ಗೌರಿ ಹಬ್ಬದ ಸಡಗರ… ಸಂಭ್ರಮ..!
– ಹೆಣ್ಣಿನ ಸೌಭಾಗ್ಯದ ಪವಿತ್ರ ಹಬ್ಬ ಸ್ವರ್ಣಗೌರಿ ಹಬ್ಬ
– ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು
NAMMUR EXPRESS NEWS
ಹೆಣ್ಣು ತನ್ನ ಸೌಮಾಂಗಲ್ಯಕ್ಕಾಗಿ ಮಾಡುವ ವಿವಿಧ ಪೂಜೆ- ವ್ರತಗಳಲ್ಲಿ ಸ್ವರ್ಣಗೌರಿ ವ್ರತ ಪ್ರಮುಖವಾದದ್ದು. ಈ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಹೊಸದಾಗಿ ಮದುವೆಯಾದವರಿಗೆ ಈ ಹಬ್ಬ ಪವಿತ್ರವಾದುದು. ಇನ್ನು ಪ್ರತಿ ಮನೆಯಲ್ಲೂ ತವರಿನ ಬಾಗಿನ ಕೊಡುವುದು ವಾಡಿಕೆ ಇದೆ.
ಭಾದ್ರಪದ ಮಾಸದ ತದಿಗೆಯಂದು ಸ್ವರ್ಣಗೌರಿ ವ್ರತವನ್ನು ಆಚರಿಸಲಾಗುತ್ತದೆ. ಆಷಾಢಮಾಸದ ಮಧ್ಯದಲ್ಲಿ ಉತ್ತರಾಯಣ ಕಾಲ ಮುಗಿದು ದಕ್ಷಿಣಾಯನ ಆರಂಭವಾಗುತ್ತಿದ್ದಂತೆ ವ್ರತಗಳು ಆರಂಭವಾಗುತ್ತವೆ. ಜ್ಯೋತಿರ್ಭೀಮೇಶ್ವರ ವ್ರತದಿಂದ ಆರಂಭವಾಗಿ ಶ್ರಾವಣಮಾಸದಲ್ಲಿ ಮಂಗಳಗೌರಿ, ವರಮಹಾಲಕ್ಷ್ಮಿ ವ್ರತಗಳ ನಂತರ ಬರುವುದೇ ಭಾದ್ರಪದ ಮಾಸದ ತದಿಗೆ. ಮಹಾಗೌರಿಯನ್ನು ಪೂಜಿಸುವ ಸ್ವರ್ಣಗೌರಿ ವ್ರತವು ಸುಮಂಗಲಿಯರ ಪ್ರಮುಖ ಹಬ್ಬ.
ಸ್ವರ್ಣಗೌರಿಯನ್ನು ವ್ರತ ನಿಯಮದಂತೆ ಪೂಜಿಸುವ ಮುತ್ತೈದೆಯರಿಗೆ ದೀರ್ಘ ಸೌಮಾಂಗಲ್ಯ ಪ್ರಪ್ಿಯಾಗಿ ಸಕಲ ಭೋಗ-ಭಾಗ್ಯಗಳು ದೊರೆಯುತ್ತವೆ ಎಂದು ಶಾಸ್ತ್ರಗ್ರಂಥಗಳು ಉಲ್ಲೇಖಿಸಿವೆ. ಶಿವ-ಪಾರ್ವತಿಯರ ಪುತ್ರಶ್ರೇಷ್ಠನಾದ ಷಣ್ಮುಖನು ಜಗದೀಶ್ವರನಲ್ಲಿ ಭೂಲೋಕದ ಮಾನವರ ಸಕಲ ಇಷ್ಟಾರ್ಥಗಳೆಲ್ಲವನ್ನೂ ಪೂರೈಸುವ ಶ್ರೇಷ್ಠ ವ್ರತ ಯಾವುದು ಎಂದು ಕೇಳಿದಾಗ ಸಾಕ್ಷಾತ್ ಶಿವನೇ ಹೇಳಿದ ಶ್ರೇಷ್ಠ ವ್ರತವೇ ಸ್ವರ್ಣಗೌರಿ ವ್ರತ.
ಬಾಗಿನ ಅರ್ಪಣೆ: ಗೌರಿ ಹಬ್ಬದ ಪ್ರಮುಖವಾದ ಭಾಗ ಸುಮಂಗಲಿಯರಿಗೆ ಬಾಗಿನ ನೀಡುವುದು. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಎಂಬ ಮಾತಿನಂತೆ ಪ್ರತಿಯೋರ್ವ ಸ್ತ್ರೀ ಕೂಡಾ ಶಕ್ತಿಯ ಪ್ರತಿರೂಪ ಎಂಬುದರ ಪ್ರತೀಕವಾಗಿ ಸ್ವರ್ಣಗೌರಿ ವ್ರತದಲ್ಲಿ 16 ಜನ ಮುತ್ತೈದೆಯರಿಗೆ ಬಾಗಿನ ಸಮರ್ಪಿಸಬೇಕು. ಬಾಗಿನ ಸಮರ್ಪಣೆಯ ಹೊರತು ವ್ರತ ಸಂಪೂರ್ಣವಾಗುವುದಿಲ್ಲ. ಬಾಗಿನವನ್ನು ಮಾಡಿರುವ ನೀಡಬೇಕೆಂಬ ಬಿದಿರಿನಿಂದ ಮೊರದಲ್ಲಿಯೇ ನಿಯಮವಿದೆ. ಬಾಗಿನವನ್ನು ತೆರೆದು ನೀಡಬಾರದು, ಮುಚ್ಚಿ ಕೊಡುವುದು ಪದ್ಧತಿ. ಮುಚ್ಚಿದ ಬಾಗಿನ ಕೊಟ್ಟು ಮುತ್ತೈದೆಯಾಗಿರು ಎಂದು ಬಾಗಿನ ಹರಸುತ್ತಾರೆ. ಪಡೆದವರು ಒಂದು ಮೊರದಲ್ಲಿ ಅಕ್ಕಿ, ಬೆಲ್ಲ, ಬೇಳೆ, ಕುಪ್ಪಸ, ಬಳೆ, ಕನ್ನಡಿ, ಕಾಲುಂಗುರ ಇತ್ಯಾದಿ ಶುಭಕಾರಕ ವಸ್ತುಗಳನ್ನು ಇಟ್ಟು ಮತ್ತೊಂದು ಮೊರವನ್ನು ಮುಚ್ಚಿ ಮುತ್ತೈದೆಯರ ಉಡಿ ತುಂಬಿ ಆರತಿ ಬೆಳಗಿ ಅವರ ಮನಸ್ಸಂತೋಷ ಪಡಿಸಬೇಕು. ಮುತ್ತೈದೆಯರು ಸಂತೋಷಪಟ್ಟರೆ ಬಾಗಿನ ನೀಡಿದವರು ಅಖಂಡ ಸೌಭಾಗ್ಯವತಿಯಾಗುತ್ತಾರೆ. ಆ ಮೂಲಕ ವ್ರತದ ಫಲ ಸಂಪೂರ್ಣವಾಗಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಎಲ್ಲೆಡೆ ಗೌರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕೆಲವೆಡೆ ಗುರುವಾರವೇ ಆಚರಣೆ ಮಾಡಲಾಗಿದೆ.
ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು