ಡಿಗ್ರಿ, ಮಾಸ್ಟರ್ ಡಿಗ್ರಿ ನಿಯಮ ಭಾರೀ ಬದಲಾವಣೆ!
– ಇನ್ನು ವರ್ಷಕ್ಕೆ 2 ಬಾರಿ ಕಾಲೇಜಿಗೆ ಪ್ರವೇಶ ಅವಕಾಶ
– ವಿದೇಶಗಳಲ್ಲಿನ ವ್ಯವಸ್ಥೆ ಭಾರತದಲ್ಲೂ ಆರಂಭ
– ಜುಲೈನಲ್ಲಿ ಮೊದಲ, ಜನವರಿಯಲಿ 2ನೇ ಸಲ ಪ್ರವೇಶ
NAMMUR EXPRESS NEWS
ನವ ದೆಹಲಿ : ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈಗ ವಿದೇಶಿ ವಿವಿಗಳ ರೀತಿ ವರ್ಷಕ್ಕೆ 2 ಬಾರಿ ಪ್ರವೇಶವನ್ನು ನೀಡಲು ಅನುಮತಿಸಲಾಗಿದೆ.
ಅಂದರೆ ವರ್ಷಕ್ಕೆ 2 ಪ್ರವೇಶ ಪ್ರಕ್ರಿಯೆಗಳು ಇರಲಿವೆ. ಜುಲೈ-ಆಗಸ್ಟ್ನಲ್ಲಿ ಮೊದಲ ಅಡ್ಮಿಷನ್ ನಡೆಯಲಿದೆ ಮತ್ತು ಜನವರಿ-ಫೆಬ್ರವರಿಯಲ್ಲಿ 2ನೇ ಹಂತದ ಪ್ರವೇಶ ಪ್ರಕ್ರಿಯೆ ನಡೆಯಲಿದೆ. 2024-25ನೇ ಶೈಕ್ಷಣಿಕ ವರ್ಷದಿಂದ, ಅರ್ಥಾತ್ ಇದೇ ವರ್ಷದಿಂದ ಇದು ಆರಂಭವಾಗಲಿದೆ. ಭಾರತೀಯ ವಿವಿಗಳು ವರ್ಷಕ್ಕೆ 2 ಬಾರಿ ಪ್ರವೇಶವನ್ನು ನೀಡಿದರೆ, ಮಂಡಳಿಯ ಫಲಿತಾಂಶಗಳ ಪ್ರಕಟಣೆಯಲ್ಲಿ ವಿಳಂಬ, ಆರೋಗ್ಯ ಸಮಸ್ಯೆಗಳು ಅಥವಾ ವೈಯಕ್ತಿಕ ಕಾರಣಗಳಿಂದ ಜುಲೈ-ಆಗಸ್ಟ್ ನಲ್ಲಿ ಪ್ರವೇಶ ಪಡೆಯಲು ಆಗದ ಅನೇಕ ವಿದ್ಯಾರ್ಥಿಗಳಿಗೆ ನೆರವಾಗಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ದ್ವೈವಾರ್ಷಿಕ ವಿಶ್ವವಿದ್ಯಾನಿಲಯ ಪ್ರವೇಶಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ. ಏಕೆಂದರೆ ಅವರು ಪ್ರಸ್ತುತ ‘ಚಕ್ರ’ದಲ್ಲಿ ಪ್ರವೇಶವನ್ನು ಕಳೆದುಕೊಂಡರೆ, ಪ್ರವೇಶ ಪಡೆಯಲು ಮತ್ತೆ 1 ಪೂರ್ಣ ವರ್ಷ ಕಾಯಬೇಕಾಗಿಲ್ಲ. ದ್ವೈವಾರ್ಷಿಕ ಪ್ರವೇಶದೊಂದಿಗೆ, ಉದ್ಯಮಗಳು ತಮ್ಮ ಕ್ಯಾಂಪಸ್ ನೇಮಕಾತಿಯನ್ನು ವರ್ಷಕ್ಕೆ 2 ಬಾರಿ ಮಾಡಬಹುದು. ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಕಂಪನಿಗಳಿಗೂ ಇದರಿಂದ ನೆರವಾಗಲಿದೆ.
‘ವಿಶ್ವದಾದ್ಯಂತ ವಿಶ್ವವಿದ್ಯಾನಿಲಯಗಳು ಈಗಾಗಲೇ ದ್ವೈವಾರ್ಷಿಕ ಪ್ರವೇಶ ವ್ಯವಸ್ಥೆಯನ್ನು ಅನುಸರಿಸುತ್ತವೆ. ಭಾರತೀಯ ವಿವಿಗಳೂ ಅದನ್ನು ಅಳವಡಿಸಿಕೊಳ್ಳುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನಮ್ಮ ವಿದ್ಯಾರ್ಥಿಗಳಿಗೆ ನೆರವಾಗಲಿದೆ.
ಕಡ್ಡಾಯವಲ್ಲ: ವಿಶ್ವವಿದ್ಯಾನಿಲಯಗಳಿಗೆ ದ್ವೈವಾರ್ಷಿಕ ಪ್ರವೇಶ ವ್ಯವಸ್ಥೆ ಅಳವಡಿಸಿಕೊಳ್ಳುವುದು ಕಡ್ಡಾಯವಲ್ಲ. ಅಗತ್ಯವಿರುವ ಮೂಲಸೌಕರ್ಯ ಮತ್ತು ಬೋಧಕರು ಇದ್ದಲ್ಲಿ ಅವಕಾಶವನ್ನು ಬಳಸಿಕೊಳ್ಳಬಹುದು. ಇನ್ನು ಅಳವಡಿಸಿಕೊಳ್ಳಲು ಬಯಸುವ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಗಳ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಏನು ಅನುಕೂಲ?
– ಜುಲೈನಲ್ಲಿ ಕಾಲೇಜಿಗೆ ಸೇರಲು ಆಗದೆ ಇದ್ದರೆ ಜನವರಿಯಲ್ಲಿ ಸೇರಬಹುದು
– ಫಲಿತಾಂಶ ವಿಳಂಬ, ಅನಾರೋಗ್ಯ ಇನ್ನಿತರ ಸಮಸ್ಯೆಗಳಾದಲ್ಲಿ ಅನುಕೂಲ
– ಕಂಪನಿಗಳು ವಿವಿಗಳಲ್ಲಿ ವರ್ಷಕ್ಕೆ 2 ಬಾರಿ ಕ್ಯಾಂಪಸ್ ಸಂದರ್ಶನ ಮಾಡಬಹುದು
– ಅಂ.ರಾ.ಮಟ್ಟದಲ್ಲಿ ಸ್ಪರ್ಧಿಸಲು ಭಾರತೀಯ ವಿದ್ಯಾರ್ಥಿಗಳಿಗೆ ಇದರಿಂದ ಅವಕಾಶ
– ಇದು ಕಡ್ಡಾಯವಲ್ಲ, ವಿವಿಗಳು ಅನುಕೂಲವಿದ್ದರೆ ಈ ವ್ಯವಸ್ಥೆ ಜಾರಿಗೆ ತರಬಹುದು