Categories
ರಾಜ್ಯ ಹಬ್ಬಗಳು

ಹನುಮ ಹನುಮ.. ಹನುಮನಿಗೆ ಎಲ್ಲೆಡೆ ಪೂಜೆ!

ಹನುಮ ಹನುಮ.. ಹನುಮನಿಗೆ ಎಲ್ಲೆಡೆ ಪೂಜೆ!
– ರಾಮನ ಬಂಟನಿಗೆ ವಿಶೇಷ ಅಲಂಕಾರ: ಹನುಮಾನ್ ಜೈ
– ಸಮಸ್ತ ಜನತೆಗೆ ಹನುಮ ಜಯಂತಿ ಶುಭಾಶಯಗಳು

ರಾಮ ಮತ್ತು ಸೀತೆಯರು ವನವಾಸದ ಸಂದರ್ಭದಲ್ಲಿ ಪರಸ್ಪರ ಅಗಲಿದ್ದು, ಅವರು ಮರಳಿ ಒಂದಾಗುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವನು ವಾನರ ಸೈನ್ಯದ ಮುಖ್ಯಸ್ಥ ಹನುಮಂತ. ರಾಮನ ಚೂಡಾಮಣಿಯನ್ನು ಸೀತೆಗೆ ತಂದುಕೊಡುವ ಮೂಲಕ ಸೀತೆಯು ರಾಮನು ಬಂದು ತನ್ನನ್ನು ಕರೆದೊಯ್ಯುತ್ತಾನೆ ಎನ್ನುವ ಭರವಸೆಯೊಂದಿಗೆ ನಿರಾಳವಾಗಿ, ನೆಮ್ಮದಿಯುತವಾಗಿ ಅಶೋಕವನದಲ್ಲಿ ದಿನಗಳನ್ನು ಕಳೆಯುವಂತೆ ಮಾಡಿದನು. ಉತ್ತರ ಭಾರತದಿಂದ ಲಂಕದ ನಡುವೆ ತನ್ನ ಸೇನೆಯ ಮೂಲಕ ರಾಮಸೇತುವನ್ನು ನಿರ್ಮಿಸಿ ಸೀತೆಯು ಸುರಕ್ಷಿತವಾಗಿ ರಾಮನೊಂದಿಗೆ ಮರಳಿ ಹಿಂತಿರುಗುವಂತೆ ಮಾಡುವಲ್ಲಿ ಈತನ ಪಾತ್ರ ಹಿರಿದಾದುದು. ಸಂಜೀವಿನಿ ಪರ್ವತವನ್ನು ತನ್ನ ಅಂಗೈಯಲ್ಲಿ ಎತ್ತಿ ಹಿಡಿದು ತಂದು ಯುದ್ಧದ ಸಮಯದಲ್ಲಿ ಲಕ್ಷ್ಮಣನ ಪ್ರಾಣವನ್ನು ಉಳಿಸಿದ ಮಹಾನುಭಾವ.

ಅಷ್ಟು ಗಟ್ಟಿಮುಟ್ಟಾದ ದೇಹದಾರ್ಢ್ಯವನ್ನು ಹೊಂದಿ, ದೈವತ್ವಕ್ಕೇರಿದರೂ ಸಹ ಬಾಲ್ಯದಲ್ಲಿ ಕೆಂಪಾಗಿ ಸುಂದರವಾಗಿ ಕಾಣುತ್ತಿದ್ದ ಸೂರ್ಯನನ್ನು ಹಣ್ಣೆಂದು ಸವಿಯಲು ಹೋಗಿ, ಮುಖವನ್ನು ಸುಟ್ಟುಕೊಂಡ ತುಂಟ ಬಾಲಕನನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಮಣ್ಣಿನ ಪ್ರದೇಶವಾದ ಹಂಪಿಯ ಸಮೀಪದಲ್ಲಿರುವ ಕಿಷ್ಕಿಂದೆಯಲ್ಲಿ ಅಂಜನಾದೇವಿಯ ಗರ್ಭದಲ್ಲಿ ಹನುಮನ ಜನನವಾಗಿರುವುದು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಸಂಗತಿಯಾಗಿದೆ.

“ಎಲ್ಲಿ ರಾಮನೋ ಅಲ್ಲಿ ಹನುಮನು ಹನುಮ ಎಂದರೆ ರಾಮಚಂದ್ರನೋ“ಎಂದು ದಾಸರು, ಕವಿಗಳು ಹಾಡಿ ಹೊಗಳುವಷ್ಟರ ಮಟ್ಟಿಗೆ ರಾಮದೂತ ಎನಿಸಿಕೊಂಡ ಹನುಮಂತನು, ಭಕ್ತ ಎಂದರೆ ಆಂಜನೇಯನಂತಿರಬೇಕು ಎಂದು ಕರೆಸಿಕೊಂಡು ಜನರಿಗೆ ಭಕ್ತಿಯ ಮಾರ್ಗವನ್ನು ತೋರಿದನು. ರಾಮಬಾಣದ ತೀಕ್ಷ್ಣತೆಗಿಂತ ರಾಮನಾಮವು ಅತ್ಯಂತ ಶಕ್ತಿಶಾಲಿ ಮತ್ತು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಜಗತ್ತಿಗೆ ಸಾರಿದವನು. ಶಕ್ತಿಗೆ ಹೆಸರಾದ ಹನುಮನ ಬಲವು ಎಲ್ಲರಲ್ಲೂ ಬೆರೆಯಲಿ. ಆದರೆ ಆ ಶಕ್ತಿ ಮತ್ತು ಸಾಮರ್ಥ್ಯ ಒಳ್ಳೆಯ ಉದ್ದೇಶಗಳಿಗೆ ಉಪಯೋಗವಾಗುವಂತಾಗಲಿ. ಎಲ್ಲೆಡೆ ಹನುಮ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದು ಹನುಮ ದೇವಾಲಯಗಳು ಸಿಂಗಾರಗೊಂಡಿವೆ.

ಹನುಮ ಜಯಂತಿಯ ಶುಭಾಶಯಗಳು

Categories
ಮಾಹಿತಿ ಸುದ್ದಿ ರಾಜ್ಯ ಹಬ್ಬಗಳು

ಅಹಿಂಸೆ, ತ್ಯಾಗದ ಪ್ರತೀಕ ಭಗವಾನ್ ಮಹಾವೀರ

ಅಹಿಂಸೆ, ತ್ಯಾಗದ ಪ್ರತೀಕ ಭಗವಾನ್ ಮಹಾವೀರ
– ಮಹಾವೀರ ಜಯಂತಿಯಂದು ಶಾಂತಿ ಸಂದೇಶ ಸಾರೋಣ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರ ಜಗತ್ತಿಗೆ ಅಹಿಂಸೆ ಮತ್ತು ತ್ಯಾಗದ ಮಹತ್ವವನ್ನು ಸಾರುವ ಮೂಲಕ ದೈವತ್ವಕ್ಕೇರಿದವರು. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ. ಆರನೇ ಶತಮಾನದಲ್ಲಿ ಬಿಹಾರದ ಕುಂಡಲಗ್ರಾಮದಲ್ಲಿ ರಾಜಮನೆತನದ ಸಿದ್ಧಾರ್ಥ ಮತ್ತು ತ್ರಿಶಾಲಾದೇವಿಯ ಮಗನಾಗಿ ಜನಿಸಿದ ಮಹಾವೀರ, ತನ್ನ 30ನೇ ವಯಸ್ಸಿನಲ್ಲಿ ಅಣ್ಣನಾದ ಭರತನ ವಿರುದ್ಧ ಮೂರು ಯುದ್ಧಗಳಲ್ಲಿ ಗೆಲುವು ಸಾಧಿಸಿದರೂ, ರಾಜ್ಯಲಕ್ಷ್ಮೀಯ ಚಂಚಲತೆಯನ್ನು ಅರಿತು, ರಾಜ ವೈಭೋಗವನ್ನು ತ್ಯಜಿಸಿ, ಎಲ್ಲವನ್ನು ಸಹೋದರ ಭರತನಿಗೆ ಬಿಟ್ಟುಕೊಟ್ಟು ದಿಗಂಬರನಾಗಿ ಕಾಡಿನತ್ತ ತೆರಳಿ ಬಾಹುಬಲಿ ಎನಿಸಿಕೊಂಡ.

12 ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿ, ಕೈವಲ್ಯ ಜ್ಞಾನವನ್ನು ಪಡೆದುಕೊಂಡ ಪುಣ್ಯಪುರುಷ.ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಜೈನ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ತನ್ನ ಕೈವಲ್ಯ ಜ್ಞಾನದ ಮೂಲಕ ಅಹಿಂಸೆ(ಕಾಯ, ವಾಚ ಮತ್ತು ಮನಸ್ಸಿನಿಂದ ಯಾವುದೇ ಜೀವಿಗಳಿಗೆ ಹಿಂಸೆ ಮಾಡದಿರುವುದು) ಸತ್ಯ(ಸತ್ಯವನ್ನು ಮಾತನಾಡುವುದು), ಅಸ್ತೇಯ(ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ(ಇಂದ್ರಿಯ ನಿಗ್ರಹ) ಮತ್ತು ಅಪರಿಗ್ರಹ(ಭೌತಿಕ ವಸ್ತುಗಳ ಮೇಲೆ ಆಸೆ/ಸಂಗ್ರಹಣೆ ಇಲ್ಲದಿರುವುದು)ಎನ್ನುವ ಮೂರು ಮುಖ್ಯ ಅಂಶಗಳನ್ನು ಬೋಧಿಸಿದರು.

