷಗಳಲ್ಲೂ ನಿಮ್ಮೆಲ್ಲರ ಸಹಕಾರ ಹೀಗೇ ಇರಲಿ
– ಅಂಕಿತ್ ಮೇಕೇರಿ

Categories
ಕ್ರಿಕೆಟ್ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

ಮೇಕೇರಿ ಕವರಿಯಲ್ಲಿ ಕ್ರಿಕೆಟ್ ಹಬ್ಬ

ಮೇಕೇರಿ ಕವರಿಯಲ್ಲಿ ಕ್ರಿಕೆಟ್ ಹಬ್ಬ
ಮೇ 2 ರಿಂದ ‘ಎಂ.ಸಿ.ಎಲ್ ಸೀಸನ್-5’ ಅಬ್ಬರ; ಮೇ 3ಕ್ಕೆ ತೀರ್ಥಹಳ್ಳಿ ರಮೇಶ್ ತಂಡದಿಂದ ಸಂಗೀತ ರಸಸಂಜೆ!
– ವರಾಹಿ ಹಿನ್ನೀರಿನ ಮಡಿಲಲ್ಲಿ ಸತತ ಐದನೇ ವರ್ಷದ ಕ್ರೀಡಾ ಸಂಭ್ರಮ.
– ಕ್ರೀಡೆ ಮತ್ತು ಸಂಗೀತದ ಅದ್ಭುತ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ ಸಿರಿಮನೆ ಮೈದಾನ.

ಮೇಕೇರಿ: ಮಲೆನಾಡಿನ ಸುಂದರ ಪರಿಸರ, ವರಾಹಿ ಹಿನ್ನೀರಿನ ಮಡಿಲಲ್ಲಿರುವ ಮೇಕೇರಿ ಕವರಿಯಲ್ಲಿ ಸತತ ಐದನೇ ವರ್ಷದ ‘ಮೇಕೇರಿ ಕ್ರಿಕೆಟ್ ಲೀಗ್ (MCL) – ಸೀಸನ್ 5’ ಕ್ರೀಡಾಕೂಟಕ್ಕೆ ವೇದಿಕೆ ಸಜ್ಜಾಗಿದೆ. ಕ್ರೀಡಾಭಿಮಾನಿಗಳ ಬಹುನಿರೀಕ್ಷಿತ ಈ ಟೂರ್ನಿಯು ಮೇ 2 ಮತ್ತು 3, 2026ರಂದು ಮೇಕೇರಿಯ ಸಿರಿಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಈ ಲೀಗ್, ಈ ಬಾರಿ ಮತ್ತಷ್ಟು ವಿಶೇಷತೆಗಳೊಂದಿಗೆ ಕ್ರೀಡಾ ಪ್ರೇಮಿಗಳನ್ನು ರಂಜಿಸಲು ಸಿದ್ಧವಾಗಿದೆ. ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಸಾಂಸ್ಕೃತಿಕ ಸೊಗಡನ್ನೂ ಮೈಗೂಡಿಸಿಕೊಂಡಿರುವ ಈ ಕ್ರೀಡಾ ಹಬ್ಬಕ್ಕೆ ಮೇಕೇರಿ ಪರಿಸರ ಈಗಿನಿಂದಲೇ ಸಿಂಗಾರಗೊಂಡಿದೆ.

ವಿಶೇಷ ಆಕರ್ಷಣೆ: ಸಂಗೀತ ರಸಸಂಜೆ
ಈ ಬಾರಿಯ ಎಂ.ಸಿ.ಎಲ್‌ನ ಪ್ರಮುಖ ಆಕರ್ಷಣೆಯಾಗಿ ಮೇ 3ರಂದು ಸಂಜೆ ಅದ್ಧೂರಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಾಯಕರಾದ ತೀರ್ಥಹಳ್ಳಿ ರಮೇಶ್ ಮತ್ತು ತಂಡದವರಿಂದ ಸಂಗೀತ ರಸಸಂಜೆ ನಡೆಯಲಿದ್ದು, ಗಾಯನ ಸುಧೆಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದ್ದಾರೆ “ಮಲೆನಾಡಿನ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಲೀಗ್ ನಡೆಸಲಾಗುತ್ತಿದೆ. ಸತತ 5ನೇ ವರ್ಷದ ಈ ಸಂಭ್ರಮಕ್ಕೆ ಎಲ್ಲರೂ ಸಾಕ್ಷಿಯಾಗಬೇಕು” ಎಂದು ಟೀಮ್ ಎಂ.ಸಿ.ಎಲ್ (MCL) ಪ್ರಕಟಣೆಯಲ್ಲಿ ತಿಳಿಸಿದೆ. ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾ ಹಬ್ಬಕ್ಕೆ ಮಲೆನಾಡಿನ ಜನತೆಗೆ ತಂಡವು ಪ್ರೀತಿಯ ಆದರದ ಸುಸ್ವಾಗತವನ್ನು ಕೋರಿದೆ.

Categories
inspiration ಕ್ರಿಕೆಟ್ ಕ್ರೀಡಾ ಸುದ್ದಿ ಪ್ರತಿಭೆಗಳು ರಾಜ್ಯ

ಕಣ್ಣು ಕಾಣದ ಹುಡುಗಿ ವಿಶ್ವಕಪ್ ಗೆಲ್ಲಿಸಿದಳು..!

ಕಣ್ಣು ಕಾಣದ ಹುಡುಗಿ ವಿಶ್ವಕಪ್ ಗೆಲ್ಲಿಸಿದಳು..!

– ಭಾರತ ಅಂಧರ ವಿಶ್ವ ಕಪ್ ಗೆಲ್ಲಿಸಿದ ಆಲ್ ರೌಂಡರ್ ಕಾವ್ಯ ರಿಪ್ಪಿನಪೇಟೆ
– ಪ್ರಧಾನಿ, ಸಿಎಂ ಸೇರಿ ಎಲ್ಲರಿಂದ ಸಿಹಿ ತಿನಿಸಿ ಸಂಭ್ರಮ

‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು’ ಎನ್ನುವ ಗೀತೆ ಹಲವರ ಬದುಕಿಗೆ ಪ್ರೇರಣೆ ನೀಡಿದರೆ, ಆ ಹಾಡಿನ ಸಾಲುಗಳಂತೆ ಬದುಕುವ ಮೂಲಕ ಕೆಲವು ವ್ಯಕ್ತಿತ್ವಗಳು ಬೇರೆಯವರಿಗೆ ಮಾದರಿಯಾಗಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಇಂಡಿಯಾ ಅಂಧರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಭಾರತ ಅಂಧರ ವಿಶ್ವ ಕಪ್ ಗೆಲ್ಲುವ ಸಾಧನೆ ಮಾಡಿದ ಕಾವ್ಯ ವಿ ಈಗ ಸುದ್ದಿಯಲ್ಲಿದ್ದಾರೆ.

ಐವರು ಹೆಣ್ಣು ಮಕ್ಕಳ ಕುಟುಂಬ!
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಎನ್ನುವ ಸಣ್ಣ ಊರಿನ ಒಂದು ಭಾಗವಾದ ಬರುವೆ ಎಂಬ ಗ್ರಾಮದಲ್ಲಿ ವೆಂಕಟೇಶ್ ಆಚಾರ್ಯ ಮತ್ತು ಜಯ ಅವರ ಪುತ್ರಿಯಾಗಿ ಜನಿಸಿದ ಕಾವ್ಯ ಅವರು ಜನ್ಮಜಾತವಾಗಿ ಕಣ್ಣಿನ ದೋಷವನ್ನು ಹೊಂದಿದವರು. ಐವರು ಹೆಣ್ಣು ಮಕ್ಕಳಿಂದ ತುಂಬಿರುವ ಬಡ ಕುಟುಂಬವನ್ನು, ವೆಂಕಟೇಶ್ ಮತ್ತು ಜಯ ಅವರು ತಮ್ಮ ಶ್ರಮಭರಿತ ದುಡಿಮೆಯಿಂದ ಕಟ್ಟಿದರು. ನಾಲ್ವರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಬೆಳೆಸಿದರು. ಆದರೆ ಕಷ್ಟಪಡುವವರಿಗೇ ನೋವು ಜಾಸ್ತಿ ಎನ್ನುವಂತೆ ಐವರು ಹೆಣ್ಣು ಮಕ್ಕಳಲ್ಲಿ ಒಬ್ಬಳಾದ ಕಾವ್ಯಾಳಿಗೆ ಎದುರಾಗಿರುವ ಕಣ್ಣಿನ ಸಮಸ್ಯೆಯಿಂದಾಗಿ ಉತ್ತಮ ಭವಿಷ್ಯ ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕೊರಗು ವೆಂಕಟೇಶ್ ದಂಪತಿಗಳಿಗೆ ಸದಾ ಕಾಡುತ್ತಿತ್ತು.

ಅಂಧರ ಶಾಲೆಯಲ್ಲಿ ಓದಿ ಸಾಧನೆ
ರಿಪ್ಪನ್ ಪೇಟೆಯ ಬರುವೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾವ್ಯಾಳಿಗೆ ಕಣ್ಣಿನ ದೋಷದಿಂದಾಗಿ ಬರಬರುತ್ತ ಓದು ಬಹಳ ಕಷ್ಟದಾಯಕವಾಯಿತು. ಆಕೆಯ ಸಮಸ್ಯೆಯನ್ನು ಅರಿತ ಗರ್ತಿಕೆರೆ ಶಾಲೆಯ ಶಿಕ್ಷಕಿಯಾದ ಪೂರ್ಣಿಮಾ ಅವರು ಕಾವ್ಯಾಳ ತಂದೆ ತಾಯಿಗಳಿಗೆ ತಿಳಿಸಿ, ಶಿವಮೊಗ್ಗದ ಗೋಪಾಳ ಬಡಾವಣೆಯಲ್ಲಿರುವ ಶಾರದಾ ಅಂಧರ ವಿಕಾಸ ಶಾಲೆಗೆ ದಾಖಲಿಸಿದರು. ಐದನೇ ತರಗತಿಯಿಂದ ಕಾವ್ಯ ಶಾರದಾ ಅಂಧರ ವಿಕಾಸ ಶಾಲೆಯ ವಿದ್ಯಾರ್ಥಿನಿಯಾಗಿ 2009ರಿಂದ 2015ರ ವರೆಗೆ ವಿದ್ಯಾಭ್ಯಾಸ ನಡೆಸಿದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಕಾವ್ಯಾಳಿಗೆ ಅಲ್ಲಿನ ಶಿಕ್ಷಕರಾದ ಸುರೇಶ್ ಮತ್ತು ಈಶ್ವರ್ ಅವರು ಉತ್ತೇಜನ ನೀಡಿ ಆಕೆಯ ಜೀವನದಲ್ಲಿ ಸ್ಪೂರ್ತಿದಾಯಕ ವ್ಯಕ್ತಿಗಳಾದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನತ್ತ ಪಯಣ ಬೆಳೆಸಿದ ಕಾವ್ಯ ಅವರು, ಬೆಂಗಳೂರಿನ ಸಮರ್ಥನಂ ಅಂಧರ ವಿಕಾಸ ಕೇಂದ್ರದಲ್ಲಿ ಬಿ.ಎ. ಪದವಿಯನ್ನು ಪಡೆದುಕೊಂಡರು. ಪ್ರಸ್ತುತ ಜ್ಞಾನ ಭಾರತಿ ಎಜುಕೇಶನ್ ಸೊಸೈಟಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಅಭ್ಯಸಿಸುತ್ತಿದ್ದಾರೆ.

ಕ್ರೀಡೆ ಆಸೆ ಚಿಗುರು ಒಡೆಯಿತು…!
ಬೆಂಗಳೂರಿನಲ್ಲಿ ನೆಲೆಸಿದ ಕಾವ್ಯಾಳಿಗೆ ತನ್ನ ಕ್ರೀಡಾಸಕ್ತಿಗೆ ಮತ್ತಷ್ಟು ಉತ್ತೇಜನ ದೊರೆಯಿತು. ಜ್ಞಾನ ಭಾರತಿ ಎಜುಕೇಶನ್ ಸೊಸೈಟಿ ಇದಕ್ಕೆ ಪೂರಕವಾಯಿತು. ಅಲ್ಲದೆ ಶಿಕಾ ಶೆಟ್ಟಿ ಮತ್ತು ಚಂದು ಅವರು ಕಾವ್ಯಾಳ ಕ್ರೀಡೆ ಎಂಬ ಚಿಗುರಿಗೆ ತರಬೇತಿ ಎಂಬ ನೀರೆರೆದು ಪೋಷಿಸಿ, ಬೆಳೆಸಿದರು. ಅದರ ಫಲವನ್ನು ಇಡೀ ದೇಶವೇ ಕೊಂಡಾಡುವoತಾಯಿತು.

ಭಾರತದ ಆಲ್ ರೌಂಡರ್!
2025ರ ನವೆಂಬರ್ ನಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಅಂಧ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ನಲ್ಲಿ, ದೀಪಿಕಾ ಟಿ.ಸಿ ಅವರ ನಾಯಕತ್ವದ ಭಾರತದ ತಂಡದಲ್ಲಿ ಕಾವ್ಯ ಅವರು ಏಳು ಕ್ರಿಕೆಟ್ ಪಂದ್ಯಾವಳಿ ಶ್ರೇಣಿಯಲ್ಲಿ ಮೂರು ಪಂದ್ಯಗಳಲ್ಲಿ ಆಲ್ ರೌಂಡರ್ ಆಗಿ ಆಡುವ ಮೂಲಕ, ನೇಪಾಳ ತಂಡವನ್ನು ಏಳು ವಿಕೆಟ್ ಗಳಲ್ಲಿ ಪರಾಭವಗೊಳಿಸಿ, ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಕೈಜೋಡಿಸಿದರು. ಪರಿಣಾಮವಾಗಿ ಕಾವ್ಯಾಳಿಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಮೋದಿ, ಸಿಎಂ ಅವರಿಂದ ಅಭಿನಂದನೆ
ಪ್ರಧಾನಮಂತ್ರಿಗಳು ಸಿಹಿ ತಿನ್ನಿಸಿರುವುದು, ಅಮಿತ್ ಶಾ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕದ ದೊಡ್ಮನೆ ಎನಿಸಿಕೊಂಡ ಡಾ.ರಾಜಕುಮಾರ್ ಅವರ ಕುಟುಂಬಸ್ಥರು ಕಾವ್ಯ ಮತ್ತವರ ತಂಡವನ್ನು ಮನೆಗೆ ಆಹ್ವಾನಿಸಿ ಔತಣ ನೀಡಿದ್ದು, ಕ್ರಿಕೆಟ್ ತಂಡದ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವ ಅವಕಾಶ ಒದಗಿ ಬಂದಿದ್ದು, ಕೇವಲ ಕಾವ್ಯಾ ಮತ್ತು ಆಕೆಯ ಕುಟುಂಬಕ್ಕಷ್ಟೇ ಅಲ್ಲದೆ ಮಲೆನಾಡಿಗರಿಗೆ ಹೆಮ್ಮೆಯನ್ನು ತಂದುಕೊಟ್ಟಿದೆ.

