ಸುಳ್ಯದಲ್ಲಿ ಆನೆಗಳ ಕಾದಾಟ
– ಕಾದಾಟದಲ್ಲಿ ಸಾವು ಶಂಕೆ, ಗಂಡಾನೆಯ ಮೃತದೇಹ ಪತ್ತೆ
– ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು
NAMMUR EXPRESS NEWS
ಸುಳ್ಯ: ಗಂಡಾನೆಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಮತ್ತು ಕೇರಳ ಗಡಿ ಭಾಗದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ನಡೆದಿದೆ. ಮಂಡೆಕೋಲು ರಿಸರ್ವ್ ಫಾರೆಸ್ಟ್ನಲ್ಲಿ ಸ್ಥಳೀಯರಿಗೆ ಕಾಡಾನೆ ಮೃತದೇಹ ಕಂಡುಬಂದಿದ್ದು, ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕಾದಾಟದಲ್ಲಿ ಸಾವು ಶಂಕೆ
ಮೃತ ಆನೆ ಹಾಗೂ ಬೇರೆ ಗಂಡು ಕಾಡಾನೆಗಳ ನಡುವೆ ಕಾದಾಟ ನಡೆದು ಇದರಿಂದ ತೀವ್ರ ರಕ್ತಸ್ರಾವಗೊಂಡು ಆನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು ಕಂಡುಬಂದಿದೆ. ಅರಣ್ಯ ಭಾಗದ ಬೇರೆ ಕಡೆಯಲ್ಲಿ ಕಾದಾಟ ನಡೆದಿದ್ದು, ಇಲ್ಲಿ ಬಂದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್. ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಭೇಟಿ ನೀಡಿದ್ದಾರೆ. ಸುಳ್ಯ ಪಶುವೈದ್ಯಾಧಿಕಾರಿ ಡಾ| ನಿತಿನ್ ಪ್ರಭು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ರಾತ್ರಿಯಾಗಿರುವ ಹಿನ್ನೆಲೆಯಲ್ಲಿ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ, ಇನ್ನಿತರ ಕಾರ್ಯಗಳನ್ನು ಜ.27ರಂದು ನಡೆಸಲಾಗುವುದು ಎಂದು ಅರಣ್ಯಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.