ಬಿಹಾರದ ಪಾವಪುರಿಯಲ್ಲಿ ತನ್ನ 72ನೇ ವಯಸ್ಸಿಗೆ ದೀಪಾವಳಿಯ ದಿನದಂದು ಮೋಕ್ಷವನ್ನು ಪಡೆದರು. ಈತನ ಅನುಯಾಯಿಗಳನ್ನು ದಿಗಂಬರರು ಎಂದು ಕರೆಯುತ್ತಾರೆ. ಇವರ ಅನುಯಾಯಿಗಳು ಆಚರಿಸುವ ನಿಯಮಗಳು ಬಹುಕಠಿಣವಾಗಿದ್ದು, ಇದರಿಂದಲೇ ಮಹಾವೀರನ ಬದುಕು ಎಷ್ಟು ಕಷ್ಟದಾಯಕವಾಗಿತ್ತು ಎನ್ನುವುದರ ಅರಿವಾಗುತ್ತದೆ.‌ ಈ ಸಂದರ್ಭದಲ್ಲಿ ಮನುಷ್ಯರಾದ ನಾವು ಮಹಾವೀರನ ಬೋಧನೆಗಳನ್ನು ಅಳವಡಿಸಿಕೊಂಡು ಜಗತ್ತಿಗೆ ಶಾಂತಿಯ ಸಂದೇಶ ಸಾರೋಣ.

Categories
ರಾಜ್ಯ ರಾಷ್ಟ್ರೀಯ ವಾರ್ತೆ ಹಬ್ಬಗಳು

ಮನುಕುಲಕ್ಕೆ ಮಾದರಿ ಶ್ರೀರಾಮ..!

ಮನುಕುಲಕ್ಕೆ ಮಾದರಿ ಶ್ರೀರಾಮ..!
– ಸಮಸ್ತ ಜನತೆಗೆ ರಾಮ ನವಮಿ ಶುಭಾಶಯಗಳು

ತ್ರೇತಾಯುಗದಲ್ಲಿ ಇಕ್ಷ್ವಾಕು ವಂಶದ ರಾಜ ದಶರಥನ ಪಟ್ಟದರಸಿ ಕೌಸಲ್ಯೆಯ ಗರ್ಭದಲ್ಲಿ ಜನಿಸಿದ ಶ್ರೀರಾಮನು ತನ್ನ ಸಾಮರ್ಥ್ಯ, ವ್ಯಕ್ತಿತ್ವ, ಉತ್ತಮ ಗುಣಗಳಿಂದಾಗಿ ‘ಪುರುಷೋತ್ತಮ’ ಎನಿಸಿಕೊಂಡು ಮನುಕುಲಕ್ಕೆ ಮಾದರಿಯಾದವನು. ರಾಜ ವೈಭೋಗವನ್ನು ತ್ಯಜಿಸಿ ತಂದೆಯ ಮಾತನ್ನು ನಡೆಸಿಕೊಡುವ ಸಲುವಾಗಿ ಪತ್ನಿ, ಸಹೋದರ ಸಹಿತನಾಗಿ ನಾರುಮಡಿಯುಟ್ಟು ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಅನುಭವಿಸಿ, ಮಗನೆಂದರೆ ಹೀಗಿರಬೇಕು ಎಂದು ಜಗತ್ತಿಗೆ ತೋರಿಸಿಕೊಟ್ಟ ‘ಪಿತೃ ವಾಕ್ಯ ಪರಿಪಾಲಕ‘.

ಹೆಣ್ಣು ಮಕ್ಕಳಿಗೆ “ನಿನ್ನ ಗಂಡನಾಗುವವನು ಹೇಗಿರಬೇಕು” ಎಂದು ಕೇಳಿದರೆ ಎಲ್ಲರಿಂದ ಬರುವ ಉತ್ತರ “ಶ್ರೀರಾಮನಚಂದ್ರನ ತರ ಇರಬೇಕು” ಎನ್ನುವುದೇ ಆಗಿದೆ.ಕಾರಣ ಸೀತೆಯನ್ನು ಹೊರತು ಪರಸ್ತ್ರೀಯರನ್ನು ತಾಯಿಯಂತೆ, ಸಹೋದರಿಯರಂತೆ ಕಂಡು ‘ಏಕಪತ್ನಿವೃತಸ್ತ‘ ಎನ್ನುವ ಹೆಸರನ್ನು ಗಳಿಸಿದ ಆದರ್ಶ ಪತಿ ಶ್ರೀರಾಮ.

ಪತ್ನಿ ಸೀತೆಯ ಮೇಲೆ ಸಂಪೂರ್ಣ ನಂಬಿಕೆಯಿದ್ದರೂ ಕೂಡ ಓರ್ವ ರಾಜನಾಗಿ ಯೋಚಿಸಿ, ರಾಜ್ಯದ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದ ಅಗಸನ ಮಾತಿಗೆ ಬೆಲೆ ಕೊಟ್ಟು ವೈದೇಹಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ, ತನ್ನ ಪತ್ನಿ ಎಂದಿಗೂ ಪತಿವೃತೆಯೇ, ಭೂಮಿತೂಕದ ಅವಳು ಯಾವಾಗಲೂ ಪವಿತ್ರಳಾಗಿಯೇ ಇರುತ್ತಾಳೆ ಎನ್ನುವ ಅಂಶವನ್ನು ಪ್ರತ್ಯಕ್ಷವಾಗಿ ಬಿಂಬಿಸಿದ್ದಷ್ಟೇ ಅಲ್ಲದೆ, ರಾಜ್ಯವನ್ನು ಆಳುವವರು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಸಂದೇಶವನ್ನು ಲೋಕಕ್ಕೆ ನೀಡಿದನು.

ಸ್ರ್ತೀಲೋಲುಪನಾದ ರಾವಣನಂತಹ ದುಷ್ಟರನ್ನು ಸಂಹರಿಸಿದ ಪರಾಕ್ರಮಿ. ಹನುಮಂತನಂತಹ ಭಕ್ತನ ಪ್ರೀತಿಗೆ ಸೋತು ಶರಣಾದ ಭಕ್ತಪ್ರಿಯ. ಶಬರಿಗೆ ಕೊನೆಗಾಲದಲ್ಲಿ ತನ್ನ ದರ್ಶನ ಭಾಗ್ಯ ಕರುಣಿಸಿ, ಸಂತೃಪ್ತ ಮರಣ ಲಭಿಸುವಂತೆ ಮಾಡುವ ಮೂಲಕ, ಮುಕ್ತಿ ನೀಡಿದವನು. ಯಾವುದೇ ತಪ್ಪು ಮಾಡದೆ ಪತಿಯ ಕೋಪಕ್ಕೆ ತುತ್ತಾಗಿ, ಶಾಪಗ್ರಸ್ತಳಾಗಿ ಕಲ್ಲಾಗಿದ್ದ ಅಹಲ್ಯೆಗೆ ಕೇವಲ ಪಾದಸ್ಪರ್ಶದಿಂದ ಶಾಪವಿಮೋಚನೆ ಮಾಡಿ, ಪತಿ ಗೌತಮ ಋಷಿಯೊಂದಿಗೆ ದಾಂಪತ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟವನು.

ಶ್ರೀರಾಮನನ್ನು ನೋಡಲು ಸರಳ ಮತ್ತು ಸುಂದರ. ಆದರೆ ಆತನ ಮಹಿಮೆ ಅಪಾರ. ಎಲ್ಲಾ ವಿಚಾರಗಳಲ್ಲೂ ಮನುಕುಲಕ್ಕೆ ಮಾದರಿಯಾಗಿರುವ ಶ್ರೀರಾಮನ ಜನ್ಮ ದಿನವಾದ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಿ, ಅವನ ಆದರ್ಶ ಗುಣಗಳನ್ನು ತಕ್ಕಮಟ್ಟಿಗೆ ಅಳವಡಿಸಿಕೊಂಡು, ನಾವು ಮುಂದಿನ ಪೀಳಿಗೆಗೆ ಮಾದರಿ ವ್ಯಕ್ತಿಗಳಾಗಿ ರೂಪುಗೊಂಡು ಸಾರ್ಥಕ ಜೀವನ ನಡೆಸೋಣ.

Categories
ರಾಜ್ಯ ರಾಷ್ಟ್ರೀಯ ವಾರ್ತೆ ಹಬ್ಬಗಳು

ರಂಗಿನ ಹಬ್ಬ ಹೋಳಿ ಸಂಭ್ರಮ!

ರಂಗಿನ ಹಬ್ಬ ಹೋಳಿ ಸಂಭ್ರಮ!
– ದೇಶದ ಎಲ್ಲೆಡೆ ಹೋಳಿ ಹಬ್ಬದ ಸಡಗರ
– ಹೋಳಿ ಜತೆಗೆ ಜಾನಪದರ ಕುಣಿತ ವಿಶೇಷ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ವಿಶೇಷ ವರದಿ: ರಚನಾ ಕಾಮತ್

ಬಣ್ಣಗಳ ಹಬ್ಬವಾದ ಹೋಳಿಯನ್ನು ಆಚರಿಸಲು ಕೂಡ ಎರಡು ರೀತಿಯ ಪೌರಾಣಿಕ ಹಿನ್ನೆಲೆ ಇದೆ. ಹೋಳಿ ಹುಣ್ಣಿಮೆಯನ್ನು ಸೋಮವಾರ ದೇಶಾದ್ಯಂತ ಸಡಗರದ ಜೊತೆಗೆ, ಪ್ರತಿಯೊಂದು ಪ್ರಾಂತ್ಯದಲ್ಲೂ ವಿಭಿನ್ನ ಶೈಲಿಯಲ್ಲಿ, ತನ್ನದೇ ಆದ ಸಂಪ್ರದಾಯದೊಂದಿಗೆ ಆಚರಿಸಲಾಗುತ್ತಿದೆ. ಎಲ್ಲೆಡೆ ಬಣ್ಣ ಎರಚಿ ಹಬ್ಬವನ್ನು ಆಚರಣೆ ಮಾಡಲಾಗಿದೆ.

ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಇದು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬರುತ್ತದೆ. ಈ ಬಾರಿ ಹೋಳಿ ಹಬ್ಬವು ಮಾರ್ಚ್ 3ರಂದು ಕಾಮದಹನ ಮತ್ತು 4ರಂದು ಬಣ್ಣಗಳೊಂದಿಗೆ ಆಚರಿಸಲಾಗುತ್ತಿದೆ.

ಹೋಳಿ ಹುಣ್ಣಿಮೆ ಎಂದರೆ ಎಲ್ಲರೂ ಒಂದಾಗಿ ಬೆರೆತು ಬಣ್ಣದ ಪುಡಿಗಳನ್ನು, ಪಿಚಕಾರಿಯ ಮೂಲಕ ಬಣ್ಣದ ನೀರನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸುವುದಷ್ಟೇ ಅಲ್ಲದೆ, ಮಾನವನ ಬದುಕಿಗೆ ಉತ್ತಮ ಸಂದೇಶವನ್ನು ಸಹ ನೀಡುತ್ತದೆ.‌ಮನುಷ್ಯನ ಜೀವನ ಕೆಟ್ಟ ಸಂಗತಿಗಳಿಂದ ಮುಕ್ತವಾಗಿ ಸದಾ ವರ್ಣಮಯವಾಗಿರಲಿ ಎನ್ನುವ ಉದ್ದೇಶವನ್ನು ಈ ಹಬ್ಬವು ಹೊಂದಿದೆ.‌ ಜೊತೆಗೆ ಇದಕ್ಕೆ ಎರಡು ಪೌರಾಣಿಕ ಹಿನ್ನೆಲೆ ಇವೆ.‌

ಹೋಳಿ ಹಬ್ಬದ ಪುರಾಣ ಏನು ಹೇಳುತ್ತೆ?

ಹಿರಣ್ಯಕಶಿಪುವಿಗೆ ಹೋಲಿಕ ಎನ್ನುವ ಸಹೋದರಿಯೊಬ್ಬಳಿದ್ದು, ಪ್ರಹ್ಲಾದನನ್ನು ಕೊಲ್ಲಲು ಆತನಿಗೆ ಸಹಾಯ ಮಾಡುತ್ತಿರುತ್ತಾಳೆ. ಹೋಲಿಕ ಬಳಿ ಒಂದು ವಸ್ತ್ರವಿದ್ದು, ಅದು ಅಗ್ನಿಯಿಂದ ರಕ್ಷಿಸುವಂತಿರುತ್ತದೆ. ಹೀಗಾಗಿ ಹೋಲಿಕ ಆ ವಸ್ತ್ರವನ್ನು ಸುತ್ತಿಕೊಂಡು ಪ್ರಹ್ಲಾದನನ್ನು ತೊಡೆಯ ಮೇಲೆ ಕೂರಿಸಿಕೊಂಡು, ಅಗ್ನಿಯಲ್ಲಿ ಕುಳಿತುಕೊಳ್ಳುತ್ತಾಳೆ. ಆಗ ವಿಷ್ಣುವು ಹೋಲಿಕಾ ಸುತ್ತಿಕೊಂಡಿದ್ದ ವಸ್ತ್ರವು ಜಾರಿ ಪ್ರಹ್ಲಾದನನ್ನು ಸುತ್ತುವರಿಯುವಂತೆ ಮಾಡುತ್ತಾನೆ.

ಇದರಿಂದಾಗಿ ಪ್ರಹ್ಲಾದನು ಅಗ್ನಿಯಿಂದ ರಕ್ಷಿಸಲ್ಪಟ್ಟು, ಹೋಲಿಕ ಅಗ್ನಿಗೆ ಆಹುತಿಯಾಗುತ್ತಾಳೆ. ಇದರ ಕುರುಹಾಗಿ ಎಲ್ಲೆಡೆ ಅಸತ್ಯ ಮತ್ತು ಅಮಂಗಳವನ್ನು ಸುಡುವ ‘ಹೋಲಿಕ ದಹನ’ವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಇದು ಭಕ್ತಿ ಮತ್ತು ನ್ಯಾಯದ ಗೆಲುವಿನ ಸಂಕೇತಗಳಾಗಿ ಮಾಡಲಾಗುತ್ತದೆ.

ರಾಜ್ಯದ ವಿವಿಧ ಭಾಗದಲ್ಲಿ ಆಚರಣೆ

ಉತ್ತರ ಕರ್ನಾಟಕ ಭಾಗದಲ್ಲಿ ಶಿವನು ಮನ್ಮಥನನ್ನು ತನ್ನ ಮೂರನೇ ಕಣ್ಣನ್ನು ತೆರೆದು ಸುಟ್ಟ ಪ್ರತಿಯಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಅಂದರೆ ಮನುಷ್ಯನಲ್ಲಿ ಅಡಗಿರುವ ಕಾಮ,ಕ್ರೋಧ, ಲೋಭ,ಮೋಹ, ಮದ ಮತ್ತು ಮತ್ಸರದಂತಹ ಗುಣಗಳನ್ನು ಸುಟ್ಟು ಭಸ್ಮ ಮಾಡಿ, ನಿಷ್ಕಲ್ಮಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎನ್ನುವುದರ ಆಧ್ಯಾತ್ಮಿಕ ಸಂಕೇತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಪದ ಹಿನ್ನೆಲೆ ಇದೆ.

ಮಲ್ಲೇಶಿ ಎನ್ನುವ ಬೇಡರ ಜನಾಂಗದ ಯುವಕನು ತನ್ನ ಅಧಿಕಾರ ಮದದಿಂದ ಕೊಬ್ಬಿ, ಜನರಿಗೆ ತೊಂದರೆ ನೀಡುತ್ತಾ ರಾತ್ರಿಯ ವೇಳೆ ತಮಟೆಯ ತಾಳಕ್ಕೆ ಕುಣಿಯುತ್ತಾ ಗಸ್ತು ತಿರುಗುತ್ತಿರುತ್ತಾನೆ. ಈ ಸಂದರ್ಭದಲ್ಲಿ ಸ್ತ್ರೀ ವ್ಯಾಮೋಹಿಯಾದ ಮಲ್ಲೇಶಿಯ ಕಣ್ಣು ದಾಸಪ್ಪ ಶೆಟ್ಟಿಯ ಮಗಳಾದ ರುದ್ರಾಂಬಿಕೆಯ ಮೇಲೆ ಬೀಳುತ್ತದೆ. ದುಷ್ಟನಾದ ಮಲ್ಲೇಶಿಯನ್ನು ರುದ್ರಾಂಬಿಕೆಯು ಸಮಾಜದ ಕಲ್ಯಾಣಕ್ಕಾಗಿ ವರಿಸಲು ಒಪ್ಪಿಕೊಳ್ಳುತ್ತಾಳೆ. ಎಂದಿನಂತೆ ಗಸ್ತು ತಿರುಗುತ್ತಿದ್ದ ತನ್ನ ಗಂಡನಾದ ಮಲ್ಲೇಶಿಯ ಮುಖದ ಮೇಲೆ ಹೋಳಿ ಹುಣ್ಣಿಮೆಯ ರಾತ್ರಿ ರುದ್ರಾಂಬಿಕೆ ಆಮ್ಲವನ್ನು ಎರಚುತ್ತಾಳೆ.

ಆಗ ಮಲ್ಲೇಶಿಗೆ ಕಣ್ಣು ಕಾಣದಂತಾಗಿ, ಕ್ರೋಧಗೊಂಡು ರುದ್ರಾಂಬಿಕೆಯನ್ನು ಅಟ್ಟಿಸಿಕೊಂಡು ಬರುತ್ತಾನೆ. ಆಗ 12 ಜನ ಸ್ಥಳೀಯರು ಮಲ್ಲೇಶಿಯನ್ನು ಹಿಡಿದು, ಕಟ್ಟಿಹಾಕಿ, ಆತನನ್ನು ಜೀವಂತವಾಗಿ ಸುಡುತ್ತಾರೆ. ಬಳಿಕ ರುದ್ರಾಂಬಿಕೆ ಚಿತೆಗೆ ಹಾರಿ ತನ್ನ ಪ್ರಾಣವನ್ನು ಬಿಡುತ್ತಾಳೆ. ಇದರ ದ್ಯೋತಕವಾಗಿ ಪ್ರತಿ ವರ್ಷ ಬೇಡರ ವೇಷ ಎನ್ನುವ ಜನಪದ ಸಂಪ್ರದಾಯವು ಆಚರಿಸಲ್ಪಡುತ್ತದೆ. ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವುದರ ಹಿಂದಿರುವ ಕಾರಣ ಕೂಡ ಇದೇ ಆಗಿರಬಹುದು.

