ಸರ್ಕಾರಿ ನೌಕರರ ಸಂಘದ ಚುನಾವಣೆಗೆ ರಂಗು!
* ಮತದಾರರ ಪಟ್ಟಿಯನ್ನೇ ಪ್ರಕಟಿಸದೇ ಚುನಾವಣೆ?
* ಪುನಃ ಮತದಾರರ ಪಟ್ಟಿ ತಯಾರಿಸಲು ಒತ್ತಾಯ!
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ರಂಗು ಬಂದಿದೆ. ಹಾಲಿ ಅಧ್ಯಕ್ಷ ಷಡಾಕ್ಷರಿ ಗುಂಪಿನ ವಿರುದ್ಧ ಇದೀಗ ಮತ್ತೊಂದು ತಂಡ ಸಜ್ಜಾಗಿದೆ. ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಹೆಸರಿನಲ್ಲಿ ಸ್ಪರ್ಧೆಗೆ ಇಳಿಯಲಿದೆ.
ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಸಂಘದ ಮಾಜಿ ಗೌರವಾಧ್ಯಕ್ಷ ಆರ್. ಶಿವರುದ್ರಯ್ಯ,ಪ್ರಾಥಮಿಕ ಶಿಕ್ಷಕರ ಸಂಘದ ನಾಗೇಶ್, ಚಂದ್ರಶೇಖರ್ ನುಗ್ಗಲಿ, ಪಿಯು ಶಿಕ್ಷಕರ ಸಂಘದ ನಿಂಗೇಗೌಡ, ಹೈಸ್ಕೂಲ್ ಶಿಕ್ಷಕರ ಸಂಘದ ಮಂಜುನಾಥ್ ಸೇರಿ ಹತ್ತಕ್ಕೂ ಹೆಚ್ಚು ಇಲಾಖೆಗಳ ನೌಕರರ ಸಂಘಗಳ ಪದಾಧಿಕಾರಿಗಳು ಒಂದಾಗಿದ್ದಾರೆ. ಮತದಾರರ ಪಟ್ಟಿಯನ್ನೇ ಪ್ರಕಟಿಸದೇ ಚುನಾವಣೆಗೆ ಮುಂದಾದ ಬಗ್ಗೆ ಗುಲ್ಬರ್ಗಾ ಹೈಕೋರ್ಟ್ ಪೀಠದಲ್ಲಿ ಹೊರ ಬಂದಿರುವ ತೀರ್ಪು ಇದೀಗ ಮಹತ್ವ ಪಡೆದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ಅರ್ಹರು ಸಹ ಚುನಾವಣೆಗೆ ಸ್ಪರ್ಧಿಸಬಹುದೆಂದು ತೀರ್ಪು ನೀಡಲಾಗಿದೆ.
ಪುನಃ ಮತದಾರರ ಪಟ್ಟಿ ತಯಾರಿಸಲು ಒತ್ತಾಯ!
ಕಂದಾಯ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಅವರನ್ನು ಅಧ್ಯಕ್ಷ ಸ್ಥಾನಕ್ಕೂ, ಮಾಜಿ ಗೌರವಾಧ್ಯಕ್ಷ ಆರ್. ಶಿವರುದ್ರಯ್ಯ ಅವರನ್ನು ಖಜಾಂಚಿ ಸ್ಥಾನಕ್ಕೂ ಅಭ್ಯರ್ಥಿಗಳಾಗಿ ಘೋಷಣೆ ಮಾಡಿದೆ. ಚುನಾವಣೆಗೆ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಘೋಷಣೆ ಮಾಡಿ ಹಾಲಿ ತಂಡಕ್ಕೆ ಸಡ್ಡು ಹೊಡೆದಿದ್ದಾರೆ. ಮತದಾರರ ಪಟ್ಟಿ ಇನ್ನೂ ಜಿಲ್ಲಾ ಘಟಕಗಳಿಗೆ ತಲುಪಿಲ್ಲ, ಕರಡು ಪಟ್ಟಿಯನ್ನು ಪ್ರಕಟಿಸಲಿಲ್ಲ, ಆದ್ದರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಆಗಿಲ್ಲ. ನಮ್ಮಂತಹ ಅನೇಕ ಅರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಆಡಳಿತಾಧಿಕಾರಿ ನೇತೃತ್ವದಲ್ಲಿ ಮತ್ತೆ ಹೊಸದಾಗಿ ಮತದಾರರ ಪಟ್ಟಿ ತಯಾರಿಸಿ, ಚುನಾವಣಾ ಪ್ರಕ್ರಿಯೆ ನಡೆಸಬೇಕೆಂದು ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.