ಇಡೀ ಊರಿಗೆ ಹೆಮ್ಮೆ..!
ಇನ್ನು ರಿಪ್ಪನ್ ಪೇಟೆಯ ಜನರಿಗೆ ತಮ್ಮೂರಿನ ಹೆಸರನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದ ಊರಿನ ಮಗಳ ಬಗ್ಗೆ ಕೇವಲ ಹೆಮ್ಮೆಯಷ್ಟೇ ಅಲ್ಲದೆ ಅಭಿಮಾನ ಕೂಡ ಮೂಡಿದೆ. ದೇವರು ಒಂದನ್ನು ಕಸಿದುಕೊಂಡರೆ ಅದರ ಎರಡರಷ್ಟು ಒಳ್ಳೆಯದನ್ನು ನೀಡುತ್ತಾನೆ ಎನ್ನುವುದಕ್ಕೆ ಕಾವ್ಯ ಉತ್ತಮ ನಿದರ್ಶನವಾಗಿದ್ದಾಳೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ ರಾಜ್ಯ

ಶುರುವಾಯ್ತು ಐಪಿಎಲ್ ರಂಗು..!

ಶುರುವಾಯ್ತು ಐಪಿಎಲ್ ರಂಗು..!
– ಬೆಂಗಳೂರಲ್ಲೇ ಮೊದಲ ಮ್ಯಾಚ್: ಅಭಿಮಾನಿಗಳ ಕಾತುರ
– ದೇಶದ ಮಹಾ ನಗರಗಳಲ್ಲಿ ಪಂದ್ಯ: ಬೆಟ್ಟಿಂಗ್ ಬ್ಯಾನ್..!
– 11 ಮಂದಿ ಮೃತರ ನೆನಪಲ್ಲಿ 11 ಕುರ್ಚಿ ಖಾಲಿ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕ್ರಿಕೆಟ್ ಪ್ರೇಮಿಗಳ ಮೆಚ್ಚಿನ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ 19ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ., ದೇಶ ವಿದೇಶದ ನೂರಾರು ಸ್ಟಾರ್ ಆಟಗಾರರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಟ ಆಡಲಿದ್ದಾರೆ.
ಐಪಿಎಲ್ ಮೊದಲ 20 ಪಂದ್ಯಗಳ ವಿವರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಬಿಡುಗಡೆಗೊಳಿಸಿದೆ. ಮಾರ್ಚ್ 28ರಂದು ಐಪಿಎಲ್ ಗೆ ಅದ್ಧೂರಿ ಚಾಲನೆ ದೊರೆಯಲಿದ್ದು, ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 7:30ಕ್ಕೆ ನಡೆಯಲಿದೆ. ಐಪಿಎಲ್ ನೂರಾರು ಕೋಟಿ ವ್ಯವಹಾರ. ಆದರೆ ಜನ ಬೆಟ್ಟಿಂಗ್ ಗೀಳಿಗೆ ಬೀಳುವ ಸಾಧ್ಯತೆ ಇದೆ. ಪೊಲೀಸ್ ಹಾಗೂ ಭಾರತ ಸರ್ಕಾರ ಇಂತಹ ಚಟುವಟಿಕೆ ಮೇಲೆ ನಿಗಾ ಇಡಬೇಕಿದೆ.

ಮೊದಲ ಪಂದ್ಯದಲ್ಲೇ ಆರ್.ಸಿ.ಬಿ ಆಟ!

ಐಪಿಎಲ್ ಕ್ರಿಕೆಟ್ ನ ಮೊದಲ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಬಳಿಕ ಏಪ್ರಿಲ್ 5ರ ಭಾನುವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಸೆಣಸಾಡಲಿದೆ. ಅಂತಿಮ ಪಂದ್ಯ 31 ಮೇ 2026ರಂದು ನಡೆಯಲಿದೆ. ಸುಮಾರು 84 ಪಂದ್ಯಗಳಿದ್ದು, ಪ್ರತಿಯೊಂದು ತಂಡ ಸುಮಾರು 14 ಲೀಗ್ ಪಂದ್ಯಗಳನ್ನು ಆಡಲಿದೆ. ಅಗ್ರ 4 ತಂಡಗಳು ಪ್ಲೇಆಫ್‌ಗೆ ಪ್ರವೇಶಿಸುತ್ತವೆ. ದೇಶದ ವಿವಿಧ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಅಹಮದಾಬಾದ್ ಅಲ್ಲಿ ಪಂದ್ಯಗಳು ನಡೆಯಲಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಕ್ರೀಡಾ ಹಬ್ಬವಾಗಲಿದೆ.

11 ಜನರ ನೆನಪಿಗೆ 11 ಕುರ್ಚಿ ಖಾಲಿ!
ಕಳೆದ ವರ್ಷ 18 ವರ್ಷದ ಬಳಿಕ ಕಪ್ ಗೆದ್ದ ಆರ್.ಸಿ.ಬಿ ಸಂಭ್ರಮಾಚರಣೆ ವೇಳೆ 11 ಮಂದಿ ಅಭಿಮಾನಿಗಳು ಕಾಲು ತುಳಿತಕ್ಕೆ ಬಲಿಯಾದ ಘಟನೆ ನಡೆದಿತ್ತು. ಅವರ ಸ್ಮರಣಾರ್ಥ 11 ಕುರ್ಚಿಗಳನ್ನು ಖಾಲಿ ಬಿಡಲಾಗಿದೆ. ಮೆಟ್ರೋ, ಬಸ್, ವಾಹನ ಟ್ರಾಫಿಕ್ ಇರಲಿದೆ.

ಭಾಗವಹಿಸುವ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಚೆನೈ ಸೂಪರ್ ಕಿಂಗ್ಸ್
ಮುಂಬೈ ಇಂಡಿಯನ್ಸ್
ಕೊಲ್ಕತ್ತಾ ನೈಟ್ ರೈಡರ್ಸ್
ಡೆಲ್ಲಿ ಕ್ಯಾಪಿಟಲ್ಸ್
ಪಂಜಾಬ್ ಕಿಂಗ್ಸ್
ರಾಜಸ್ತಾನ್ ರಾಯಲ್ಸ್
ಸನ್ ರೈಸರ್ಸ್ ಹೈದರಾಬಾದ್
ಗುಜರಾತ್ ಟೈಟಾನ್ಸ್
ಲಕ್ನೌ ಸೂಪರ್ ಗೈಟ್ಸ್

Categories
ಕ್ರಿಕೆಟ್ ಕ್ರೀಡಾ ಸುದ್ದಿ ರಾಷ್ಟ್ರೀಯ ವಾರ್ತೆ

ಭಾರತ ಚಾಂಪಿಯನ್..!

ಭಾರತ ಚಾಂಪಿಯನ್..!
– ದೇಶದಲ್ಲಿ ಸಂಭ್ರಮ: ಟಿ 20 -ವಿಶ್ವಕಪ್ ಗೆದ್ದ ಹೀರೋಸ್
– ಬೆಂಕಿ ಬ್ಯಾಟಿಂಗ್… ಬೆಂಕಿ ಬೌಲಿಂಗ್..

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಅಹಮದಾಬಾದ್‌: ಆರಂಭದಲ್ಲಿ ಬ್ಯಾಟರ್‌ಗಳ ವಿಸ್ಫೋಟಕ ಬ್ಯಾಟಿಂಗ್ ನಂತರ ಬೌಲರ್‌ಗಳ ಬೆಂಕಿ ಬೌಲಿಂಗ್‌ನಿಂದ ಫೈನಲ್ ಪಂದ್ಯದಲ್ಲಿ ಭಾರತ ಸತತ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಬರೆದಿದೆ. ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳಿಂದ ಗೆದ್ದ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಸತತವಾಗಿ ಎರಡು ಟಿ20 ಫೈನಲ್ ಪಂದ್ಯವನ್ನು ಯಾವುದೇ ತಂಡ ಜಯಗಳಿಸಿಲ್ಲ. ಆದರೆ ಭಾರತ 2024 ಮತ್ತು 2026 ರಲ್ಲಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟಿ20 ವಿಶ್ವಕಪ್ ಆತಿಥ್ಯ ವಹಿಸಿದ ತಂಡ ಇಲ್ಲಿಯವರೆಗೆ ಚಾಂಪಿಯನ್‌ ಪಟ್ಟ ಅಲಂಕರಿಸಿರಲಿಲ್ಲ.

ಈ ಬಾರಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸಿತ್ತು. ಇಲ್ಲಿಯವರೆಗೆ ಯಾವುದೇ ತಂಡ 3 ಟಿ20 ವಿಶ್ವಕಪ್ ಪಂದ್ಯ ಗೆದ್ದಿರಲಿಲ್ಲ. ಆದರೆ 2008, 2024 ಮತ್ತು 2026 ರಲ್ಲಿ ಜಯಿಸುವ ಮೂಲಕ ಭಾರತ ವಿಶ್ವದಾಖಲೆ ಬರೆದಿದೆ. ಇಂಗ್ಲೆಂಡ್ 2010, 2022 ರಲ್ಲಿ ಟ್ರೋಫಿ ಗೆದ್ದರೆ ವೆಸ್ಟ್ ಇಂಡೀಸ್ 2012 ಮತ್ತು 2016 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಸಂಜು ಸ್ಯಾಮ್ಸನ್ ಮತ್ತೆ ಹೀರೋ ಆದರು. ಬುಮ್ರಾ 4 ವಿಕೆಟ್ ಪಡೆದು ಸಾಧನೆ ಮಾಡಿದರು. ಇಡೀ ದೇಶ ಈಗ ಸಂಭ್ರಮದಲ್ಲಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಕ್ರಿಕೆಟ್ ಬಾಲ ಸಾಧಕ ಜ್ಞಾನ ಪ್ರಭು

ಕ್ರಿಕೆಟ್ ಬಾಲ ಸಾಧಕ ಜ್ಞಾನ ಪ್ರಭು
– 72 ಎಸೆತದಲ್ಲಿ ಶತಕ ಹೊಡೆದು ದಾಖಲೆ
– ತೀರ್ಥಹಳ್ಳಿ ಸಿಟಿ ಕ್ರಿಕೆಟ್ ಕ್ಲಬ್ ಪರವಾಗಿ ಆಟ

ತೀರ್ಥಹಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ತೀರ್ಥಹಳ್ಳಿಯ ಶಾಂತವೇರಿ ನಿತಿನ್ ಆಯ್ಕೆಗೊಂಡು ಸಾಧನೆ ಮಾಡಿದ್ದು, ಇದೀಗ ಮತ್ತೊಬ್ಬ ಯುವ ಪ್ರತಿಭೆ ಜ್ಞಾನಪ್ರಭು ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಕೆಎಸ್‌ಸಿಎ ನೇತೃತ್ವದಲ್ಲಿ ನಡೆಯುತ್ತಿರುವ 16 ವರ್ಷಕ್ಕಿಂತ ಕಡಿಮೆ ವಯೋಮಾನದ ಕ್ರಿಕೆಟ್ ಪಂದ್ಯಾವಳಿಯಲ್ಲಿ, ತೀರ್ಥಹಳ್ಳಿಯ ಸಿಟಿ ಕ್ರಿಕೆಟ್ ಕ್ಲಬ್ ಪರವಾಗಿ ಆಡುತ್ತಿರುವ ಜ್ಞಾನಪ್ರಭು ತಮ್ಮ ಅದ್ಭುತ ಆಟದಿಂದ ಗಮನ ಸೆಳೆದಿದ್ದಾರೆ.
ಸಾಗರ ತಂಡದ ವಿರುದ್ಧ 164 ರನ್ ಗುರಿ ಬೆನ್ನತ್ತಿದ ತೀರ್ಥಹಳ್ಳಿ ತಂಡದ ಪರವಾಗಿ ಜ್ಞಾನಪ್ರಭು 72 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಶತಕ (100 ರನ್) ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಜ್ಞಾನಪ್ರಭು ಪ್ರಸ್ತುತ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬೆಂಗಳೂರಿನಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದು, ಪ್ರಥಮ ಪಿಯುಸಿ ಓದುತ್ತಿದ್ದಾರೆ. ತೀರ್ಥಹಳ್ಳಿಯ ಬೊಮ್ಮಸಯ್ಯನ ಅಗ್ರಹಾರದ ನಿವಾಸಿಯಾಗಿರುವ ಅವರು, ಶಿವಮೊಗ್ಗ ಜಿಲ್ಲಾ ಧಾರ್ಮಿಕ ದತ್ತಿ ಸದಸ್ಯೆ ವರಲಕ್ಷ್ಮಿ ಹಾಗೂ ಪ್ರಕಾಶ್ ದಂಪತಿಗಳ ಪುತ್ರ.
ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡದ ಪರವಾಗಿ, ಮುಂದಿನ ದಿನಗಳಲ್ಲಿ ಐಪಿಎಲ್ ಹಾಗೂ ಭಾರತ ತಂಡಕ್ಕೂ ಪ್ರತಿನಿಧಿಸುವ ಸಾಮರ್ಥ್ಯ ಇದೆ ಎಂದು ಸ್ಥಳೀಯ ಕ್ರೀಡಾಭಿಮಾನಿಗಳು ಹೇಳಿದ್ದಾರೆ.