ಹೋಳಿ ಕುಣಿತ ವಿಶೇಷ…

ಕರಾವಳಿ ಭಾಗದಲ್ಲಿ ಹೋಳಿ ಹುಣ್ಣಿಮೆಯನ್ನು ಸುಗ್ಗಿ ಹಬ್ಬವನ್ನಾಗಿ ಒಂದು ರೀತಿಯ ಜನಪದ ಶೈಲಿಯಲ್ಲಿ ಆಚರಿಸಲಾಗುತ್ತದೆ.
ಸುಗ್ಗಿ ಕುಣಿತದ ತಂಡ ಸಾಂಪ್ರದಾಯಿಕ ಉಡುಗೆಯೊಂದಿಗೆ, ತಲೆಗೆ ಬಣ್ಣದ ತುರಾಯಿಯನ್ನು ಧರಿಸಿಕೊಂಡು, ಪೇಟಗುಮಟೆ ವಾದ್ಯಗಳೊಂದಿಗೆ ಮನೆ ಮನೆಗೆ ತೆರಳಿ ಸುಗ್ಗಿಯ ಸಂಭ್ರಮವನ್ನು ಆಚರಿಸುತ್ತಾರೆ. ಮರಾಠಿ ನಾಯ್ಕ ಸಮುದಾಯವು ಇದರ ಮುಂಚೂಣಿಯಲ್ಲಿರುತ್ತದೆ.

ತಲೆಗೆ ಬಣ್ಣದ ತುರಾಯಿ ಪೇಟವನ್ನು ಕಟ್ಟಿ ಏಳು ದಿನಗಳ ಕಾಲ ಕುಣಿಯುತ್ತಾರೆ. ಇದಕ್ಕೆ ಗುಮಟೆ ಮತ್ತು ಜಾಗಟೆಯ ಸದ್ದು ಮತ್ತಷ್ಟು ಮೆರಗು ನೀಡುತ್ತದೆ. ಈ ಸಂದರ್ಭದಲ್ಲಿ ಸುಗ್ಗಿ ಕುಣಿತದ ತಂಡವು ಪ್ರತಿಯೊಂದು ಮನೆಯಿಂದ ಹಣ, ಊಟ, ತಿಂಡಿ ಮೊದಲಾದವುಗಳನ್ನು ಸ್ವೀಕರಿಸುತ್ತಾರೆ.‌ ಹೋಳಿ ಹಬ್ಬದ ದಿನ ಕರಿದೇವರಿಗೆ ಪೂಜೆ ಮಾಡಿ, ತುರಾಯಿಯನ್ನು ದೇವರಿಗೆ ಅರ್ಪಿಸುವ ಮೂಲಕ ತಮ್ಮ ಆಚರಣೆಯನ್ನು ಮುಗಿಸುತ್ತಾರೆ.

ಇನ್ನು ಮಲೆನಾಡು ಭಾಗದಲ್ಲಿ ಎಲ್ಲೆಡೆಯಂತೆ ಹಿಂದಿನ ದಿನ ಕಾಮದಹನ ಮರುದಿನ ಬೆಳಿಗ್ಗೆ ಬಣ್ಣಗಳ ಎರಚುವಿಕೆಯೊಂದಿಗೆ ಸಂಭ್ರಮದಿಂದ ಆಚರಿಸುತ್ತಾರೆ. ಬಣ್ಣಗಳ ಹಬ್ಬವಾದ ಕಾರಣ ಇದು ಮಕ್ಕಳಿಗೆ ಹೆಚ್ಚು ಮುದವನ್ನು ನೀಡುತ್ತದೆ. ಮಕ್ಕಳ ಸಂಭ್ರಮ ಕಂಡು ಹಿರಿಯರು ಕೂಡ ಆನಂದಪಡುತ್ತಾರೆ. ಪುರಾಣ, ಜನಪದ, ಆಧ್ಯಾತ್ಮ ಮತ್ತು ಬಣ್ಣಗಳ ಮಹತ್ವದ ಮಿಶ್ರಣವೇ ಹೋಳಿ ಹಬ್ಬದ ಆಚರಣೆಯಾಗಿದೆ.

Categories
jathre ತೀರ್ಥಹಳ್ಳಿ ಮಲ್ನಾಡ್ ಹಬ್ಬಗಳು

ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಸಜ್ಜು!

ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಸಜ್ಜು!
– ಫೆ.17ರಿಂದ 25ರವರೆಗೆ ಮಾರಿಕಾಂಬಾ ಅಮ್ಮನವರ ಜಾತ್ರೆ
– 2 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಸರ್ವರಿಗೂ ಸ್ವಾಗತ

ತೀರ್ಥಹಳ್ಳಿ: ಮಲೆನಾಡಿನ ಪ್ರಸಿದ್ಧ ಜಾತ್ರೆ ಹಾಗೂ ಕಾರ್ಯಕ್ರಮಗಳಲ್ಲಿ ಒಂದಾದ ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಸಿದ್ಧತೆ ಶುರುವಾಗಿದೆ.
ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಅಮ್ಮನವರ ಜಾತ್ರೋತ್ಸವ ಇದೇ ಫೆಬ್ರವರಿ 17ರಿಂದ 25ರವರೆಗೆ 9 ದಿನಗಳ ಕಾಲ ವೈಭವದಿಂದ ಜರುಗಲಿದೆ.
ದೇವಸ್ಥಾನ ಆಡಳಿತ ಸಮಿತಿ ಜಾತ್ರೆಯನ್ನು ಯಶಸ್ವಿಗೊಳಿಸಲು ಸಿದ್ಧತೆ ಆರಂಭಿಸಿದೆ. ಅಲ್ಲದೆ ಸಮಸ್ತ ಭಕ್ತವೃಂದವನ್ನು ಸ್ವಾಗತಿಸಿದೆ.

ಯಾವತ್ತು ಏನೇನು?

ಫೆಬ್ರವರಿ 17ರಂದು ಜಾತ್ರೆ ಸಾರಲಾಗುತ್ತಿದೆ. 9 ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಿತ್ಯ ಅನ್ನಸಂತರ್ಪಣೆ ಜರುಗುವುದು. ಶ್ರೀ ಅಮ್ಮನವರ ಜಾತ್ರಾ ಉತ್ಸವಕ್ಕೆ ಹೊರೆಕಾಣಿಕೆ ಸ್ವೀಕರಿಸಲಾಗುತ್ತದೆ.
ಫೆ.17ರಂದು ಮಹಾಪೂಜೆ, ಮಹಾಮಂಗಳಾರತಿ, ದೇವಿ ದರ್ಶನ, ಜಾತ್ರೆ ಸಾರುವುದು, ಫೆ.18ರಂದು ಸಂಜೆ 6ರಿಂದ ಸುಮುಖ ಸಂಗೀತ ನೃತ್ಯ ಶಾಲೆ ಮತ್ತು ಶ್ರೀ ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರಿಂದ ನೃತ್ಯ ಸಂಗಮ ನಡೆಯಲಿದೆ.
ಫೆ.19ರಂದು ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಯಕ್ಷಗಾನ ಮೇಳ ಪ್ರಸ್ತುತಪಡಿಸುವ ಕಾಲಮಿತಿ ಯಕ್ಷಗಾನ ಶ್ರೀ ಸಂಪೂರ್ಣ ದೇವಿ ಮಹಾತ್ಮಜರುಗಲಿದೆ.
ಫೆ.20ರಂದು ಕಾವ್ಯ ಸಂಗೀತ ಕಲಾಕುಂಚ ಸುಶ್ರಾವ್ಯ ಸಂಗೀತ ದೊಂದಿಗೆ ಬಣ್ಣದ ಚಿತ್ತಾರದ ಅನಾವರಣ.
ಫೆ.21ರಂದು ಮಧ್ಯಾಹ್ನ 12ಕ್ಕೆ ಚಂಡಿಕಾ ಹೋಮದ ಪೂರ್ಣಾ ಹುತಿ, ಸಂಜೆ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಲರವ, ಡ್ಯಾನ್ಸ್ ಪ್ಯಾಲೆಸ್ ಕಲಾವಿದರಿಂದ ನೃತ್ಯ ಸಂಭ್ರಮ, ಸ್ಥಳೀಯ ಗಾಯಕರಿಂದ ಸಂಗೀತ ಸುಧೆ ನಡೆಯಲಿದೆ.
ಫೆ.22ರಂದು ಖ್ಯಾತ ಗಾಯಕ ರಾಜಗುರು ಹೊಸಕೋಟೆ ಬೆಂಗಳೂರು ಮತ್ತು ಬಳಗದ ಪ್ರಸ್ತುತಿಯಲ್ಲಿ ಜಾನಪದ ಸಂಗೀತ. ಫೆ.23ರಂದು ಸಂಗೀತ ಗಾನ ಸಂಭ್ರಮ, ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಭಕ್ತಿ-ಭಾವ-ಚಿತ್ರಗೀತೆಗಳ ಸಮ್ಮಿಲನ.
ಫೆ.24ರಂದು ಜಾತ್ರಾ ವಿಶೇಷ ಪೂಜೆಗಳು, ಮಹಾಮಂಗಳಾ ರತಿ, ಎಣ್ಣೆಭಂಡಾರ ಪೂಜೆ, ಸಂಪ್ರದಾಯದಂತೆ ಗೊಂಬೆ ಪೂಜೆ, ಮೆರವಣಿಗೆ ಮೂಲಕ ದೇವಸ್ಥಾನದ ಆವರಣದಲ್ಲಿಗೊಂಬೆಯನ್ನು ಗದ್ದುಗೆಯಲ್ಲಿ ಪ್ರತಿಷ್ಟಾಪಿಸಲಾಗುವುದು.
ಫೆ.25ರಂದು ರಾಜಬೀದಿ ಉತ್ಸವದೊಂದಿಗೆ ಗೊಂಬೆ ವಿಸರ್ಜನೆ ನಡೆಯಲಿದೆ.

