ಹಾಸನ ಜಿಲ್ಲೆ ಟಾಪ್ 3 ನ್ಯೂಸ್
ಬೇಲೂರಲ್ಲಿ ಆನೆ ದಾಳಿ: ಕಾರ್ಮಿಕರು ಪಾರು..!
– ಸಕಲೇಶಪುರ: ಸಾಫ್ಟ್ವೇರ್ ಇಂಜಿನಿಯರ್ ಹೃದಯಘಾತದಿಂದ ಸಾವು
– ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿ ಅದೇ ಕಾಲುವೆಗೆ ಹಾರಿದ
NAMMUR EXPRESS NEWS
ಬೇಲೂರು: ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ತಾಲೂಕಿನ ಬಿಕ್ಕೋಡು ಬಳಿ ನಡೆದಿದೆ.
ಕಾಡಾನೆಯಿಂದ ತಪ್ಪಿಸಿಕೊಳ್ಳುವಾಗ ನೇತ್ರಾವತಿ, ಮಂಜಾಕ್ಷಿ, ಅಕ್ಕಮ್ಮ ಮತ್ತು ಕಾತುರ್ ಎಂಬ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಿಕ್ಕೋಡಿನ ಲಿಂಗಾಪುರ ಎಸ್ಟೇಟ್ ಲಿಮಿಡೆಟ್ನಲ್ಲಿ ಕೆಲಸ ಮಾಡಲು ಕಾರ್ಮಿಕರು ಬಂದಿದ್ದರು. ಈ ವೇಳೆ ಬೀಟಮ್ಮ ಗ್ಯಾಂಗ್ನಿಂದ ಬೇರ್ಪಟ್ಟಿರುವ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಕಾಡಾನೆ ಬಗ್ಗೆ ಮಾಹಿತಿ ನೀಡದ ಮೇಸ್ತ್ರಿ ವಿರುದ್ಧ ಕಾರ್ಮಿಕರು ಮತ್ತವರ ಕಡೆಯವರು ಆಕ್ರೋಶ ಹೊರ ಹಾಕಿದರು. ಗಾಯಾಳುಗಳಿಗೆ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು,ಉಳಿದ ವ್ಯಾಪಾರಿಗಳು ಅರ್ಧಕ್ಕೇ ಕೆಲಸ ಮೊಟಕುಗೊಳಿಸಿ ವಾಪಸ್ಸಾದರು. ಜೀಪ್ ಅಟ್ಟಾಡಿಸಿದ ಆನೆ: ಮತ್ತೊಂದೆ ಇದೇ ತಾಲೂಕಿನ ಮುವ್ವಾಲ ಬಳಿ ಅರಣ್ಯ ಇಲಾಖೆ ಜೀಪನ್ನು ಆನೆ ಅಟ್ಟಾಡಿಸಿದೆ. ಕೂಡಲೇ ಎಚ್ಚೆತ್ತ ಚಾಲಕ ಜೀಪ್ ರಿವರ್ಸ್ ತೆಗೆದಿದ್ದರಿಂದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಸೇರಿ ಎಲ್ಲರೂ ಜೀವ ಉಳಿಸಿಕೊಂಡಿದ್ದಾರೆ. ಒಂದು ದಿನದ ಹಿಂದೆ ಓಲ್ಡ್ಬೆಲ್ಟ್ನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು, ಇದು ಗುಂಪಿನಿಂದ ಬೇರ್ಪಟ್ಟಿದ್ದರಿಂದ ರೊಚ್ಚಿಗೆದ್ದಿತ್ತು. ಬೆಳಗ್ಗೆ ಕಾರ್ಮಿಕರ ಮೇಲೆ ದಾಳಿ ಮಾಡಿದ್ದ ಈ ಆನೆ, ಆಗಿನಿಂದಲೂ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಇದನ್ನು ತಿಳಿದ ಅರಣ್ಯ ಸಿಬ್ಬಂದಿ ಅನಾಹುತ ತಪ್ಪಿಸಲು ಆನೆ ಹಿಂದೆಯೇ ಬಿದ್ದಿದ್ದಾರೆ. ಅದರ ಚಲನವಲನ ಗಮನಿಸಿ ಮಾಹಿತಿ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಈ ವೇಳೆ ಜೀಪ್ ಮೇಲೆಯೇ ದಾಳಿ ಮಾಡಲು ಆನೆ ಮುಂದಾಗಿ, ಕೆಲ ದೂರ ಅಟ್ಟಿಸಿಕೊಂಡೂ ಹೋಗಿ ವಿಫಲ ಆಯಿತು.