 

 

Categories
Uncategorized ಕ್ರಿಕೆಟ್ ಕ್ರೀಡಾ ಸುದ್ದಿ ಬೆಂಗಳೂರು ರಾಜ್ಯ

ಪಾಕ್ ತಂಡವನ್ನು ಬಗ್ಗುಬಡಿದ ಭಾರತ ಮಹಿಳಾ ಕ್ರಿಕೆಟ್ ತಂಡ

ಪಾಕ್ ತಂಡವನ್ನು ಬಗ್ಗುಬಡಿದ ಭಾರತ ಮಹಿಳಾ ಕ್ರಿಕೆಟ್ ತಂಡ

ಮಹಿಳಾ ಏಕದಿನ ವಿಶ್ವಕಪ್ -2025

* ಪಾಕ್ ವಿರುದ್ಧ ಏಕದಿನದಲ್ಲಿ ಭಾರತ ಸೋಲಿಲ್ಲದ ಸರದಾರ
* ಈ ಪಂದ್ಯದಲ್ಲೂ ‘ನೋ ಹ್ಯಾಂಡ್ ಶೇಕ್’, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತ

NAMMMUR EXPRESS SPORTS NEWS
ಕೊಲಂಬೋ: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ಮಹಿಳಾ ತಂಡ ಗೆಲುವು ಸಾಧಿಸಿದೆ. ಭಾರತ ನೀಡಿದ 248 ರನ್ ಟಾರ್ಗೆಟ್ ಚೇಸ್ ಮಾಡಲು ಎಡವಿದ ಪಾಕಿಸ್ತಾನ 159 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತ 88 ರನ್ ಗೆಲುವು ದಾಖಲಿಸಿದೆ. ಭಾರತ ಮಹಿಳಾ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಮುಗ್ಗರಿಸಿದ್ದು, ಈ ಮೂಲಕ ಏಕದಿನದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ದ ಸೋಲಿಲ್ಲದ ಸರದಾರನಾಗಿ ಮುಂದುವರೆದಿದೆ. ಭಾರತ ಮಹಿಳಾ ತಂಡ ಪುರುಷರ ತಂಡದ ರೀತಿಯಲ್ಲೇ ಪಾಕಿಸ್ತಾನ ಆಟಗಾರ್ತಿಯರಿಗೆ ಹ್ಯಾಂಡ್ ಶೇಕ್ ಮಾಡದೇ ತೆರಳಿದೆ. ಈ ಮೂಲಕ ಪಾಕಿಸ್ತಾನ ಮತ್ತೆ ತೀವ್ರ ಮುಖಭಂಗ ಅನುಭವಿಸಿದೆ. ಸೆಪ್ಟೆಂಬರ್ 28ರಂದು ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ತಂಡ ಹ್ಯಾಂಡ್ ಶೇಕ್ ಮಾತ್ರವಲ್ಲ, ಹಲವು ರೀತಿಯಲ್ಲಿ ಪಾಕಿಸ್ತಾನ ತಂಡವನ್ನು ರೋಸ್ಟ್ ಮಾಡಿತ್ತು.

* ಭಾರತದ ದಾಳಿಗೆ 43 ಓವರ್‌‌ನಲ್ಲಿ ಪಾಕ್ ಆಲೌಟ್
ಭಾರತ 248ರನ್ ಟಾರ್ಗೆಟ್ ನೀಡಿತ್ತು. ಪಾಕಿಸ್ತಾನದ ಸಾದಿರ್ ಅಮೀನ್ ದಿಟ್ಟ ಹೋರಾಟ ನೀಡಿ 81 ರನ್ ಸಿಡಿಸಿ ಅಬ್ಬರಿಸಿದ್ದರು. ಅಮೀನ್ ಅಬ್ಬರ ಭಾರತಕ್ಕೆ ತೆಲನೋವಾಗಿತ್ತು. ಆದರೆ ಸಾದಿರ್ ಅಮೀನ್ ವಿಕೆಟ್ ಪತನದ ಬೆನ್ನಲ್ಲೇ ಪಾಕಿಸ್ತಾನ ದಿಢೀರ್ ಕುಸಿತ ಕಂಡಿತ್ತು. ನತಾಲಿಯಾ ಪರ್ವೇಜ್ ಹಾಗೂ ಸಾದಿರ್ ಅಮಿನ್ ಜೊತೆಯಾಟ ಪಾಕಿಸ್ತಾನ ತಂಡಕ್ಕೆ ನೆರವಾಗಿತ್ತು. ಆದರೆ ಪರ್ವೇಜ್ 33 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಸಾದಿರ್ ಅಮಿನ್ ಏಕಾಂಗಿಯಾಗಿ ಹೋರಾಟ ನೀಡಿದರು. ಯಾರಿಂದರೂ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ 43 ಓವರ್‌ಗಳಲ್ಲಿ ಪಾಕಿಸ್ತಾನ ಆಲೌಟ್ ಆಗಿತ್ತು. 159 ರನ್ ಸಿಡಿಸಿ ಪಾಕಿಸ್ತಾನ ಸೋಲೊಪ್ಪಿಕೊಂಡಿತು.

* ಪಾಕ್ ಏಕದಿನದಲ್ಲಿ ಭಾರತ ಸೋಲಿಲ್ಲದ ಸರದಾರ
ಪಾಕಿಸ್ತಾನ ವಿರುದ್ದ ಭಾರತ ಮಹಿಳಾ ತಂಡ ಏಕದಿನ ಮಾದರಿಯಲ್ಲಿ ಇದುವರೆಗೂ ಯಾವುದೇ ಪಂದ್ಯ ಸೋಲು ಕಂಡಿಲ್ಲ. 12 ಏಕದಿನ ಪಂದ್ಯ ಆಡಿದ್ದು, 12ರಲ್ಲೂ ಪಾಕಿಸ್ತಾನ ವಿರುದ್ದ ಭಾರತ ಗೆಲುವು ದಾಖಲಿಸಿದೆ.

* ಅಂಕಪಟ್ಟಿಯಲ್ಲಿ ಮೊದಲ ಸ್ಥಾನ
ಮಹಿಳಾ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಭಾರತ ಮಹಿಳಾ ತಂಡ ಮೊದಲ ಸ್ಥಾನದಲ್ಲಿದೆ. ಆಡಿದ 2 ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಒಟ್ಟು ನಾಲ್ಕು ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಇತ್ತ ಪಾಕಿಸ್ತಾನ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 2 ಪಂದ್ಯದಲ್ಲಿ ಮುಗ್ಗರಿಸಿದೆ. ಹೀಗಾಗಿ 6ನೇ ಸ್ಥಾನದಲ್ಲಿದೆ. ಒಟ್ಟು 8 ತಂಡಗಳ ಪೈಕಿ ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ 7 ಮತ್ತು 8ನೇ ಸ್ಥಾನದಲ್ಲಿದೆ. 2ರಲ್ಲಿ ಒಂದು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ನಂತರದ ಸ್ಥಾನದಲ್ಲಿದೆ.

Categories
ಕರಾವಳಿ ಕ್ರಿಕೆಟ್ ಕ್ರೀಡಾ ಸುದ್ದಿ ಬೆಂಗಳೂರು ಮಲ್ನಾಡ್ ರಾಜ್ಯ

ಆಪರೇಷನ್ ತಿಲಕ : ಭಾರತದ ಮಡಿಲಿಗೆ ಏಷ್ಯಾಕಪ್ ಟಿ20

ಆಪರೇಷನ್ ತಿಲಕ : ಭಾರತದ ಮಡಿಲಿಗೆ ಏಷ್ಯಾಕಪ್ ಟಿ20

* ಬದ್ಧ ವೈರಿ ಪಾಕಿಸ್ಥಾನ ವಿರುದ್ಧ ಭಾರತಕ್ಕೆ ರೋಚಕ ಜಯ
* ಏಷ್ಯಾ ಕಪ್‌ನಲ್ಲಿ ನಾವೇ ಕಿಂಗ್ 9 ನೇ ಬಾರಿಗೆ ಟ್ರೋಫಿ

 

NAMMMUR EXPRESS NEWS
ದುಬೈ: ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಇಡೀ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಯಾವ ರೀತಿಯ ಮೇಲುಗೈ ಸಾಧಿಸಿತ್ತೋ ಅದೇ ರೀತಿ ಫೈನಲ್ ಪಂದ್ಯದಲ್ಲೂ ಪಾಕಿಸ್ತಾನದ ವಿರುದ್ಧ ವಿರೋಚಿತ ಪ್ರದರ್ಶನ ನೀಡಿ ಏಷ್ಯನ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೀಂ ಇಂಡಿಯಾ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.1 ಓವರ್​ಗಳಲ್ಲಿ 146 ರನ್​ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ 5 ವಿಕೆಟ್ ಕಳೆದುಕೊಂಡು ಕೊನೆಯ ಓವರ್​​ನಲ್ಲಿ ಗೆಲುವು ಸಾಧಿಸಿತು.

 

* ಪಾಕ್‌ಗೆ ಉತ್ತಮ ಆರಂಭ,ಒಂದೇ ಓವರ್‌ನಲ್ಲಿ 3 ವಿಕೆಟ್ ಕಿತ್ತ ಕುಲ್ದೀಪ್
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್‌ಗೆ ಬಲಿಷ್ಠ ಆರಂಭ ಸಿಕ್ಕಿತು. ಪಾಕ್ ಪರ ಆರಂಭಿಕ ಆಟಗಾರರಾದ ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಆಕ್ರಮಣಕಾರಿ ಇನ್ನಿಂಗ್ಸ್‌ನೊಂದಿಗೆ ಉತ್ತಮ ಆರಂಭವನ್ನು ನೀಡಿದರು. ಫರ್ಹಾನ್ ಮತ್ತೊಮ್ಮೆ ಜಸ್ಪ್ರೀತ್ ಬುಮ್ರಾ ಅವರನ್ನು ಗುರಿಯಾಗಿಸಿಕೊಂಡು ಕೇವಲ 38 ಎಸೆತಗಳಲ್ಲಿ 57 ರನ್ ಬಾರಿಸಿದರು. ಅಲ್ಲದೆ ಫರ್ಹಾನ್ ಮತ್ತು ಫಖರ್ ಮೊದಲ ವಿಕೆಟ್​ಗೆ 84 ರನ್‌ಗಳ ಅದ್ಭುತ ಜೊತೆಯಾಟವಾಡಿದರು. ನಂತರ ಫಖರ್ ಜಮಾನ್ ಜವಾಬ್ದಾರಿ ವಹಿಸಿಕೊಂಡು ತಂಡವನ್ನು 100 ರ ಗಡಿ ದಾಟಿಸಿದರು.

ಆದರೆ ಕುಲ್ದೀಪ್ ಯಾದವ್ ದಾಳಿಗಿಳಿದ ಬಳಿಕ ಪಂದ್ಯದ ಚಿತ್ರಣವೇ ಬದಲಾಯಿತು. 13 ನೇ ಓವರ್‌ನಲ್ಲಿ ಕುಲ್ದೀಪ್ ಪಾಕ್‌ನ ಸೈಮ್ ಅಯೂಬ್ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಪಾಕಿಸ್ತಾನ 113 ರನ್​ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಅಲ್ಲಿಂದ, ಮುಂದಿನ ಐದು ಓವರ್‌ಗಳಲ್ಲಿ ಪಾಕಿಸ್ತಾನ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಕೇವಲ 146 ರನ್‌ಗಳಿಗೆ ಆಲೌಟ್ ಆಯಿತು. 17 ನೇ ಓವರ್‌ನಲ್ಲಿ ಕುಲ್ದೀಪ್ ಕೇವಲ ಒಂದು ರನ್‌ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

 

* ಭಾರತಕ್ಕೆ ಆರಂಭಿಕ ಆಘಾತ:ಸಂಜು,ತಿಲಕ್,ದುಬೆ ತಾಳ್ಮೆಯ ಆಕ್ರಮಣ
ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಗ್ರೂಪ್ ಹಂತ ಮತ್ತು ಸೂಪರ್ 4 ಸುತ್ತುಗಳಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತ್ತು. ಇದಕ್ಕೆ ಕಾರಣರಾಗಿದ್ದವರು ಆರಂಭಿಕ ಅಭಿಷೇಕ್ ಶರ್ಮಾ, ಈ ಎರಡೂ ಪಂದ್ಯಗಳಲ್ಲಿ ಅವರು ಸ್ಫೋಟಕ ಆರಂಭವನ್ನು ನೀಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದ್ದರು. ಆದರೆ ಫೈನಲ್​ ಪಂದ್ಯದಲ್ಲಿ ಎಡವಿದ ಅಭಿಷೇಕ್ ಎರಡನೇ ಓವರ್‌ನಲ್ಲಿಯೇ ಔಟಾದರು. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪನಾಯಕ ಶುಭ್​ಮನ್ ಗಿಲ್ ಕೂಡ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿದರು. ಹೀಗಾಗಿ ತಂಡವು ಕೇವಲ 20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇನ್ನಿಂಗ್ಸ್ ನಿಭಾಯಿಸಿ 57 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿದರು.
ಸ್ಯಾಮ್ಸನ್ ಔಟಾದ ನಂತರ ಬಂದ ಶಿವಂ ದುಬೆ, ತಿಲಕ್‌ಗೆ ಉತ್ತಮ ಸಾಥ್ ನೀಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಈ ಇಬ್ಬರೂ ಕೇವಲ 40 ಎಸೆತಗಳಲ್ಲಿ 60 ರನ್‌ಗಳ ವೇಗದ ಜೊತೆಯಾಟವಾಡಿದರು. ಈ ಸಮಯದಲ್ಲಿ, ತಿಲಕ್ ತಮ್ಮ ಹೋರಾಟದ ಅರ್ಧಶತಕವನ್ನು ಪೂರ್ಣಗೊಳಿಸಿದರು ಮತ್ತು ತಂಡಕ್ಕೆ ಗೋಡೆಯಂತೆ ನಿಂತರು. 19 ನೇ ಓವರ್‌ನ ಕೊನೆಯ ಎಸೆತದಲ್ಲಿ ದುಬೆ ಔಟಾದರು, ಇದರಿಂದಾಗಿ ಭಾರತಕ್ಕೆ ಕೊನೆಯ ಆರು ಎಸೆತಗಳಲ್ಲಿ 10 ರನ್‌ಗಳು ಬೇಕಾಗಿದ್ದವು. ಕೊನೆಯ ಓವರ್‌ನಲ್ಲಿ ತಿಲಕ್, ಹ್ಯಾರಿಸ್ ರೌಫ್ ಅವರ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಒತ್ತಡ ಕಡಿಮೆ ಮಾಡಿದರು. ನಂತರ ಸ್ಟ್ರೈಕ್​ಗೆ ಬಂದ ರಿಂಕು ಸಿಂಗ್ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

 

* ಪಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದ ಬೂಮ್ರಾ,ವೀಡಿಯೋ ವೈರಲ್
ಭಾರತ ಮತ್ತು ಪಾಕಿಸ್ತಾನ ನಡುವಿನ 2025 ರ ಏಷ್ಯಾಕಪ್ ಫೈನಲ್ ಪಂದ್ಯವು ರೋಮಾಂಚಕ ಕ್ರಿಕೆಟ್ ಆಟಕ್ಕೆ ಮಾತ್ರವಲ್ಲದೆ ಮೈದಾನದಲ್ಲಿನ ಬಿಸಿಯಾದ ವಾತಾವರಣಕ್ಕೂ ಸುದ್ದಿಯಾಗುತ್ತಿದೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ, ಪಾಕಿಸ್ತಾನಿ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಔಟ್ ಮಾಡಿದ ನಂತರ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ವಿಶಿಷ್ಟ ಆಚರಣೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಪಾಕಿಸ್ತಾನ ಇನ್ನಿಂಗ್ಸ್​ನ 18ನೇ ಓವರ್​ನಲ್ಲಿ ಬುಮ್ರಾ, ಹ್ಯಾರಿಸ್ ರೌಫ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ರೌಫ್ ಅವರ ವಿಕೆಟ್ ಪಡೆದ ನಂತರ, ಬುಮ್ರಾ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದಂತೆ ಸನ್ನೆ ಮಾಡಿ ಆಚರಿಸಿದರು. ಈ ಸಂಭ್ರಮಾಚರಣೆ ತುಂಬಾ ವಿಶೇಷವಾಗಿತ್ತು. ಏಕೆಂದರೆ ಹ್ಯಾರಿಸ್ ರೌಫ್ ಈ ಹಿಂದೆ ಸೂಪರ್ ಫೋರ್ ಪಂದ್ಯದಲ್ಲಿ ಬೌಂಡರಿ ಲೈನ್‌ನಲ್ಲಿ ಇದೇ ರೀತಿಯ ಸನ್ನೆ ಮಾಡಿದ್ದರು. ಬುಮ್ರಾ ಅವರ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

 

 

Categories
Uncategorized ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ಕ್ರಿಕೆಟ್ ಕ್ರೀಡಾ ಸುದ್ದಿ ಮಂಗಳೂರು

ದುಬೈ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದ ಕರಾವಳಿ ಹುಡುಗಿ!

ದುಬೈ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದ ಕರಾವಳಿ ಹುಡುಗಿ!
– ಉಪ್ಪಿನಂಗಡಿಯ ಸಮೀಪದ ಬಜತೂರು ಗ್ರಾಮದ ಪಟ್ಟೆ ಮನೆ ಅಮಿಷ ಆನಂದ್ ಸಾಧನೆ
– ಕೊಲಂಬೋದಲ್ಲಿ ನಡೆಯಲಿರುವ ಮಹಿಳಾ ಟೂರ್ನಿಯಲ್ಲಿ ಪಾದಾರ್ಪಣೆ

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಉಪ್ಪಿನಂಗಡಿಯ ಸಮೀಪದ ವಳಾಲ್, ಬಜತೂರು ಗ್ರಾಮದ ಪಟ್ಟೆ ಮನೆ ಅಮಿಷ ಆನಂದ್ ದುಬೈ U.A.E ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಿದ್ದಾರೆ.

ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 4 ರ ವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿರುವ ಅಂಡರ್ 22 ವಯೋ ವಿಭಾಗದ ಹುಡುಗಿಯರ ಇಂಡೋರ್ ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ . ಈ ಕ್ರಿಕೆಟ್ ಪಂದ್ಯ ಕೂಟದಲ್ಲಿ U.A.E ಸೇರಿದಂತೆ ಆಸ್ಟ್ರೇಲಿಯಾ ,ನ್ಯೂಜಿಲ್ಯಾಂಡ್ ,ಸೌತ್ ಆಫ್ರಿಕಾ ,ಶ್ರೀಲಂಕಾ ಹಾಗು ಭಾರತದ ಮಹಿಳಾ ತಂಡಗಳು ಭಾಗವಸಲಿದೆ

ಕೇವಲ 14 ವಯಸ್ಸಿನ ಈಕೆ U.A.E ಯ ಅಂತಾರಾಷ್ಟ್ರೀಯ ಇಂಡೋರ್ ಕ್ರಿಕೆಟ್ ತಂಡದ ಕಿರಿಯ ಆಟಗಾರ್ತಿಯಾಗಿದ್ದು, ಕರ್ನಾಟಕ ಮೂಲದ ಆಟಗಾರ್ತಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಸದ್ಯ ದುಬೈ ಜೆ ಸ್ ಸ್ ಪ್ರೈವೇಟ್ ಸ್ಕೂಲ್ನಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ಅಮಿಷ ಆನಂದ್, ದುಬೈಯಲ್ಲಿ ನೆಲೆಸಿರುವ ಕ್ರೀಡಾ ಪ್ರೇಮಿ ಹಾಗು ಪ್ರೋತ್ಸಾಹಿ ಆನಂದ್ ಪಟ್ಟೆ ಮತ್ತು ವಿನುತಾ ಆನಂದ್ ದಂಪತಿಯ ಏಕೈಕ ಮಗಳು
ಸೀಸನ್(ಹಾರ್ಡ್)ಬಾಲ್ ನಲ್ಲಿ U.A.E ಕ್ರಿಕೆಟ್ ಬೋರ್ಡ್ ನ ಅಂಡರ್ 15,16 ಮತ್ತು ಅಂಡರ್ 19ರ ಹುಡಿಗಿಯರ ವಿಭಾಗದ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯ ಕೂಟದಲ್ಲಿ ಅತಿಥಿ ತಂಡಗಳಾದ ಇಂಗ್ಲೆಂಡ್ ನ್ಯೂಜಿಲ್ಯಾಂಡ್ , ಅಮೇರಿಕಾ ಹಾಗು ಓಮನ್ ತಂಡಗಳೆದುರು U.A.E ಪರವಾಗಿ ಆಡಿದ ಅನುಭವ ಇದೆ.ಇಂಗ್ಲೆಂಡ್ನ ಕ್ರಿಕೆಟ್ ಆಟಗಾರ ಜೋ ರೂಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ ನಡೆಯಲ್ಪಡುವ ರೂಟ್ ಕಪ್ ಅಂಡರ್ 16 ಹುಡುಗಿಯರ ವಿಭಾದಲ್ಲಿ ಸತತ ಎರಡನೇ ಬಾರಿ ದುಬೈ ತಂಡವನ್ನು ಪ್ರತಿನಿಧಿಸಿ , ಅತಿಥಿ ತಂಡಗಳಾದ ಇಂಗ್ಲೆಂಡ್ ನ್ಯೂಜಿಲ್ಯಾಂಡ್ ಇಂಗ್ಲೆಂಡ್ ಹಾಗು ನ್ಯೂಜಿಲ್ಯಾಂಡ್ ತಂಡಗಳನ್ನು ಸೋಲಿಸಿ UAE ತಂಡವು ರೂಟ್ ಕಪ್ ನ್ನು ಗೆದ್ದುಕೊಂಡಿತ್ತು.