Categories
Uncategorized ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹಬ್ಬಗಳು

ಭೂಮಿ ಹುಣ್ಣಿಮೆ ಸಂಭ್ರಮದಲ್ಲಿ ಮಲೆನಾಡು!

ಭೂಮಿ ಹುಣ್ಣಿಮೆ ಸಂಭ್ರಮದಲ್ಲಿ ಮಲೆನಾಡು!
– ಈ ಭೂಮಿ ಹುಣ್ಣಿಮೆ ಎಲ್ಲರ ಬದುಕಲ್ಲಿ ಸಂಭ್ರಮವ ಹೊತ್ತು ತರಲಿ…
– ಭೂಮಿ ತಾಯಿ ಎಲ್ಲರ ಕಾಪಾಡಲಿ…ಮುಂಜಾನೆಯೇ ಎಲ್ಲೆಡೆ ಹಬ್ಬ

 

ವಿಶೇಷ ವರದಿ: ಪೂಜಾ ತೀರ್ಥಹಳ್ಳಿ
ಮಲೆನಾಡು ವಿಶಿಷ್ಟತೆಯನ್ನು ತನ್ನೊಡಲಲ್ಲಿ ಗರ್ಭೀಕರಿಸಿಕೊಂಡಿರುವ ನಾಡು.. ತನ್ನ ವಿಭಿನ್ನ ಸಂಸ್ಕೃತಿ,ಭಾಷಾ ಶೈಲಿ, ಜೀವನ ವಿಧಾನ, ಹೇರಳ ಪ್ರಕೃತಿ ಸಂಪತ್ತಿನಿಂದ ಸದಾ ಎಲ್ಲರನ್ನು ಸೆಳೆಯುವ ಮಲೆನಾಡಿನಲ್ಲಿ ಪ್ರತಿ ಹಬ್ಬವೂ ವಿಭಿನ್ನ ಮತ್ತು ವಿಶಿಷ್ಟ.
ಉತ್ತರ ಕರ್ನಾಟಕದ ಮಂದಿಗೆ ಇಂದು ಸೀಗೆ ಹುಣ್ಣಿಮೆಯ ಸಂಭ್ರಮವಾದರೆ ಮಲೆನಾಡ (ಕೆಲವು ತಾಲ್ಲೂಕುಗಳಿಗೆ ಸೀಮಿತ) ಮಕ್ಕಳಿಗೆ ತಮ್ಮ ಸಲುಹುವ ಭೂಮಿ ತಾಯಿಯ ಆರಾಧಿಸುವ ಸುಘಳಿಗೆ, ಭತ್ತ ಹಾಲೊಡೆಯುವ ಸಮಯದಲ್ಲಿ ಭೂಮಿ ತಾಯಿಗೆ ಬಯಕೆ ಹಾಕುವುದು ಎಂಬ ಹಿನ್ನೆಲೆಯಲ್ಲಿ ಈ ಆಚರಣೆ ಚಾಲ್ತಿಯಲ್ಲಿದೆ..
ಕಾಗೆ ಕೂಗುವ ಮುನ್ನ ಎದ್ದು ಐದು ಬಗೆಯ ಕುಡಿ ಎಲೆಗಳನ್ನ ತಂದು ಭೂಮಿ ಹುಣ್ಣಿಮೆ ಆಚರಣೆಗೆ ವಿದ್ಯುಕ್ತ ಚಾಲನೆ ನೀಡಿ.. ಹೆಸರೇ ಗೊತ್ತಿಲ್ಲದ ನೂರೆಂಟು ಬಗೆಯ ಚಿಗುರೆಲೆಗಳನ್ನು ಸಂಗ್ರಹಿಸಿ (ಕೆಲವು ಬಗೆಯ ಎಲೆಗಳನ್ನು ಹೊರತುಪಡಿಸಿ) ರಾತ್ರಿಯೆಲ್ಲಾ ಮನೆಯ ಹೆಂಗಸರು ಪಟಪಟ ಅಂತ ಭೂಮಿ ತಾಯಿಯ ಆರಾಧನೆಗೆ ಸಾಂಪ್ರಾದಾಯಿಕವಾದ ಎಲ್ಲಾ ಅಡುಗೆಗಳನ್ನು ನಿದ್ದೆಗೆಟ್ಟು ಮಾಡಿ ಭೂಮಿಗೆ ಉಣ ಬಡಿಸಿದ್ದಾರೆ.

ಹಗಲಿಡೀ ಸಂಗ್ರಹಿಸಿದ ಎಲೆಗಳಿಂದ ತಯಾರಿಸಿದ ಬೆರಕೆ ಸೊಪ್ಪಿನ ಅನ್ನ, ಅಚ್ಚಂಬಲಿ, ಅಳಿಯಂಬಲಿ, ಕೊಟ್ಟೆ ಕಡುಬು, ಇರೋ ಬರೋ ತರಕಾರಿಯೆಲ್ಲಾ ಹಾಕಿ ಮಾಡಿದ ಸಾಂಬಾರು, ಪಲ್ಯ, ಬುತ್ತಿಉಂಡೆ. ಒಂದ ಎರಡಾ ಹೀಗೆ ಬಗೆ ಬಗೆಯ ವಿಶಿಷ್ಟ ಅಡುಗೆಗಳು ರಾತ್ರಿಯಿಡಿ ತಯಾರಾಗುತ್ತವೆ. ಇನ್ನೇನು ಸಿಹಿಯಾದ ಕನಸು ಬೀಳುವ ಹೊತ್ತಿನ ಮುಂಜಾವಿನಲ್ಲಿ ಸರಿಯಾಗಿ ಬೆಳಕು ಹರಿಯದ ಬ್ರಾಹ್ಮಿ ಮುಹೂರ್ತದಲ್ಲಿ ಭೂಮಿ ತಾಯಿಯ ಪೂಜೆಗೆ ಮನೆಮಂದಿಯೆಲ್ಲಾ ತೆರಳುತ್ತಾರೆ. ಹೊಸ ಬುಟ್ಟಿಗೆ ಬೆರೆಕೆಸೊಪ್ಪಿನ ಅನ್ನ ತುಂಬಿಸಿಕೊಂಡು, ಮಾಡಿದ ಎಲ್ಲಾ ಅಡುಗೆಗಳನ್ನು ಎಡೆ ಮಾಡಿಕೊಂಡು, ಪೂಜಾ ಸಾಮಾಗ್ರಿಗಳನ್ನ ತೆಗೆದುಕೊಂಡು ಕೈಯಲ್ಲೊಂದು ದೊಂದಿ ಹಿಡಿದು ಮೊದಲೆ ನಿಗದಿಪಡಿಸಿ ತೋರಣ ಕಟ್ಟಿ ಸಿಂಗರಿಸಿದ ಗದ್ದೆಗೆ ಹೋಗಿ ಅಲ್ಲಿ ಪೂಜೆಯನ್ನು ಮಾಡಿ. ಒಂದು ಕೊಟ್ಟೆ ಕಡುಬನ್ನು ಪೂಜೆ ಮಾಡಿದ ಗದ್ದೆಗೆ ಹುಗಿಯುತ್ತಾರೆ ಅದನ್ನು ಮುಂದೆ ಭತ್ತದ ಕೊಯ್ಲು ಮುಗಿದ ಕೊನೆಯ ದಿನ ಕಿತ್ತು ಅದರಲ್ಲಿ ಸಿಹಿಖಾದ್ಯ ಮಾಡಿ ಮನೆಯವರೆಲ್ಲಾ ಹಂಚಿ ತಿನ್ನುತ್ತಾರೆ. ರಾತ್ರಿಯಿಡಿ ಮಾಡಿದ ಅಡುಗೆಗಳನ್ನು ಭೂಮಿ ತಾಯಿಗೆ ಬಡಿಸಿ. ಪ್ರಸಾದದ ರೂಪದಲ್ಲಿ ಅದನ್ನು ಅಲ್ಲಿಯೇ ತಿಂದು. ಬೆರಕೆ ಸೊಪ್ಪಿನ ಅನ್ನವನ್ನು ಬೆಳಕು ಹರಿಯುವ ಮುನ್ನವೇ ಎಲ್ಲಾ ಗದ್ದೆಗಳಿಗೂ ಬೀರುತ್ತಾ..”ಅಚ್ಚಂಬಲಿ, ಅಳಿಯಂಬಲಿ, ಬೇಲಿ ಮೇಲಿರೋ ದಾರ್ ಹೀರೆಕಾಯಿ ಊಟ ಮಾಡು ಬಾ ಭೂ ತಾಯಿ ಎಂದು ಕೂಗುತ್ತಾ” ಭೂಮಿ ತಾಯಿಗೆ ಅರ್ಪಿಸುತ್ತಾರೆ. ಮನೆಗೆ ಮರಳಿದ ಮೇಲೆ ಮತ್ತೊಮ್ಮೆ ಎಡೆ ಹಾಕಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ಭೂಮಿ ಹುಣ್ಣಿಮೆಯ ಭೂರಿ ಭೋಜನವನ್ನು ಸವಿಯುತ್ತಾರೆ. ವರ್ಷಪೂರ್ತಿ ನಮ್ಮ ಹಸಿವು ನೀಗಿಸುವ ಭೂಮಿ ತಾಯಿಗೆ ಮಲೆನಾಡಿಗರು ಕೃತಜ್ಞತೆ ಅರ್ಪಿಸುವ ಈ ವಿಧಾನ ಭೂಮಿ ಹುಣ್ಣಿಮೆ ಹೆಸರಿನಲ್ಲಿ ವಿಶಿಷ್ಟ ಆಚರಣೆಯಾಗಿ ಚಾಲ್ತಿಯಲ್ಲಿರುವುದು. ಸಮಸ್ತ ಮಲೆನಾಡ ಬಾಂಧವರಿಗೆ.
ಮಲೆನಾಡಿನಲ್ಲಿದ್ದು ಹಬ್ಬ ಮಾಡುವ ಪುಣ್ಯವಂತರಿಗೆ,ಮಲೆನಾಡಿನಿಂದ ದೂರವಾಗಿ ಎಂದೋ ಮಾಡಿದ ಹಬ್ಬದ ನೆನಪಲ್ಲೇ ದಿನ ದೂಡುವ ಮಲೆನಾಡ ಮಕ್ಕಳಿಗೆ ಮಲೆನಾಡಿಗರ ಹಬ್ಬ ಭೂಮಿ ಹುಣ್ಣಿಮೆಯ ಅನಂತ ಶುಭಾಶಯಗಳು…