ಸಾಫ್ಟ್ವೇರ್ ಇಂಜಿನಿಯರ್ ಹೃದಯಘಾತದಿಂದ ಸಾವು
ಸಕಲೇಶಪುರ: ಹೃದಯಘಾತದಿಂದ ಸಾಫ್ಟ್ವೇರ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ತಾಲ್ಲೂಕಿನ, ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಮರ್ಥ್ (೨೬) ಮೃತರು.
ಕಾಫಿ ಬೆಳೆಗಾರ ಹೇಮಂತ್ ಹಾಗೂ ಸರಳ ದಂಪತಿ ಪುತ್ರರಾಗಿದ್ದ ಸಮರ್ಥ್ ಬೆಂಗಳೂರಿನಲ್ಲಿ ಸಾಫ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳುಗಳಿಂದ (ವರ್ಕ್ ಫ್ರಂ ಹೋಂ) ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆವರೆಗೂ ಕೆಲಸ ಮಾಡಿ ಮಲಗಿದ್ದರು. ಸಂಜೆ ಮೇಲೆದ್ದು ನೀರು ಕುಡಿದ ಸಮರ್ಥ್, ತಕ್ಷಣವೇ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ತಾಯಿ ಸರಳ, ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಹೇಮಂತ್ ಅವರು ವೈದ್ಯರೊಂದಿಗೆ ಮನೆಗೆ ಬಂದು ತಪಾಸಣೆ ನಡೆಸಿದರು. ಆ ವೇಳೆಗಾಗಲೇ ಹಠಾತ್ ಹೃದಯಾಘಾತದಿಂದ ಸಮರ್ಥ್ ಕೊನೆಯುಸಿರೆಳೆದಿದ್ದರು. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೇ ಈ ಘಟನೆ ಇಡೀ ಗ್ರಾಮಸ್ಥರದಲ್ಲೇ ಬೆಚ್ಚಿ ಬೀಳಿಸಿದೆ.
ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿ ಅದೇ ಕಾಲುವೆಗೆ ಹಾರಿದ!