ಬಹುಮುಖ ಪ್ರತಿಭೆಯಾಗಿರುವ ಈಕೆ ಕ್ರಿಕೆಟಿನೊಂದಿಗೆ ವಾಲಿಬಾಲ್ ,ಅಥ್ಲೆಟಿಕ್ ,ಈಜುಗಾರಿಕೆ . ಹಾಡುಗಾರಿಕೆ ಹಾಗು ನ್ರಿತ್ಯದಲ್ಲೂ ಮುಂಚೂಣಿಯಲ್ಲಿದ್ದಾಳೆ. U.A.Eಯ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ನಿಶಾ ಆಲಿ ಗರಡಿಯಲ್ಲಿ ತರಬೇತಿ ಪಡೆಯುತಿದ್ದು , U.A.E ಯ ಮಾಜಿ ನಾಯಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ನ ಅಧಿಕಾರಿಯಾಗಿರುವ ಛಾಯ ಮುದ್ದ್ಗಲ್ ಮಾರ್ಗದರ್ಶನದೊಂದಿಗೆ ಅಂತಾರಾಷ್ಟ್ರೀಯಯ ಕ್ರಿಕೆಟಿಗೆ ತಯಾರಾಗುತಿದ್ದಾಳೆ. ಬಹು ಪ್ರತಿಭೆಯ ಈ ಅಪ್ಪಟ ಕ್ರೀಡಾಪಟುವಿನ ಮುಂದಿನ ಕ್ರೀಡಾ ಪಯಣಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಶುಭ ಹಾರೈಸುತ್ತದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ ರಾಜ್ಯ

ಭಾರತದ 2.0 ದಾಳಿಗೆ ತತ್ತರಿಸಿದ ಪಾಕಿಸ್ತಾನ

ಭಾರತದ 2.0 ದಾಳಿಗೆ ತತ್ತರಿಸಿದ ಪಾಕಿಸ್ತಾನ

* ದುಬೈನಲ್ಲಿ ಭಾರತದ ಪರ ರನ್ ಅಭಿಷೇಕ
* ಅಬ್ಬರಿಸಿದ ಗಿಲ್, ಭಾರತವನ್ನು ಕೆಣಕಿದ ಪಾಕ್‌ಗೆ ತಕ್ಕ ಉತ್ತರ

NAMMMUR EXPRESS SPORTS NEWS
ದುಬೈ: ಇಲ್ಲಿನ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್​ನ 14ನೇ ಪಂದ್ಯದಲ್ಲಿ ಭಾರತ ತಂಡ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿ ಪಾಕ್ ತಂಡವನ್ನು ಹೀನಾಯವಾಗಿ ಬಗ್ಗು ಬಡಿದಿದೆ ಎಂಬುದು ವಿಶೇಷ.ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪರ ಆರಂಭಿಕ ಆಟಗಾರ ಸಾಹಿಬ್​ಝಾದ ಫರ್ಹಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 45 ಎಸೆತಗಳನ್ನು ಎದುರಿಸಿದ ಫರ್ಹಾನ್ 3 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 58 ರನ್ ಗಳಿಸಿ ಔಟಾದರು. ಇನ್ನು ಸೈಮ್ ಅಯ್ಯೂಬ್ 21 ರನ್​ಗಳ ಕೊಡುಗೆ ನೀಡಿದರೆ, ಕೊನೆಯ ಹಂತದಲ್ಲಿ ಫಹೀಮ್ ಅಶ್ರಫ್ 20 ರನ್ ಬಾರಿಸಿದರು. ಈ ಮೂಲಕ ಪಾಕಿಸ್ತಾನ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

* ಭಾರತ ತಂಡಕ್ಕೆ ಗೆಲುವಿನ ಅಭಿಷೇಕ,ಗಿಲ್ ಆರ್ಭಟ
172 ರನ್​ಗಳ ಗುರಿ ಪಡೆದ ಭಾರತ ತಂಡ ಶುಭ್​ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ಒದಗಿಸಿದರು. ಮೊದಲ ಓವರ್​ನ ಮೊದಲ ಎಸೆತದಲ್ಲೇ ಸಿಕ್ಸ್​ ಸಿಡಿಸಿ ಶುಭಾರಂಭ ಮಾಡಿದ ಅಭಿಷೇಕ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅತ್ತ ಶುಭ್​ಮನ್ ಗಿಲ್ ಕೂಡ ಬಿರುಸಿನ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು. ಈ ಮೂಲಕ ಗಿಲ್ ಕೂಡ 28 ಎಸೆತಗಳಲ್ಲಿ 47 ರನ್ ಬಾರಿಸಿದರು. ಆರಂಭಿಕರಿಬ್ಬರ ತೂಫಾನ್ ಬ್ಯಾಟಿಂಗ್​ನೊಂದಿಗೆ ಭಾರತ ಕೇವಲ 10 ಓವರ್​ಗಳಲ್ಲಿ 109 ರನ್​ ಕಲೆಹಾಕಿತು.
ಶುಭ್​ಮನ್ ಗಿಲ್ (47) ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ (0) ಕೂಡ ರನ್‌ ಗಳಿಸದೇ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 74 ರನ್​ ಬಾರಿಸಿ, ತನ್ನ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಸಂಜು ಸ್ಯಾಮ್ಸನ್ 13 ರನ್​ಗಳಿಸಿ ಔಟಾದರೆ,ಈ ಹಂತದಲ್ಲಿ ಜೊತೆಗೂಡಿದ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟದೊಂದಿಗೆ ಭಾರತ ತಂಡವನ್ನು 18.5 ಓವರ್​ಗಳಲ್ಲಿ ಗೆಲುವಿನ ಗುರಿ ಮುಟ್ಟಿಸಿದರು. ಈ ಮೂಲಕ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

* ಭಾರತ ತಂಡವನ್ನು ಕೆಣಕಿದ ಪಾಕ್‌ಗೆ ತಕ್ಕ ಉತ್ತರ
ಏಷ್ಯಾ ಕಪ್‌ ಟೂರ್ನಿಯ ಭಾರತ ಪಾಕ್ ಮೊದಲ ಪಂದ್ಯದಲ್ಲೇ ಹಲವು ಚರ್ಚೆಗೆ ಕಾರಣವಾಗಿ ಆಟಗಾರರ ನಡುವೆ ಕಾಲೆಳೆವ ಹಲವು ಪ್ರಸಂಗ ನಡೆದಿತ್ತು,ಅದರಂತೆ ಎರಡನೇ ಪಂದ್ಯದಲ್ಲೂ ಕೂಡ ನಡೆದಿದೆ. ಈ ಪಂದ್ಯದಲ್ಲೂ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಪಾಕ್ ತಂಡದ ನಾಯಕನ ಕೈಕುಲುಕದೇ,ಭಾರತ ತಂಡವನ್ನು ಕೆಣಕಿದ ಪಾಕ್‌ಗೆ ತಕ್ಕ ಉತ್ತರ ನೀಡಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಾಕ್‌ನ ಫರ್ಹಾನ್ ಅರ್ಧ ಶತಕ ಸಿಡಿಸಿ ಸಂಭ್ರಮಿಸುವಾಗ ಗನ್ ಮಾದರಿಯಲ್ಲಿ ಅಣಕಿಸಿದ್ದರು ಈ ವೀಡಿಯೋ ಭಾರೀ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಭಾರತ ತಂಡದ ಪರ ಅಭಿಷೇಕ್‌ ಸಿಡಿಸಿದ 75 ರನ್‌‌ಗಳ ಆಟವಾಡಿ ತಕ್ಕ ಉತ್ತರ ನೀಡಿದರು.