ಈ ಭೂಮಿ ಹುಣ್ಣಿಮೆ ಎಲ್ಲರ ಬದುಕಲ್ಲಿ ಸಂಭ್ರಮವ ಹೊತ್ತು ತರಲಿ…


Categories
Uncategorized ಉಡುಪಿ ಕರಾವಳಿ ಚಿಕ್ಕಮಗಳೂರು ತೀರ್ಥಹಳ್ಳಿ ಮಂಗಳೂರು ಮಲ್ನಾಡ್ ಶಿವಮೊಗ್ಗ ಹಬ್ಬಗಳು ಹೊಸನಗರ

ಭೂಮಿ ಹುಣ್ಣಿಮೆ ಹಬ್ಬಕ್ಕೆ ಎಲ್ಲಡೆ ಸಿದ್ಧತೆ!

ಭೂಮಿ ಹುಣ್ಣಿಮೆ ಹಬ್ಬಕ್ಕೆ ಎಲ್ಲಡೆ ಸಿದ್ಧತೆ!
– ಭೂಮಿ ತಾಯಿಗೆ ಸೀಮಂತದ ಹಬ್ಬಕ್ಕೆ ಕ್ಷಣಗಣನೆ
– ಇಂದು ರಾತ್ರಿ ಇಡೀ ಅಡುಗೆ.. ಬೆಳಿಗ್ಗೆ ಭೂ ಪೂಜೆ

NAMMUR EXPRESS NEWS
ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಹಬ್ಬ ತುಂಬಾ ವಿಶೇಷ. ಈಗಾಗಲೇ ಭೂಮಿ ಹುಣ್ಣಿಮೆ ಹಬ್ಬಕ್ಕೆ ಎಲ್ಲಡೆ ಸಿದ್ಧತೆಯನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ಭೂಮಿ ತಾಯಿಗೆ ಸೀಮಂತ ಮಾಡುವ ಹಬ್ಬ ಎಂದೇ ಹೇಳಲಾಗುತ್ತದೆ. ಈ ಹಬ್ಬದ ಸಾಕಷ್ಟು ವಿಶೇಷ ಎಂದರೆ ನೂರಾಒಂದು ಬೆರಕೆ ಸೊಪ್ಪನ್ನು ಬೆರೆಸಿ ಪಲ್ಯ ಮಾಡುವುದೇ ತುಂಬಾ ವಿಶೇಷವಾಗಿದೆ. ಈಗಾಗಲೇ ಈ ಭೂಮಿ ಹುಣ್ಣಿಮೆ ಹಬ್ಬಕ್ಕೆ ನೂರಾಒಂದು ಕುಡಿ ಅಥವಾ ಬೆರಕೆ ಸೊಪ್ಪನ್ನು ಹುಡುಕಲು ಮಹಿಳೆಯರು ಚಿಕ್ಕ ಚಿಕ್ಕ ಮಕ್ಕಳು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ರೈತರಿಗೆ ಇದೊಂದು ವಿಶೇಷವಾದ ಹಬ್ಬ. ತನ್ನ ಜಮೀನು ಅಥವಾ ಹೊಲವನ್ನು ಉಳುಮೆ ಮಾಡಿ, ಬೀಜ ಬಿತ್ತಿ, ಬೆಳೆದು, ಕಟಾವು ಮಾಡಿ, ಭೂಮಿಯಿಂದಲೇ ತನ್ನ ಜೀವನ ನಡೆಸುವ ಪ್ರತಿಯೊಬ್ಬ ರೈತರು ವರ್ಷಕ್ಕೊಮ್ಮೆ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ತನ್ನನ್ನು ಹಾಗೂ ತನ್ನ ಕುಟುಂಬವನ್ನೂ ಸಲಹು ಎಂದು ಬೇಡಿಕೊಳ್ಳುತ್ತಾರೆ.
ಹಸಿರಾಗಿ ನಿಂತ ಭೂಮಿ ತಾಯಿಗೆ ಹಬ್ಬದ ಆಚರಣೆಯೇ ವಿಶೇಷ ಮಲೆನಾಡಿನ ಭೂಮಿ ಹುಣ್ಣಿಮೆ ಹಬ್ಬ ತುಂಬಾ ಸಡಗರ.
ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ವಸ್ತು . ಇದನ್ನು ಹಿಂದಿನಿಂದಲೂ ಕೂಡ ಇದನ್ನ ಕಾಪಾಡಿಕೊಂಡು ರೂಡಿಸಿಕೊಂಡು, ಸಿಂಗರಿಸಿ ಪೂಜೆಗೆ ಬಳಸಲಾಗುತ್ತದೆ.

– ರಾತ್ರಿ ಇಡೀ ಜಾಗರಣೆಯ ಮಾಡಿ ಅಡುಗೆ ಸಂಭ್ರಮ..!

ಭೂಮಿ ಹುಣ್ಣಿಮೆಯ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ರಾತ್ರಿ ಪೂರ್ತಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ಆ ಸಂಧರ್ಭದಲ್ಲಿ ‘ಹಚ್ಚಂಬಲಿ.. ಹಾಲಂಬಲಿ…ಬೇಲಿ ಮೇಲೆ ಇರುವ ದಾರ ಹಿರೇಕಾಯಿ ಭೂಮಿ ತಾಯಿ ಊಟ ಮಾಡೇ” ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಗುತ್ತದೆ. ಈ ಸಂಪ್ರದಾಯ ಹಿಂದಿನ ಕಾಲದಿಂದಲೂ ಬಂದಿರುವುದರಿಂದ ಎಲ್ಲಾ ಆಚರಣೆಗಿಂತ ವಿಭಿನ್ನವಾಗಿದೆ.

Categories
dasara ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹಬ್ಬಗಳು

ತೀರ್ಥಹಳ್ಳಿ ದಸರಾ: ಅದ್ದೂರಿ ಮೆರವಣಿಗೆಗೆ ಕ್ಷಣ ಗಣನೆ!

ತೀರ್ಥಹಳ್ಳಿ ದಸರಾ: ಅದ್ದೂರಿ ಮೆರವಣಿಗೆಗೆ ಕ್ಷಣ ಗಣನೆ!
– ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿ: ಸಾಧಕರಿಗೆ ಸನ್ಮಾನ
– ಇಂದು ಮಹಿಳಾ ದಸರಾ ವಿವಿಧ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
– ಬೆಳಕಿನ ಅಲಂಕಾರದಲ್ಲಿ ಸುಂದರವಾದ ತೀರ್ಥಹಳ್ಳಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾದ ಅದ್ದೂರಿ ಮೆರವಣಿಗೆಗೆ ಕ್ಷಣ ಗಣನೆ ಆರಂಭವಾಗಿದೆ. ವಿಜಯ ದಶಮಿಯಂದು ಅದ್ದೂರಿ ಮೆರವಣಿಗೆ ನಡೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಮಾದರಿ ದಸರಾವನ್ನು ಆಯೋಜನೆ ಮಾಡಲಾಗಿದ್ದು ವಿವಿಧ ಕಾರ್ಯಕ್ರಮ ನಡೆದಿದೆ.
ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿದ್ದು ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕಕಾರ್ಯಕ್ರಮ ಸೋಮವಾರ ಸಂಜೆ ಕುಶಾವತಿ ಪಾರ್ಕ್ ಅಲ್ಲಿ ಹಾಕಿರುವಅದ್ದೂರಿ ವೇದಿಕೆಯಲ್ಲಿನಡೆಯಿತು. ಇಂದು ಮಹಿಳಾ ದಸರಾ ವಿವಿಧ ಕಾರ್ಯಕ್ರಮ ನಡೆಯಲಿದೆ.
ಮೊಟ್ಟ ಮೊದಲಬಾರಿಗೆ ಈ ಬಾರಿ ದಸರಾ ಉತ್ಸವಕ್ಕೆ ವಿಶೇಷ ಮೆರಗು ನೀಡುವ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನಗಳ “ಕಲಾ ದಸರಾ” ಕುಶಾವತಿ ನೆಹರು ಪಾರ್ಕಿನಲ್ಲಿ ಆಯೋಜನೆಗೊಂಡಿದ್ದು ತೀರ್ಥಹಳ್ಳಿಯ ಅನೇಕ ಕಲಾವಿದರ ಕಲಾಕೃತಿಗಳ ಪ್ರದರ್ಶನ ನಡೆಯಿತು. ಈ ಕಲಾ ಪ್ರದರ್ಶನವನ್ನು ಬೆಂಗಳೂರಿನ ಖ್ಯಾತ ಪಿಡಿಲಿಟಿಸ್ ಮಾಲೀಕ ಅಚ್ಚುತ್ ಗೌಡ ರವರು ಉದ್ಘಾಟಿಸಿದರು. ಖ್ಯಾತ ಕ್ರಿಕೆಟಿಗ ನಿತಿನ್ ಸೇರಿ ಅನೇಕರನ್ನು ಸನ್ಮಾನಿಸಲಾಯಿತು.

ಮಹಿಳಾ ದಸರಾ ಸಂಭ್ರಮದ ರಂಗು!

ಮಹಿಳಾ ದಸರಾ“ದಿನಾಂಕ:- 30-09-2025 ರ ಮಂಗಳವಾರ ತೀರ್ಥಹಳ್ಳಿಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಮಹಿಳಾ ದಸರಾ ಆಯೋಜನೆಗೊಂಡಿದ್ದು ಈ ಕಾರ್ಯಕ್ರಮದಲ್ಲಿ ಮಹಿಳಾ ಹುಲಿನೃತ್ಯ, ಶಾಸ್ತ್ರೀಯ, ಜಾನಪದ ಮತ್ತು ಯೋಗನೃತ್ಯ ಹಾಗೂ ಪ್ಯಾಶನ್ ಶೋ ಕಾರ್ಯಕ್ರಮ ಕುಶಾವತಿ ನೆಹರು ಪಾರ್ಕಿನ ವೇದಿಕೆಯಲ್ಲಿ ನಡೆಯಲಿದೆ.
ತೀರ್ಥಹಳ್ಳಿ ಸಾಂಸ್ಕೃತಿಕ ವೈವಿಧ್ಯ: ದಿನಾಂಕ:- 01-10-2025 ರ ಬುಧವಾರ ಕುಶಾವತಿ ನೆಹರು ಪಾರ್ಕಿನ ವೇದಿಕೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಉದಯೋನ್ಮುಖ ಕಲಾವಿದರ ಶಾಸ್ತ್ರೀಯ ನೃತ್ಯ, ರೂಪಕಗಳು, ಜಾನಪದ ನೃತ್ಯ, ಸಂಗೀತ, ಕಾರ್ಯಕ್ರಮ ನಡೆಯಲಿದೆ.

ವಿಜಯದಶಮಿಯ ಸಂಪ್ರದಾಯಿಕ ದಸರಾ

“ದಿನಾಂಕ:-02-10-2025 ರ ಗುರುವಾರ ಮಧ್ಯಾಹ್ನ 2.00 ಗಂಟೆಗೆ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಿಂದ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವವು ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಕರ್ನಾಟಕದ ಸುಪ್ರಸಿದ್ದ ಜಾನಪದ ಕಲಾ ತಂಡಗಳ ಮತ್ತು ಆಕರ್ಷಕ ಸ್ಥಬ್ಧಚಿತ್ರಗಳ ಸಾಂಪ್ರದಾಯಿಕ ಭಜನಾ ನೃತ್ಯಗಳೊಂದಿಗೆ ಮೆರವಣಿಗೆಯಲ್ಲಿ ಕುಶಾವತಿಯ ನೆಹರು ಉದ್ಯಾನವನಕ್ಕೆ ತೆರಳಿ ಬನ್ನಿ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ.5.30 ಗಂಟೆಗೆ ಉಡುಪಿಯ ವಿದೂಷಿ ಡಾ| ಮಂಜರಿ ಚಂದ್ರ ಪುಷ್ಪರಾಜ್ ನಿರ್ದೇಶನದ ಸೃಷ್ಟಿನೃತ್ಯ ಕಲಾಕುಟಿರ (ರಿ) ಇವರ ಪ್ರಸ್ತುತಿಯ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸಂಪ್ರದಾಯದಂತೆ ಗೌರವಿಸುವ ಕಾರ್ಯಕ್ರಮವಿರುತ್ತದೆ.

ಜಾನಪದ ಹುಲಿ ಕುಣಿತ ಹುಲಿ ಹೆಜ್ಜೆ

ಮಲೆನಾಡಿನ ಸಾಂಪ್ರದಾಯಿಕ ಜಾನಪದ ಹುಲಿ ಕುಣಿತ ಹುಲಿಹೆಜ್ಜೆ“ಸಂಜೆ 8.00 ಗಂಟೆಗೆ ಸರಿಯಾಗಿ ಕುಶಾವತಿಯ ದಸರಾ ವೇದಿಕೆಯಲ್ಲಿ ಮಲೆನಾಡಿನ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರದ ಅಕರ್ಷಕ ಹುಲಿಕುಣಿತದ ಸ್ಪರ್ಧೆ ಹುಲಿಹೆಜ್ಜೆ ನಡೆಯಲಿದೆ.
ದಸರಾ ಸಮಿತಿಯ ಸಂಚಾಲಕರಗಳಾದ ಸಂದೇಶ್ ಜವಳಿ, ಅಮರನಾಥ್ ಶೆಟ್ಟಿತಂಡ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

 

 

Categories
dasara ಉಡುಪಿ ಕರಾವಳಿ ಕಾರ್ಕಳ ಕಾರ್ಯಕ್ರಮಗಳು ದಕ್ಷಿಣ ಕನ್ನಡ ದೈವಿಕ ಪುತ್ತೂರು ಮಂಗಳೂರು ಮುಲ್ಕಿ ಹಬ್ಬಗಳು

ಕರಾವಳಿಯ ಎಲ್ಲೆಡೆ ನವರಾತ್ರಿ ರಂಗು!

ಕರಾವಳಿಯ ಎಲ್ಲೆಡೆ ನವರಾತ್ರಿ ರಂಗು!
– ಕುದ್ರೋಳಿ, ಉಚ್ಚಿಲ, ಕೊಲ್ಲೂರು, ಮಂದಾರ್ತಿ ಸೇರಿ ಎಲ್ಲೆಡೆ ವಿಶೇಷ ಪೂಜೆ
– ಉಡುಪಿ, ಬಪ್ಪನಾಡುಸೇರಿ ಎಲ್ಲೆಡೆ ದಸರಾ ವಿಶೇಷ

NAMMUR EXPRESS NEWS
ಉಡುಪಿ/ ಮಂಗಳೂರು: ಕರಾವಳಿಯ ಬಹುತೇಕ ಭಾಗದಲ್ಲಿ ನವ ರಾತ್ರಿ ಸಂಭ್ರಮ ಜೋರಾಗಿದೆ. ಎಲ್ಲಾ ಅಮ್ಮನವರ ದೇವಾಲಯಗಳಲ್ಲಿ ನವ ರಾತ್ರಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಕುದ್ರೋಳಿ, ಉಚ್ಚಿಲ, ಕೊಲ್ಲೂರು, ಮಂದಾರ್ತಿ ಸೇರಿ ಎಲ್ಲೆಡೆ ದಸರಾಗೆ ಚಾಲನೆ ಸಿಕ್ಕಿದೆ.
‘ಮಂಗಳೂರು ದಸರಾ’ ಎಂದೇ ಖ್ಯಾತಿ ಪಡೆದ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಸೋಮವಾರದಂದು ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಮುಖರ ಸಮ್ಮುಖದಲ್ಲಿ ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ಶಾರದೆ, ಆದಿಶಕ್ತಿ, ಗಣಪತಿ ಸಹಿತವಾಗಿ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಮೈಸೂರು ದಸರಾಕ್ಕೆ ಜಂಬುಸವಾರಿ ಹೇಗೋ ಹಾಗೆಯೇ ಮಂಗಳೂರು ದಸರಾಕ್ಕೆ ಹುಲಿವೇಷ ಅತ್ಯಂತ ಪ್ರಮುಖ ಮತ್ತು ಆಕರ್ಷಣೀಯ ಅಂಶ.‌ ಇದು ಕರಾವಳಿಗರ ಅಸ್ಮಿತೆಯ ಕುರುಹು ಮತ್ತು ಆ ಭಾಗದ ಪ್ರಮುಖ ಜನಪದ ಕಲೆಯಾಗಿದೆ. ರಾತ್ರಿಯ ಸಮಯದಲ್ಲಿ ವಿದ್ಯುತ್ ದೀಪಗಳ ಅಲಂಕಾರದ ನಡುವೆ ಹುಲಿವೇಷ ಸಾರ್ವಜನಿಕರಲ್ಲಿ ದಸರಾ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತು.