ಬೇಲೂರು: ಎತ್ತಿನಹೊಳೆ ಯೋಜನೆಗೆ ಸ್ವಾಧೀನ ಪಡಿಸಿದ್ದ ಭೂಮಿಗೆ ಪರಿಹಾರ ಸಿಗದ ಕಾರಣ ಮನನೊಂದ ರೈತನೊಬ್ಬ ಇದೇ ಯೋಜನೆ ಕಾಮಗಾರಿ ನಡೆಯುವ ಸ್ಥಳದಲ್ಲೇ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ವಡ್ಡರಹಳ್ಳಿ ಶಿವಪುರ ಕಾವಲಿನ ರಂಗಸ್ವಾಮಿ(೫೫) ಸಾವಿಗೆ ಶರಣಾದ ರೈತ. ಘಟನೆ ವಿವರ: ಮಾದೀಹಳ್ಳಿ ಹೋಬಳಿಯ ಶಿವಪುರ ಕಾವಲಿನ ಬಳಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಶಿವಪುರ ಹಾಗೂ ವಡ್ಡರಹಳ್ಳಿ ಕೊಪ್ಪಲು ಗ್ರಾಮದ ಸುಮಾರು ೪೮ ರೈತರು ಯೋಜನೆಗೆ ಭೂಮಿ ನೀಡಿದ್ದರು. ಇವರಲ್ಲಿ ಕೆಲವರಿಗೆ ಪರಿಹಾರ ಸಿಕ್ಕಿದ್ದರೆ, ಉಳಿದವರಿಗೆ ಇನ್ನೂ ಸಿಕ್ಕಿಲ್ಲ. ಆದರೂ ಕಾಮಗಾರಿ ಮುಂದುವರಿಸಲಾಗಿತ್ತು. ಈ ಬಗ್ಗೆ ಪರಿಹಾರ ಸಿಗದ ರೈತರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ದಾಖಲಾತಿ ಸಮೇತ ಮನವಿ ಸಲ್ಲಿಸಿದ್ದರು. ಆದರೂ ಪರಿಹಾರ ಹಣ ಮಾತ್ರ ಕೈ ಸೇರಿರಲಿಲ್ಲ. ೬ ವರ್ಷದಿಂದ ವಿಳಂಬ: ರಂಗಸ್ವಾಮಿ ಅವರು ಸರ್ವೆ ನಂಬರ್ ೮೦/೨ರಲ್ಲಿ ತಮಗಿದ್ದ ೧ ಎಕರೆ ೩೨ ಕುಂಟೆ ಜಮೀನನ್ನೂ ೨೦೧೮ ರಲ್ಲೇ ಎತ್ತಿನಹೊಳೆ ಯೋಜನೆಗೆ ಕೊಟ್ಟಿದ್ದರು. ಇದಕ್ಕೆ ಅಧಿಕಾರಿಗಳೇ ನಿಗದಿ ಪಡಿಸಿದಂತೆ ೧೫,೪೨,೧೬೫ ಲಕ್ಷ ರೂ. ಪರಿಹಾರ ನೀಡಬೇಕಿತ್ತು. ೨೦೨೨ ರಲ್ಲೇ ಪರಿಹಾರದ ಅವಾರ್ಡ್ ಅನುಮೋದನೆ ಆಗಿತ್ತು. ಇದಕ್ಕಾಗಿ ಪ್ರತಿನಿತ್ಯ ಕಚೇರಿಗೆ ಅಲೆದರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಸಹನೆ ಕಳೆದುಕೊಂಡಿದ್ದ ರೈತ ಇಂಜಿನಿಯರ್ ಜೊತೆ ಜಗಳ ಸಹ ಆಡಿದ್ದರು. ಪರಿಹಾರ ಬಂದಾಗ ಕೊಡುತ್ತೇನೆ ಎಂದು ರಂಗಸ್ವಾಮಿ ಸಾಲ ಸಹ ಮಾಡಿದ್ದರು. ಆದರೆ ಇಂಜಿನಿಯರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಾಳಾಗಿ ಹೋಗಲಿ ಎಂದು ಬೇರೆಯವರ ಬಳಿ ಪಡೆದು ರಂಗಸ್ವಾಮಿ ೬೦ ಸಾವಿರ ಲಂಚವನ್ನೂ ನೀಡಿದ್ದರು. ಆದರೂ ಪರಿಹಾರ ಬಿಡುಗಡೆ ಆಗಲಿರಲ್ಲ. ಇದರಿಂದ ಮನನೊಂದು ರೈತ ಕಾಮಗಾರಿ ನಡೆಯುವ ಸ್ಥಳದಲ್ಲೇ ಕಾಲುವೆಗೆ ಹಾರಿ ಜೀವ ಕಳೆದುಕೊಂಡಿದ್ದಾನೆ.
ಪ್ರತಿಭಟನೆ: ರಂಗಸ್ವಾಮಿ ಅನ್ಯಾಯ ಮಾಡಿರುವ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿ ಸಂಬಂಧಿಕರು ಹಾಗೂ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು.