- ಅಕ್ಟೋಬರ್ 17ಕ್ಕೆ ಚುನಾವಣೆ, 19ಕ್ಕೆ ಮತ ಎಣಿಕೆ
- ಕಾಂಗ್ರೆಸ್ ಪಕ್ಷದಲ್ಲಿ ಈಗ ಹೊಸ ರಾಜಕೀಯ ದಾಳ?
NAMMUR EXPRESS NEWS
ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಹೊಸ ಅಧ್ಯಕ್ಷರ ಚುನಾವಣೆ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ. ಯಾರು ನೂತನ ಅಧ್ಯಕ್ಷರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಭೆಗೆ ವರ್ಚುವಲ್ ಆಗಿ ಭಾಗವಹಿಸಿದ್ದಾರೆ. ಶುಕ್ರವಾರ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ದಿಢೀರ್ ರಾಜೀನಾಮೆ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರು ಬರೆದ ಪತ್ರದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.
ಚುನಾವಣೆಗೆ ಅಧಿಸೂಚನೆ ಸೆಪ್ಟೆಂಬರ್ 22, 2022 ರಂದು ಹೊರಡಿಸಲಿದ್ದು,ಸೆಪ್ಟೆಂಬರ್ 24ರಂದು ನಾಮ ನಿರ್ದೇಶನ ಪ್ರಾರಂಭವಾಗಲಿದೆ. ನಾಮನಿರ್ದೇಶನಕ್ಕೆ ಕೊನೆಯ ದಿನ ಸೆಪ್ಟೆಂಬರ್ 30 ಆಗಿದ್ದು ಅಕ್ಟೋಬರ್ 17ಕ್ಕೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 19ಕ್ಕೆ ಮತ ಎಣಿಕೆ ನಡೆಯಲಿದೆ.
ಈ ವರ್ಷ ಆಗಸ್ಟ್ 21 ರಿಂದ ಸೆಪ್ಟೆಂಬರ್ 20 ರ ನಡುವೆ ಹೊಸ ಪಕ್ಷದ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ಕಳೆದ ವರ್ಷ ಅಕ್ಟೋಬರ್ನಲ್ಲಿ ಘೋಷಿಸಿತ್ತು. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗುವುದಿಲ್ಲ ಎಂದು ತಮ್ಮ ನಿಲುವಿನಲ್ಲಿ ಪಟ್ಟು ಹಿಡಿದಿದ್ದಾರೆ ಎಂದು ಪಕ್ಷದ ಕೆಲವು ಮೂಲಗಳು ಹೇಳಿವೆ,
2019ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಸತತ ಎರಡನೇ ಸೋಲು ಅನುಭವಿಸಿದ ನಂತರ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.