ಸುಳ್ಯ, ಪುತ್ತೂರು, ಕಡಬ ತಾಲ್ಲೂಕಿನ ಇಪ್ಪತ್ತೊಂದು ಗ್ರಾಮಗಳ ಮಾಗಣೆ ಕ್ಷೇತ್ರವಾದ ಜಲದುರ್ಗಾ ದೇವಿಯ ದೇವಾಲಯದಲ್ಲಿ ನವರಾತ್ರಿ ಉತ್ಸವವು ಬಲಿವಾಡು, ಅರ್ಪಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು. ಸಾಮಾನ್ಯವಾಗಿ ಭಕ್ತರು ಬೇರೆ ದೇವಾಲಯಗಳಲ್ಲಿ ಹೊರೆ ಕಾಣಿಕೆ ಮತ್ತು ಬಲಿವಾಡುವನ್ನು ತಮ್ಮಿಚ್ಛೆಯಂತೆ ಸಮರ್ಪಿಸುತ್ತಾರೆ. ಆದರೆ ಜಲದುರ್ಗದೇವಿಯ ದೇವಾಲಯದಲ್ಲಿ ಅದಕ್ಕೆಂದೇ ಒಂದು ಧಾರ್ಮಿಕ ಚೌಕಟ್ಟಿದೆ. ನವರಾತ್ರಿ ಸಮಯದಲ್ಲಿ ಪ್ರತಿ ಮನೆಯಿಂದ ಒಂದು ಕಾಯಿ, ಒಂದು ಸೇರು ಬೆಳ್ತಿಗೆ ಅಕ್ಕಿ, ಶುದ್ಧವಾದ ಎಳ್ಳೆಣ್ಣೆ, ಒಂದು ಎಳನೀರು, ಎಲೆ ಅಡಿಕೆ ಮತ್ತು 101 ರೂಪಾಯಿಯನ್ನು ತರುತ್ತಾರೆ. ಅವುಗಳನ್ನು ದೇವಾಲಯದ ಸುತ್ತು ಪೌಳಿಯ ಒಂದು ಭಾಗದಲ್ಲಿ ಬಲಿವಾಡು ಅರ್ಪಣೆಗೆಂದು ನವರಾತ್ರಿಯ ಮೊದಲ ದಿನವೇ ಹುಂಡಿಗೆ ಅರ್ಪಣೆ ಮಾಡಲಾಗುತ್ತದೆ. ಈ ದೇವಾಲಯದಲ್ಲಿ ಎಲ್ಲೆಡೆಯಂತೆ ಪ್ರತಿವರ್ಷ ಹತ್ತು ದಿನಗಳ ಕಾಲ ನವರಾತ್ರಿ ಉತ್ಸವ ಆಚರಿಸಲ್ಪಡುತ್ತದೆ. ಆದರೆ ನಾಲ್ಕು ವರ್ಷಗಳಿಗೊಮ್ಮೆ ಹನ್ನೊಂದು ದಿನಗಳ ಕಾಲ ಆಚರಣೆ ನಡೆಸುವುದು ಇಲ್ಲಿನ ವಿಶೇಷ. ಪೊಳಲಿ ರಾಜರಾಜೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಮೊದಲ ದಿನ ಭಕ್ತರಿಂದ ಹರಕೆಯ ಚಂಡಿಕಾ ಹೋಮ ರಾತ್ರಿ ಸಮಯದಲ್ಲಿ ನೆರವೇರಿತು. ಸಂಜೆಯ ಹೊತ್ತಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ ಜರುಗಿತು.

ಉಡುಪಿಯಲ್ಲಿ ವಿಶೇಷ ದಸರಾ..!

ಉಡುಪಿಯ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಾಲಯದಲ್ಲಿ ಗಣ್ಯರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ವಿಶೇಷವೆಂಬಂತೆ ಮೊದಲ ಬಾರಿಗೆ ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ‘ಉಡುಪಿ ದಸರಾ’ ಆರಂಭಗೊಂಡಿದೆ. ಇದಕ್ಕೆ ಉಡುಪಿಮಠದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂಂದ್ರ ತೀರ್ಥ ಶ್ರೀಪಾದರಿಂದ ಚಾಲನೆ ನೀಡಿದರು. ಕೊಲ್ಲೂರು ಶ್ರೀಮೂಕಾಂಬಿಕೆ ದೇವಾಲಯದಲ್ಲಿ ಪ್ರಮುಖ ಅರ್ಚಕರಾದ ನಿತ್ಯಾನಂದ ಅಡಿಗರು ಗಣಪತಿ ಪೂಜೆಯನ್ನು ನೆರವೇರಿಸುವ ಮೂಲಕ ನವರಾತ್ರಿ ಉತ್ಸವದ ಪೂಜೆಗೆ ನಾಂದಿ ಹಾಡಿದರು. ದೇಗುಲದ ವ್ಯವಸ್ಥಾಪಕ ಸಮಿತಿಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಅಧ್ಯಕ್ಷರಾದ ಬಾಬು ಶೆಟ್ಟಿ ಅವರು ಭರತನಾಟ್ಯ, ಕೂಚುಪುಡಿ, ಭಕ್ತಿ ಗೀತೆ, ಶಾಸ್ತ್ರೀಯ ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮಹಾನವಮಿಯಂದು ಬೆಳಿಗ್ಗೆ 11:30ಕ್ಕೆ ಚಂಡಿಕಾ ಯಾಗ ಹಾಗೂ 1:15ಕ್ಕೆ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯು ತಿಳಿಸಿದೆ.

Categories
Uncategorized ಕಾರ್ಯಕ್ರಮಗಳು ಚಿಕ್ಕಮಗಳೂರು ಮಲ್ನಾಡ್ ಶಿವಮೊಗ್ಗ ಹಬ್ಬಗಳು

ಕಾಫಿನಾಡಿನಾದ್ಯಂತ ದಸರಾ ಸಂಭ್ರಮ

ಕಾಫಿನಾಡಿನಾದ್ಯಂತ ದಸರಾ ಸಂಭ್ರಮ

* ಶೃಂಗೇರಿ,ಹೊರನಾಡು, ಹರಿಹರಪುರ,ಬಾಳೆಹೊನ್ನೂರಿನಲ್ಲಿ ಸಂಭ್ರಮದ ಆಚರಣೆ
* ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ದುರ್ಗಾ ಪ್ರತಿಷ್ಠಾಪನೆ

NAMMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡಿನಾದ್ಯಂತ ದಸರಾ ಸಂಭ್ರಮ ಮನೆಮಾಡಿದೆ ಜಿಲ್ಲೆಯ ಶೃಂಗೇರಿ,ಹೊರನಾಡು,ಹರಿಹರಪುರ,ಬಾಳೆಹೊನ್ನೂರು ಸೇರಿದಂತೆ ಎಲ್ಲಾ ತಾಲೂಕಿನಲ್ಲೂ ದುರ್ಗೆಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ.
ಶೃಂಗೇರಿಯಲ್ಲಿ ವೈಭವದ ಜಗತ್ಪ್ರಸಿದ್ಧ ಶ್ರೀಶಾರದಾ ಶರನ್ನವರಾತ್ರಿಗೆ ಚಾಲನೆ ದೊರೆತಿದ್ದು,ಸಾವಿರಾರು ಜನರು ಪ್ರತಿ ದಿನ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇನ್ನೊಂದು ಸುಪ್ರಸಿದ್ಧ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯದಲ್ಲೂ ಕೂಡ ಸಂಭ್ರಮದ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದ್ದು,ದೇವಿಗೆ ವಿಶೇಷ ಅಲಂಕಾರಗಳು,ಪೂಜೆಗಳು ನಡೆಯುತ್ತಿದೆ.ಪ್ರಸಿದ್ಧ ಹರಿಹರಪುರ ಕ್ಷೇತ್ರದಲ್ಲೂ ಸಡಗರದ ನವರಾತ್ರಿ ಆಚರಣೆ ಆರಂಭಗೊಂಡಿದೆ. ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲೂ ವೈಭವದ ಬಾಳೆಹೊನ್ನೂರು ದಸರಾಕ್ಕೆ ಚಾಲನೆ ದೊರೆತಿದೆ.ಕೊಪ್ಪ,ಕಳಸ,ಎನ್ ಆರ್ ಪುರ,ಮೂಡಿಗೆರೆ,ತರೀಕೆರೆ, ಕಡೂರು,ಚಿಕ್ಕಮಗಳೂರಿನಲ್ಲಿ ದುರ್ಗಾ ಪ್ರತಿಷ್ಠಾಪನೆ ಮಾಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಸಿದ್ಧ ದೇವಸ್ಥಾನಗಳಾದ ಶೃಂಗೇರಿ,ಹೊರನಾಡು,ಹರಿಹರಪುರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು,ದೇವಾಲಯದಲ್ಲಿ ವಿಶೇಷ ಪೂಜೆ,ಅಲಂಕಾರ,ಬೀದಿ ಉತ್ಸವ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

* ದಸರಾ ಸಂಭ್ರಮಕ್ಕೆ ಮಳೆಯ ಭೀತಿ
ಜಿಲ್ಲೆಯಾದ್ಯಂತ ಸಂಭ್ರಮದ ದಸರಾ ಮನೆಮಾಡಿದ್ದು ಈ ಮಧ್ಯೆ ದಸರಾ ಸಂಭ್ರಮಕ್ಕೆ ಮಳೆಯ ಭೀತಿ ಶುರುಶಾಗಿದೆ.ಮೋಡಕವಿದ ವಾತಾವರಣವಿದ್ದು ಸಂಜೆ ವೇಳೆಗೆ ಮಳೆ ಶುರುವಾಗಿ ದಸರಾ ಸಂಭ್ರಮಕ್ಕೆ ಅಡ್ಡಿಪಡಿಸುತ್ತಿದ್ದು,ದಸರಾದಲ್ಲಿ ಸಂಭ್ರಮಿಸುವ ಸಾರ್ವಜನಿಕರ ಆಸೆಗೆ ತಣ್ಣೀರೆರೆಚಿದೆ.